ಬೆಂಗಳೂರು: ಹಿಜಾಬ್, ಹಲಾಲ್ ವಿವಾದದ ನಂತರ ಭಾರತೀಯ ಜನತಾ ಪಕ್ಷದ(BJP) ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಮಾಜಿ CM ಎಚ್.ಡಿ. ಕುಮಾರಸ್ವಾಮಿ (H. D. Kumaraswamy), ಹಿಂದಿ ವಿಚಾರದಲ್ಲಿ BJPಯನ್ನು ಬ್ರಿಟಿಷರಿಗೆ ಹೋಲಿಕೆ ಮಾಡಿದ್ದಾರೆ.
ಶನಿವಾರ ಬೆಳಗ್ಗೆ ಸರಣಿ ಟ್ವೀಟ್‌ಗಳ ಮೂಲಕ ವಾಗ್ದಾಳಿ ನಡೆಸಿರುವ ಕುಮಾರಸ್ವಾಮಿ, ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡು ಕಳೆದ 75 ವರ್ಷಗಳಿಂದ ಒಂದೇ ತಾಯಿಯ ಮಕ್ಕಳಂತೆ ಇರುವ ರಾಜ್ಯಗಳ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಷಾ (AmitShah) ಅವರು ಹುಳಿ ಹಿಂಡಿ, ಹಿಂದಿ ಹೇರಿಕೆ ಬಗ್ಗೆ ಹೇಳಿಕೆ ನೀಡುತ್ತಿರುವುದು ಆಘಾತಕಾರಿ. ಪ್ರತಿಯೊಂದಕ್ಕೂ ಹಿಂದುತ್ವದ ಜಪ ಮಾಡಿ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತಂದು ಸಮಾಜ ಮತ್ತು ಜನರನ್ನು ಒಡೆಯುತ್ತಿರುವ ಬಿಜೆಪಿ, ಈಗ ಭಾಷೆಯನ್ನೂ ಟೂಲ್ ಕಿಟ್ ಮಾಡಿಕೊಂಡು ವಿಭಜನೆಗೆ ಹೊರಟಿರುವುದು ದೇಶಕ್ಕೆ ಗಂಡಾಂತರಕಾರಿ ಎಂದಿದ್ದಾರೆ.
ಬಿಜೆಪಿ ವಿವಿಧ ರಾಜ್ಯಗಳ ಚುನಾವಣೆಗಳಲ್ಲಿ ಜಯಗಳಿಸುತ್ತಿರುವುದನ್ನು ಬ್ರಿಟಿಷರಿಗೆ ಹೋಲಿಕೆ ಮಾಡಿರುವ ಕುಮಾರಸ್ವಾಮಿ, ಬ್ರಿಟಿಷರು ಪ್ರತಿ ಸಂಸ್ಥಾನವನ್ನು ಆಕ್ರಮಿಸಿಕೊಳ್ಳುವ ಮುನ್ನ ಒಡೆದು ಆಳುವ ನೀತಿ ಅನುಸರಿಸುತ್ತಿದ್ದರು. ಈಗ ಬಿಜೆಪಿ ಅದೇ ನೀತಿ ಮುಂದುವರೆಸಿದ್ದು, ಬ್ರಿಟೀಷರಿಗೂ ಮತ್ತು ಬಿಜೆಪಿಗೆ ಯಾವುದೇ ವ್ಯತ್ಯಾಸ ಇಲ್ಲ ಎನ್ನುವುದಕ್ಕೆ ಇದೇ ಜೀವಂತ ಸಾಕ್ಷಿ ಎಂದು ಹೇಳಿದ್ದಾರೆ.
ಅಮಿತ್ ಷಾ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಹಿಂದಿ ಹೇರಿಕೆ ವಿರೋಧಿ ಅಭಿಯಾನಕ್ಕೆ ಎಚ್‌ಡಿಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಮಿತ್ ಶಾ ಅವರಿಗೆ ಇಂಗ್ಲಿಷ್ ಬರಲ್ವಾ? ಅವರಿಗೆ ಪ್ರಾದೇಶಿಕ ಭಾಷೆಗಳ ಮೇಲೆ ಯಾಕೆ ಈ ಪರಿ ದ್ವೇಷ? ನಮ್ಮ ಭಾಷೆ ನಮಗೆ ಮುಖ್ಯ. ಮಾತೃಭಾಷೆಗೇ ಅಗ್ರಸ್ಥಾನ. ಕರ್ನಾಟಕದಲ್ಲಿ ಕನ್ನಡವೇ ಮೊದಲು. ಹಿಂದಿ ನಮ್ಮ ಭಾಷೆಯಲ್ಲ. ಹಿಂದಿ ಹೇರಿಕೆ ವಿರುದ್ದ ಅಭಿಯಾನಕ್ಕೆ ನನ್ನ ಪೂರ್ಣ ಬೆಂಬಲ ಇದೆ ಎಂದು ಹೇಳಿದ್ದಾರೆ.
ಬಿಜೆಪಿ ಕುರಿತು ಕುಮಾರಸ್ವಾಮಿ ಮೃದು ಧೋರಣೆ ಹೊಂದಿದ್ದಾರೆ, ಬಿಜೆಪಿಯಿಂದ ಸುಪಾರಿ ಪಡೆದಿದ್ದಾರೆ ಎಂದೆಲ್ಲ ಈ ಹಿಂದೆ ಕಾಂಗ್ರೆಸಿಗರು ಲೇವಡಿ ಮಾಡುತ್ತಿದ್ದರು. ಅದಕ್ಕೆ ಅನುಗುಣವಾಗಿ ಜೆಡಿಎಸ್ ಸದಸ್ಯರು ಸದನದಲ್ಲಿ ಅನೇಕ ವಿಚಾರಗಳಲ್ಲಿ ಬಿಜೆಪಿ ವಿಚಾರಗಳಿಗೆ ಬೆಂಬಲವಾಗಿ ನಿಂತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವುದನ್ನು ಎಚ್‌ಡಿಕೆ ತೀವ್ರಗೊಳಿಸಿದ್ದಾರೆ.