Site icon Vistara News

Hassan Accident: ಮದುವೆಗೆ ಹೋಗಿ ಬರುತ್ತಿದ್ದ ಮಿನಿ ಬಸ್ ಪಲ್ಟಿ; 12 ಮಂದಿಗೆ ಗಾಯ

Mini bus accident near hassan

#image_title

ಹಾಸನ: ಮದುವೆಗೆ ಜನರನ್ನು ಕರೆದೊಯ್ದು ವಾಪಸ್ ಬರುತ್ತಿದ್ದ ಮಿನಿ ಬಸ್ ಪಲ್ಟಿಯಾಗಿ 12 ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಶಾಂತಿಗ್ರಾಮ ಹೋಬಳಿಯ ಕಾರೇಕೆರೆ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಬುಧವಾರ ನಡೆದಿದೆ. ಗಾಯಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

ಹಾಸನದ ಗುಂಡೇಗೌಡನಕೊಪ್ಪಲು ನಿವಾಸಿಗಳು ಚನ್ನರಾಯಪಟ್ಟಣಕ್ಕೆ ಮದುವೆಗೆ ಹೋಗಿ ವಾಪಸ್ ಬರುತ್ತಿದ್ದ ವೇಳೆ ಅಪಘಾತ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಮಿನಿ ಬಸ್ ಪಲ್ಟಿಯಾಗಿದ್ದರಿಂದ 12 ಮಂದಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಶಾಂತಿಗ್ರಾಮ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಖಾಸಗಿ ಬಸ್ ವೇಗದ ಧಾವಂತಕ್ಕೆ ವಿದ್ಯಾರ್ಥಿ ಬಲಿ

ಮಂಗಳೂರು: ಖಾಸಗಿ ಬಸ್ ವೇಗದ ಧಾವಂತಕ್ಕೆ ವಿದ್ಯಾರ್ಥಿ ಬಲಿಯಾಗಿರುವುದು ಮೂಡಬಿದಿರೆಯ ಎಡಪದವು ಎಂಬಲ್ಲಿ ನಡೆದಿದೆ. ಬೈಕ್‌ಗೆ ಬಸ್ ಡಿಕ್ಕಿಯಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾರ್ತಿಕ್ ಆಚಾರ್ಯ ಮೃತ ವಿದ್ಯಾರ್ಥಿ. ಅಫಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬಸ್ ಚಾಲಕನ ಅಜಾಗರೂಕತೆಯ ಚಾಲನೆಯಿಂದಲೇ ಅಪಘಾತ ಸಂಭವಿಸಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಫೋಟೋ ತೆಗೆಯಲು ಹೋಗಿ ಯುವಕ ನೀರುಪಾಲು

ಕಾರವಾರ: ಕುಮಟಾ ತಾಲೂಕಿನ ವನ್ನಳ್ಳಿ ಕಡಲತೀರದಲ್ಲಿ ಘಟನೆ ಫೋಟೊ ತೆಗೆಯಲು ಹೋಗಿ ಯುವಕನೊಬ್ಬ ನೀರುಪಾಲಾಗಿರುವ ಘಟನೆ ನಡೆದಿದೆ. ಬೆಳಗಾವಿ ಮೂಲದ ಜುಬೇದಾರ್ (27) ಮೃತ ದುರ್ದೈವಿ. ವೆಲ್ಡಿಂಗ್‌ ಕೆಲಸಕ್ಕೆಂದು ಬೆಳಗಾವಿಯಿಂದ ಕುಮಟಾಕ್ಕೆ ಬಂದಿದ್ದ ಯುವಕರು, ಕಡಲತೀರದ ಬಂಡೆಗಳ ಮೇಲೆ ನಿಂತು ಫೋಟೋ ತೆಗೆದುಕೊಳ್ಳಲು ಮುಂದಾಗಿದ್ದರು. ಈ ವೇಳೆ ಸ್ನೇಹಿತರೊಂದಿಗೆ ಸೇರಿ ಬಂಡೆ ಮೇಲೆ ನಿಂತು ಜುಬೇದಾರ್ ಫೋಟೊ ತೆಗೆದುಕೊಳ್ಳುವಾಗ ಕಾಲು ಜಾರಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದಾನೆ. ಸ್ಥಳೀಯರ ಸಹಾಯದಿಂದ ಪೊಲೀಸರು ಯುವಕನ ಮೃತದೇಹ ಹೊರಕ್ಕೆ ತೆಗೆದಿದ್ದಾರೆ.

ಇದನ್ನೂ ಓದಿ | Crime : ಬಾಡಿಗೆ ಸರಿಯಾಗಿ ಕೊಡಲಿಲ್ಲವೆಂದು ಕುಡುಕನ್ನೇ ರೇಪ್​ ಮಾಡಿದ ಆಟೋ ಚಾಲಕ!

ಕಾರು ಡಿಕ್ಕಿಯಾಗಿ ಪಾದಚಾರಿ ಸಾವು

ಹುಬ್ಬಳ್ಳಿ: ತಾಲೂಕಿನ ಶಿರಗುಪ್ಪಿ ಗ್ರಾಮದ ಬಳಿ ಕಾರು ಹೊಡೆದು ಪಾದಚಾರಿಯೊಬ್ಬರು ಮೃತಪಟ್ಟಿದ್ದಾರೆ. ಶಿರಗುಪ್ಪಿ ಗ್ರಾಮದ ಬಸವರಾಜ ಮಲನಾಡ‌ ಮೃತರು. ರಸ್ತೆ ದಾಟುತ್ತಿದ್ದಾಗ ಕಾರು ವೇಗವಾಗಿ ಬಂದು ಡಿಕ್ಕಿಯಾಗಿದ್ದರಿಂದ ಪಾದಚಾರಿ ಕೊನೆಯುಸಿರೆಳೆದಿದ್ದಾರೆ. ಅಪಘಾತ ಬಳಿಕ ಶಿರಗುಪ್ಪಿ ಗ್ರಾಮಸ್ಥರು ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ವಿದ್ಯುತ್‌ ಸ್ಪರ್ಶಿಸಿ ಲೈನ್ ಮ್ಯಾನ್ ಸಾವು

ಧಾರವಾಡ: ಕೆಲಸದ ವೇಳೆ ವಿದ್ಯುತ್‌ ಸ್ಪರ್ಶಿಸಿ ಲೈನ್ ಮ್ಯಾನ್‌ ಮೃತಪಟ್ಟಿರುವುದು ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಸಂಜೆ ಕಂಬ ಹತ್ತಿ ಕೆಲಸ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ಅವಘಡ ನಡೆದಿದೆ. ಧಾರವಾಡ ತಾಲೂಕಿನ ಶಿಬಾರಗಟ್ಟಿ ಗ್ರಾಮದ ನಿವಾಸಿ ನಿಜಗುಣಿ ಗಿರಿಯಪ್ಪನವರ ಮೃತರು. ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

Exit mobile version