Site icon Vistara News

Leopard attack | ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ: ಸಿಎಂ ಬೊಮ್ಮಾಯಿ ಘೋಷಣೆ

CM Chirathe

ಬೆಂಗಳೂರು: ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬದವರಿಗೆ 15 ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ. ರಾಜ್ಯಾದ್ಯಂತ ಮತ್ತು ಅದರಲ್ಲೂ ಮುಖ್ಯವಾಗಿ ರಾಜಧಾನಿಯಲ್ಲೇ ಚಿರತೆ ದಾಳಿ ವಿಪರೀತವಾಗಿರುವ ಹಿನ್ನೆಲೆಯಲ್ಲಿ ವಿದ್ಯಮಾನವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ.

ಆನೆ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ ನೀಡಿದಂತೆ ಚಿರತೆ ದಾಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೂ ಪರಿಹಾರ ಒದಗಿಸಲಾಗುವುದು. ಮೊದಲು ಕಾಡುಗಳ ಪಕ್ಕದಲ್ಲಿ ಚಿರತೆ ದಾಳಿ ಆಗುತ್ತಿತ್ತು. ಈಗ ಬೆಂಗಳೂರಿನ ಆಸುಪಾಸಿನಲ್ಲಿ ಆಗುತ್ತಿರುವುದನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಕಳೆದ ಹಲವಾರು ದಿನಗಳಿಂದ ಅದರ ಬೇಟೆಯಾಡಲು ಪ್ರಯತ್ನ ಮಾಡಲಾಗುತ್ತಿದ್ದು ಅದಕ್ಕೆ ಬಲೆಯನ್ನೂ ಹಾಕಲಾಗಿದೆ. ಅದನ್ನು ಜೀವಂತವಾಗಿ ಹಿಡಿದು ಕಾಡಿಗೆ ಬಿಡಲು ಇಲಾಖೆಗೆ ಸೂಚನೆ ನೀಡಿರುವುದಾಗಿ ತಿಳಿಸಿದರು. ಅವರು ಶನಿವಾರ ಬೆಳಗ್ಗೆ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

ವಿಶೇಷ ತಂಡ ರಚನೆ
ಬೆಂಗಳೂರು ಹಾಗೂ ಮೈಸೂರು ವಲಯದಲ್ಲಿ ಆನೆ ಕಾರಿಡಾರ್‌ ಸುತ್ತಮುತ್ತ ಚಿರತೆಗಳೂ ಇವೆ. ಚಿರತೆ ದಾಳಿ ಆಗುತ್ತಿರುವುದನ್ನು ತಡೆಯಲು ವಿಶೇಷ ತಂಡವನ್ನು ರಚಿಸಲಾಗಿದ್ದು, ನಿರ್ದಿಷ್ಟವಾಗಿ ಕ್ರಮಕೈಗೊಳ್ಳಲು ತಿಳಿಸಲಾಗಿದೆ. ಅವುಗಳನ್ನು ನಿಯಂತ್ರಿಸಲು ಹಾಗೂ ಕಾಡು ಬಿಟ್ಟು ಆಚೆ ಬಂದಿರುವ ಚಿರತೆಗಳನ್ನು ಹಿಡಿಯಲು ತಂಡ ಕಾರ್ಯಾಚರಣೆ ಮಾಡಲಿದೆ ಎಂದು ಸಿಎಂ ತಿಳಿಸಿದರು.

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಆತಂಕ ಜೋರಾಗಿದೆ. ಅದರಲ್ಲೂ ಮುಖ್ಯವಾಗಿ ಮೈಸೂರಿನ ಟಿ. ನರಸೀಪುರದಲ್ಲಿ ಚಿರತೆಯೊಂದು ಮನೆಯ ಪಕ್ಕದಲ್ಲೇ ಇದ್ದ ಯುವತಿಯನ್ನು ಕೊಂದು ಹಾಕಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲಿ ಚಿರತೆಯನ್ನು ಜೀವಂತವಾಗಿ, ಇಲ್ಲವೇ ಶವವಾಗಿ ಹಿಡಿಯಲು ಆದೇಶ ನೀಡಲಾಗಿದೆ.

ಇದನ್ನೂ ಓದಿ | Leopard attack | ಯುವತಿಯ ಬಲಿ ಪಡೆದ ಚಿರತೆಯನ್ನು ಗುಂಡಿಟ್ಟು ಸಾಯಿಸಲೂ ಪರ್ಮಿಷನ್‌ ಸಿಕ್ಕಿದೆ ಎಂದ ಅರಣ್ಯಾಧಿಕಾರಿ

Exit mobile version