ಬೆಂಗಳೂರು: ವಿಧಾನಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ರಾಜ್ಯದಲ್ಲಿ ಸಂಪುಟ ಸರ್ಕಸ್ ತೀವ್ರಗೊಳ್ಳುತ್ತಿದೆ. ಸಂಪುಟ ವಿಸ್ತರಣೆಗೆ ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಮಧ್ಯಾಹ್ನ ದೆಹಲಿಗೆ ತೆರಳಿ ವರಿಷ್ಠರ ಜೊತೆ ಚರ್ಚೆ ನಡೆಸಲಿದ್ದಾರೆ.
ಬುಧವಾರ ಅಥವಾ ಗುರುವಾರ ಸಂಪುಟ ವಿಸ್ತರಣೆಗೆ ಗ್ರೀನ್‌ಸಿಗ್ನಲ್..?
ಬುಧವಾರ ಅಥವಾ ಗುರುವಾರ ಸಿಎಂ ಬಸವರಾಜ ಬೊಮ್ಮಾಯಿ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ಅವರ ಜತೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಪ್ರತ್ಯೇಕ ಈಗಾಗಲೇ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಚುನಾವಣೆ ದೃಷ್ಟಿಯಲ್ಲಿ ವರಿಷ್ಠರ ʻಹೊಸʼ ತಂತ್ರ..!?
ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಸರ್ಕಾರದಲ್ಲಿ ಕೆಲವೊಂದಿಷ್ಟು ಬದಲಾವಣೆಗಳನ್ನು ಮಾಡಲು ಪಕ್ಷದ ವರಿಷ್ಠರು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೊಮ್ಮಾಯಿ ಸಂಪುಟದಲ್ಲಿ ಸದ್ಯ ನಾಲ್ಕು ಸಚಿವರ ಸ್ಥಾನಗಳು ಖಾಲಿ ಇವೆ. ಹೀಗಾಗಿ ಕೇವಲ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡಲು ಹೈಕಮಾಂಡ್ ಅನುಮತಿ ಕೊಡುತ್ತೋ ಅಥವಾ ಕೆಲ ಹಿರಿಯ ಸಚಿವರ ರಾಜೀನಾಮೆ ಪಡೆದು ಹೊಸಬರಿಗೆ ಮಣೆ ಹಾಕುತ್ತೋ ಎಂಬುದನ್ನು ಕಾದು ನೋಡಬೇಕಿದೆ.
ವರಿಷ್ಠರ ಬಳಿ ಸಿಎಂ ಬೊಮ್ಮಾಯಿ ಕ್ಯಾಬಿʼನೆಟ್ʼ ಪ್ರ್ಯಾಕ್ಟೀಸ್..!?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಯಿಂದ ವಾಪಾಸ್ ಬರುವ ದಿನಾಂಕ ಮತ್ತು ಸಮಯವನ್ನು ಕಾಯ್ದಿರಿಸಿದ್ದಾರೆ. ಅದಕ್ಕೆ ಕಾರಣವಾಗಿರೋದು ಸಂಪುಟ ವಿಸ್ತರಣೆ ವೇಳೆ ಹಿರಿಯ ಸಚಿವರನ್ನು ಕೈಬಿಟ್ಟು ಪಕ್ಷಕ್ಕಾಗಿ ಶ್ರಮಿಸುತ್ತಿರುವವರಿಗೆ ಆದ್ಯತೆ ನೀಡಬೇಕು ಎಂಬ ಒತ್ತಡ ಸಹಜವಾಗೇ ಸಿಎಂ ಮೇಲಿದೆ. ಹೀಗಾಗಿ ಹೇಗಾದರೂ ಮಾಡಿ ಪಕ್ಷದ ವರಿಷ್ಠರಿಂದ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಗ್ರೀನ್‌ಸಿಗ್ನಲ್ ಪಡೆಯಲೇಬೇಕು ಎಂಬ ಒತ್ತಡದಲ್ಲಿ ಸಿಎಂ ಬೊಮ್ಮಾಯಿ ಅವರಿದ್ದಾರೆ. ಹೀಗಾಗಿಯೇ ದೆಹಲಿಯಿಂದ ವಾಪಸ್ ಬರುವ ದಿನಾಂಕ ಮತ್ತು ಸಮಯವನ್ನು ಬೊಮ್ಮಾಯಿ ಅವರು ಕಾಯ್ದಿರಿಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಮಂಗಳವಾರ ಸಂಜೆ ಕೇಂದ್ರ ಸಚಿವ ಶೇಖಾವತ್-ಬೊಮ್ಮಾಯಿ ಭೇಟಿ
ಮಂಗಳವಾರ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಲಿದ್ದಾರೆ. ಭೇಟಿ ವೇಳೆ ಮೇಕೆದಾಟು ಯೋಜನೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ವಿಚಾರಗಳ ಸಂಬಂಧ ಕೇಂದ್ರ ಸಚಿವರ ಜೊತೆ ಸಿಎಂ ಬೊಮ್ಮಾಯಿ ಚರ್ಚೆ ನಡೆಸಲಿದ್ದಾರೆ. ಭೇಟಿ ವೇಳೆ ಸರ್ವಪಕ್ಷ ಸಭೆ ಬಗ್ಗೆಯೂ ಬೊಮ್ಮಾಯಿ ಅವರು ಕೇಂದ್ರ ಜಲ ಶಕ್ತಿ ಸಚಿವರಿಗೆ ಮಾಹಿತಿ ನೀಡಲಿದ್ದಾರೆ.