Site icon Vistara News

ಕೋಡಿಮಠ ಸ್ವಾಮೀಜಿ, ಕುಮಾರಸ್ವಾಮಿ, ಸಿದ್ದರಾಮಯ್ಯ ಎಲ್ಲ ಒಂದೆ: ಯಾರ ಮಾತೂ ಗಂಭೀರವಲ್ಲ ಎಂದ ಪ್ರತಾಪ್‌ ಸಿಂಹ

Pratap Simha ಮಂಗಳೂರು ಸ್ಫೋಟ narasimharaja constituency combing operation

ಬೆಂಗಳೂರು: ರಾಜ್ಯದ ಯಾವುದೇ ವಿಚಾರದಲ್ಲಿ ಕೋಡಿಮಠ ಸ್ವಾಮೀಜಿ, ಕುಮಾರಸ್ವಾಮಿ, ಸಿದ್ದರಾಮಯ್ಯ ಮೂವರ ಮಾತಿನಲ್ಲೂ ಯಾವುದೇ ಸ್ಪಷ್ಟತೆ ಇರುವುದಿಲ್ಲ, ನಿಖರತೆ ಇರುವುದಿಲ್ಲ. ಇವರ ಮಾತುಗಳನ್ನು ಅದಕ್ಕಾಗಿಯೇ ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ವಿಚಾರಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ವಿರುದ್ಧ ಎಚ್‌.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ವಾಗ್ದಾಳಿ ನಡೆಸುತ್ತಿದ್ದಾರೆ. ರಾಜ್ಯ ಹಾಗೂ ದೇಶದ ಕುರಿತು ಭವಿಷ್ಯ ಹೇಳುವ ಹಾಸನದ ಕೋಡಿಮಠದ ಸ್ವಾಮೀಜಿಯವರು, ಈ ವರ್ಷ ಅನೇಕ ಅನಾಹುತಗಳು ಸಂಭವಿಸುತ್ತವೆ ಎಂದು ತಿಳಿಸಿದ್ದರು.

ಇವೆಲ್ಲದವನ್ನೂ ಒಟ್ಟುಗೂಡಿಸಿ ಪ್ರತಿಕ್ರಿಯೆ ನೀಡಿರುವ ಪ್ರತಾಪ್‌ ಸಿಂಹ, ಮೂವರ ಮಾತನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂಕ ಬಸವಣ್ಣ ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಮಾತಿಗೆ ತಿರುಗೇಟು ನೀಡಿರುವ ಪ್ರತಾಪ್‌ ಸಿಂಹ, ನಮ್ಮ ಮುಖ್ಯಮಂತ್ರಿ ಮಾತನಾಡುವ ಬಸವಣ್ಣ ಅಲ್ಲ, ದುಡಿಯುವ ಬಸವಣ್ಣ. ರಾಜ್ಯದ ಆರೂವರೆ ಕೋಟಿ ಜನರ ಅಭಿವೃದ್ಧಿ ನೊಗವನ್ನು ಹೊತ್ತು ಎಳೆಯುತ್ತಿದ್ದಾರೆ.

ಮೈಸೂರಿನ ಏರ್‌ಪೋರ್ಟ್ ವಿಸ್ತರಣೆ, ಕೆ.ಆರ್.ಆಸ್ಪತ್ರೆ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನವನ್ನು ಕೊಟ್ಟಿದ್ದಾರೆ.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕು ಎಂಬ ಕಾರಣಕ್ಕೆ ಕಟ್ಟಡಕ್ಕೆ ಅನುದಾನ ನೀಡುವುದಾಗಿ ಹೇಳಿದ್ದಾರೆ.
ಹೀಗೆ ದುಡಿಮೆಯೇ ಮಾಡುತ್ತಿರುವ ಬಸವಣ್ಣನ ಬಗ್ಗೆ, ಮನೆ, ಹೊಲ- ಗದ್ದೆಯ ಗಿಡಮರದ ಮೇಲೆ ಕುಳಿತು ಕರ್ಕಶವಾಗಿ ಕೂಗುವವರಿಗೆ ಇದು ಅರ್ಥ ಆಗುವುದಿಲ್ಲ ಎಂದು ಹೇಳಿದರು.

ಹೆಚ್ಚಿನ ಓದು: ಮುಸ್ಲಿಮರು ಕತ್ತರಿಸಿದ ಮಾಂಸವನ್ನೇ ನಾವು ಸೇವಿಸೋದು: ಸಿದ್ದರಾಮಯ್ಯ

ಮೈಸೂರಿನಲ್ಲಿ ಸಾಮರಸ್ಯದ ಸಭೆ ನಡೆಸಿದ ಎಚ್‌.ಡಿ. ಕುಮಾರಸ್ವಾಮಿಯವರ ಕುರಿತು ಮಾತನಾಡಿದ ಪ್ರತಾಪ್‌ ಸಿಂಹ, ಹಿಜಾಬ್ ವಿಚಾರ ಬಂದಾಗ ಪ್ರತಿಪಕ್ಷಗಳು ಯಾಕೆ ಆ ಸಮುದಾಯಕ್ಕೆ ಬುದ್ಧಿ ಹೇಳಲಿಲ್ಲ? ಸಮವಸ್ತ್ರ ಎಲ್ಲರಿಗೂ ಕಡ್ಡಾಯ, ಅದನ್ನು ಪಾಲಿಸಿ ಎಂದು ಪ್ರತಿಪಕ್ಷಗಳು ಹೇಳಿದ್ದರೆ ರಾಜ್ಯದಲ್ಲಿ ವಿವಾದಗಳೇ ಸೃಷ್ಟಿಯಾಗುತ್ತಿರಲಿಲ್ಲ. ಇಲ್ಲದ ಕಾನೂನಿನ ಕಥೆ ಹೇಳಿಕೊಟ್ಟು ಗೊಂದಲ ಸೃಷ್ಟಿಗೆ ಕಾರಣವಾದವರು ಇವರು.
ಈಗ ಸರ್ವ ಜನಾಂಗದ ಸಾಮರಸ್ಯದ ಸಭೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿಯವರಿಗೆ ಈ ವಿಚಾರಗಳಲ್ಲಿ ಸ್ಪಷ್ಟತೆ ಇಲ್ಲ. ವಿವಾದಗಳನ್ನು ಎಬ್ಬಿಸಿ ಹಿಂದೂಗಳ ಧ್ರುವೀಕರಣ ಮಾಡುವ ಅವಶ್ಯಕತೆ ಬಿಜೆಪಿಗೆ ಇಲ್ಲ.
ಹಿಂದೂ, ಮುಸ್ಲಿಂ ಮತ ವಿಭಜನೆ, ಮತ ಕ್ರೋಢೀಕರಣ ಶುರುವಾಗಿದ್ದು ವಿಪಕ್ಷಗಳಿಂದ ಹೊರತು ಬಿಜೆಪಿಯಿಂದಲ್ಲ ಎಂದು ಹೇಳಿದರು.

https://vistaranews.com/wp-content/uploads/2022/04/WhatsApp-Video-2022-04-08-at-12.31.22-PM.mp4
Exit mobile version