ಬೆಂಗಳೂರು: ಏಪ್ರಿಲ್ 4ರಂದು ಜೆ.ಜೆ.ನಗರದಲ್ಲಿ ನಡೆದಿದ್ದ ಚಂದ್ರು ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಹತ್ಯೆಯಾದ ಚಂದ್ರು ಸ್ನೇಹಿತ ಸೈಮನ್ ರಾಜ್ ಜೆ.ಜೆ,ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿ ಶಾಹಿದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಸೈಮನ್ ನೀಡಿರುವ ದೂರಿನಲ್ಲಿ ಏನಿದೆ..?
ಏಪ್ರಿಲ್ 4ರ ಮಧ್ಯರಾತ್ರಿ 12 ಗಂಟೆಗೆ ಸ್ನೇಹಿತ ಸೈಮನ್ ರಾಜ್ ಮನೆಗೆ ತೆರಳಿದ್ದ ಚಂದ್ರು ಕೇಕ್ ಕಟ್ ಮಾಡಿಸಿ ಹುಟ್ಟುಹಬ್ಬ ಆಚರಿಸಿದ್ದ. ಬಳಿಕ ಚಿಕನ್ ರೋಲ್ ಕೊಡಿಸು ಎಂದು ಕೇಳಿದ್ದ ಸ್ನೇಹಿತ ಸೈಮನ್‌ನನ್ನು ಚಂದ್ರು ಕೇಳಿದ್ದ. ಬಳಿಕ ಚಿಕನ್ ರೋಲ್ ತರಲು ಸೈಮನ್ ರಾಜ್ ಹಾಗೂ ಚಂದ್ರು ಇಬ್ಬರು ಹೋಂಡಾ ಆಕ್ಟೀವಾ ಬೈಕ್‌ನಲ್ಲಿ ತೆರಳಿದ್ದರು. ಚಾಮರಾಜಪೇಟೆ ಸುತ್ತಮುತ್ತ ಸುತ್ತಾಡಿದ್ದ ಸ್ನೇಹಿತರು ಬಳಿಕ ರಂಜಾನ್ ಹಿನ್ನಲೆ ಗೋರಿಪಾಳ್ಯದಲ್ಲಿ ಸಿಗುತ್ತೆ ಎಂದು ಮಧ್ಯರಾತ್ರಿ 2.15ರ ಸುಮಾರಿನಲ್ಲಿ ಹಳೇ ಗುಡ್ಡದಹಳ್ಳಿಗೆ ಹೋಗಿದ್ದರು.
ಹಳೇ ಗುಡ್ಡದಹಳ್ಳಿಯ 9ನೇ ಮುಖ್ಯರಸ್ತೆಯಲ್ಲಿ ಹೋಗುವಾಗ ಚಂದ್ರು ಬೈಕ್‌ಗೆ ಆರೋಪಿಗಳ ಬೈಕ್ ಡಿಕ್ಕಿ ಹೊಡೆದಿದೆ. ಇದನ್ನು ಚಂದ್ರು ಹಾಗೂ ಸೈಮನ್ ಏರುಧ್ವನಿಯಲ್ಲಿ ಪ್ರಶ್ನೆ ಮಾಡಿದ್ದರು. ಈ ವೇಳೆ ಆರೋಪಿ ಶಾಹಿದ್ ಅದನ್ನ ಕೇಳಲು ನೀವು ಯಾರು ಎಂದು ಅವಾಚ್ಯ ಪದಗಳಿಂದ ಬೈದಿದ್ದ. ನಾನು ಇದೇ ಏರಿಯಾದವನು, ಏನ್ ಮಾಡಿಕೊಳ್ತೀಯಾ ಎಂದು ಅಲ್ಲಿನ ಕೆಲವರನ್ನು ಸೇರಿಸಿಕೊಂಡು ಶಾಹಿದ್ ಗಲಾಟೆ ಕೂಡ ಮಾಡಿದ್ದ.
ಆರೋಪಿ ಶಾಹಿದ್ ಹಾಗೂ ಕೆಲವರು ಚಂದ್ರು ಹಾಗೂ ಸೈಮನ್ ಇಬ್ಬರನ್ನು ತಳ್ಳಾಡಿದ್ದಾರೆ. ಅಲ್ಲದೆ, ಶಾಹಿದ್ ಮತ್ತು ಆತನ ಸಹಚರರು ಏಕಾಏಕಿ ಲಾಂಗ್ ಬೀಸಿದ್ದಾರೆ. ಈ ವೇಳೆ ಸೈಮನ್ ತಪ್ಪಿಸಿಕೊಂಡಿದ್ದ. ಆದರೆ ಚಂದ್ರು ತೊಡೆಗೆ ಶಾಹಿದ್ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವ ಆಗೋದನ್ನ ನೋಡಿ ಶಾಹಿದ್ & ಆತನ ಗ್ಯಾಂಗ್ ಸ್ಥಳದಿಂದ ಕಾಲ್ಕಿತ್ತಿದೆ.
ಬಳಿಕ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಚಂದ್ರುನನ್ನು ಆತನ ಸ್ನೇಹಿತ ಸೈಮನ್ ರಾಜ್ ಆಟೋದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಮುಂಜಾನೆ 4 ಗಂಟೆ ಸುಮಾರಿನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಚಂದ್ರು ಮೃತಪಟ್ಟಿದ್ದಾನೆಂದು ಆಸ್ಪತ್ರೆ ವೈದ್ಯರು ತಿಳಿಸಿದರು ಎಂದು ಸ್ನೇಹಿತ ಸೈಮನ್ ರಾಜ್ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಗಳ ಬಂಧನ: ಕಮಲ್ ಪಂತ್
ಜೆ.ಜೆ.ನಗರ ಯುವಕನ ಕೊಲೆ ಪ್ರಕರಣ ಸಂಬಂದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಪ್ರತಿಕ್ರಿಯಿಸಿದ್ದಾರೆ. ಏಪ್ರಿಲ್ 4ರ ಮಧ್ಯರಾತ್ರಿ ಸೈಮನ್ ರಾಜ್ ಮತ್ತು ಚಂದ್ರು ಊಟಕ್ಕೆ ಹೋಗಿದ್ದರು. ಈ ವೇಳೆ ಶಾಹಿದ್ ಗಾಡಿಗೆ ಟಚ್ ಆಗಿ ವಾದ-ವಿವಾದ ನಡೆದಿದೆ. ಇದೇ ವಿಚಾರವಾಗಿ ಗಲಾಟೆಯಾಗಿ ಕೊಲೆಯಾಗಿದೆ. ಪೊಲೀಸ್ ತನಿಖೆಯಲ್ಲಿ ಮೂವರು ಇರುವುದು ಗೊತ್ತಾಗಿದೆ. ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದರು.
ಕೊಲೆಯಾದ ಚಂದ್ರು ಸ್ನೇಹಿತ ಸೈಮನ್ ರಾಜ್ ನೀಡಿರುವ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಂಡಿರುವ ಜೆ.ಜೆ.ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.