ಬೆಂಗಳೂರು: ಸನ್ಯಾಸಿಯಾಗಿದ್ದುಕೊಂಡೆ ರಾಜಕೀಯ ಪ್ರವೇಶಿಸಿ ಮುಖ್ಯಮಂತ್ರಿಯಾಗಿ ಎರಡನೇ ಬಾರಿ ಆಯ್ಕೆಯಾದ ಯೋಗಿ ಆದಿತ್ಯನಾಥರ ಉದಾಹರಣೆ ಒಂದೆಡೆಯಾದರೆ, ರಾಜ್ಯದಲ್ಲಿ ಮಾಜಿ ಸಚಿವರೊಬ್ಬರು ರಾಜಕೀಯವನ್ನು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸುತ್ತಿದ್ದಾರೆ.
ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿದ್ದು, ಕರ್ನಾಟಕ ಯೋಜನಾ ಆಯೋಗದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಬಿ.ಜೆ.ಪಿ. ಹಿರಿಯ ನಾಯಕ ಬಿ.ಜೆ. ಪುಟ್ಟಸ್ವಾಮಿ ಅವರು ಮೇ 15ರಂದು ಗಾಣಿಗ ಸಮುದಾಯದ ಮೊದಲ ಪೀಠಾಧಿಪತಿಯಾಗಲಿದ್ದಾರೆ.
1982ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಬಿ.ಜೆ. ಪುಟ್ಟಸ್ವಾಮಿಒಟ್ಟಾರೆ 45 ವರ್ಷದ ರಾಜಕೀಯ ಜೀವನ ನಡೆಸಿದ್ದಾರೆ. ಈ ಅವಧಿಯಲ್ಲಿ ಶಾಸಕ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿ, 2012ರಲ್ಲಿ ಮತ್ತೆ ವಿಧಾನ ಪರಿಷತ್ ಸದಸ್ಯರಾಗಿ, ಸಹಕಾರ ಸಚಿವರಾಗಿ, 2019ರಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಬಿಜೆಪಿ ಸಂಘಟನೆಯಲ್ಲೂ ತೊಡಗಿಸಿಕೊಂಡು ಒಬಿಸಿ ಮೋರ್ಚಾ ಅಧ್ಯಕ್ಷರಾಗಿದ್ದರು.
ಗಾಣಿಗ ಸಮುದಾಯದ ಸಂಘಟನೆಯಲ್ಲಿ ಅನೇಕ ವರ್ಷಗಳಿಂದಲೂ ಗುರುತಿಸಿಕೊಂಡಿರುವ ಪುಟ್ಟಸ್ವಾಮಿ, ಬಿ.ಎಸ್. ಯಡಿಯೂರಪ್ಪ ಅವರ ಆಪ್ತರು ಎಂದೇ ಗುರುತಿಸಿಕೊಂಡವರು. ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕೆಜೆಪಿ ಸ್ಥಾಪಿಸಿದಾಗ ಅವರ ಜತೆಗೇ ತೆರಳಿದ್ದರು, ಮತ್ತೆ ಅವರ ಜತೆಗೇ ಬಿಜೆಪಿಗೆ ವಾಪಸಾದರು. ಯಡಿಯೂರಪ್ಪ ಅವರ ವಿರುದ್ಧ ಯಾವುದೇ ಆರೋಫ ಎದುರಾದಾಗಲೂ ಅದರ ಸಮರ್ಥನೆಗಾಗಿ ಸುದ್ದಿಗೋಷ್ಠಿ, ನ್ಯಾಯಾಲಯದಲ್ಲಿ ಹೋರಾಟಕ್ಕೆ ಮುಂದಾಗುತ್ತಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಗಾಣಿಗ ಸಮುದಾಯದ ಗುರುಪೀಠ ಮತ್ತು ಶೈಕ್ಷಣಿಕ ಸಂಸ್ಥೆ ಸ್ಥಾಪಿಸಲು 8 ಎಕರೆ ಜಮೀನು ಹಾಗೂ 5 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿಸಿಕೊಂಡಿದ್ದರು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅನುದಾನ ಬಿಡುಗಡೆಯಾಗಿತ್ತು.
ಶ್ರೀ ಪೂರ್ಣಾನಂದಪುರಿ ಸ್ವಾಮೀಜಿ
ಗಾಣಿಗ ಸಮುದಾಯದ ಮೊದಲ ಪೀಠಾಧಿಪತಿಯಾಗಲಿರುವ ಬಿ.ಜೆ. ಪುಟ್ಟಸ್ವಾಮಿ ಅವರಿಗೆ ಶ್ರೀ ಪೂರ್ಣಾನಂದಪುರಿ ಸ್ವಾಮೀಜಿ ಎಂದು ನಾಮಕರಣ ಮಾಡಲಾಗುತ್ತದೆ. ಮೇ 15ರಂದು ಬೆಂಗಳೂರು ಉತ್ತರ ಹೋಬಳಿ ಮಾದನಾಯಕನಹಳ್ಳಿ ಅಂಚೆಯ ನಗರೂರು ಗ್ರಾಮ ಬಡಾವಣೆಯಲ್ಲಿರುವ ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಆವರಣದಲ್ಲಿ ಪ್ರಥಮ ಪೀಠಾಧಿಪತಿಯಾಗಿ ಪಟ್ಟಾಭಿಷೇಕ ನೆರವೇರಲಿದೆ.
ಹೆಚ್ಚಿನ ಓದು: ಕಾಂಗ್ರೆಸ್‍ನವರು ನ್ಯಾಯಾಲಯದ ಪರ ಇದ್ದಾರೆಯೇ, ವಿರುದ್ಧ ಇದ್ದಾರೆಯೇ ಎಂಬುದನ್ನು ತಿಳಿಸಬೇಕು: ಸಿ.ಟಿ.ರವಿ