Site icon Vistara News

ಶೌಚಾಲಯ ಕಟ್ಟಿಸಿದರೂ ಕೆಲವರಿಗೆ ತಂಬಿಗೆ ಹಿಡಿದರೇ ಆನಂದ: ಸಚಿವ ಈಶ್ವರಪ್ಪ

K.S. Eshwarappa

ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯೋಜನೆ ರೂಪಿಸಿ, ಅನುದಾನ ನೀಡಿ ಪ್ರತಿ ಮನೆಯಲ್ಲಿ ಶೌಚಾಲಯ ನಿರ್ಮಿಸಿದರೂ ಅನೇಕರಿಗೆ ತಂಬಿಗೆ ಹಿಡಿದು ರಸ್ತೆ ಬದಿಯಲ್ಲೊ, ಮೈದಾನದಲ್ಲೊ ಕುಳಿತರೇ ಆನಂದ ಎಂದರೆ ನಾನೇನು ಮಾಡಲಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ (RDPR) ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಕ ಸ್ವಚ್ಛ ಭಾರತ ಅಭಿಯಾನದಲ್ಲಿ ಪ್ರತಿ ಮನೆಗೂ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೆ ಸಂಪೂರ್ಣ ಗುರಿ ಸಾಧನೆ ಮಾಡಲಾಗಿದೆ. ಪ್ರತಿ ಮನೆಯಲ್ಲಿ ಶೌಚಾಲಯ ನಿರ್ಮಾಣವೂ ಆಗಿದೆ. ಆದರೆ ಅನೇಕರು ಇಂದಿಗೂ ಅದನ್ನು ಬಳಸುತ್ತಿಲ್ಲ ಎನ್ನುವುದು ಸತ್ಯ. ಇದು ಆ ಜಾತಿ ಈ ಜಾತಿ ಎನ್ನದೆ ಎಲ್ಲರಲ್ಲೂ ಸಮಸ್ಯೆಯಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ನೀರಿನ ಸಮಸ್ಯೆ ಇರುವ ಕಾರಣಕ್ಕೆ ಶೌಚಾಲಯಯ ಬಳಕೆ ಕಡಿಮೆಯಿದೆ ಎಂಬ ಮಾತನ್ನು ಈಶ್ವರಪ್ಪ ನಿರಾಕರಿಸಿದ್ದಾರೆ. ಈ ಸಮಸ್ಯೆ ಅನೇಕ ವರ್ಷಗಳಿಂದಲೂ ಇದೆ. ತಂಬಿಗೆ ಕೊಂಡೊಯ್ಯುವವರು ಅದೇ ನೀರನ್ನು ಶೌಚಾಲಯದಲ್ಲಿ ಬಳಸಲು ಆಗುವುದಿಲ್ಲವೇ? ನೀರಿನ ಸಮಸ್ಯೆಗಿಂತಲೂ ಹೆಚ್ಚಾಗಿ ಇದು ಮಾನಸಿಕ ಬದಲಾವಣೆಯ ವಿಚಾರ. ಶೌಚಾಲಯ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಗ್ರಾಮ ಪಂಚಾಯಿತಿಗಳು, ಸ್ವಸಹಾಯ ಗುಂಪುಗಳನ್ನು ಬಳಸಿಕೊಂಡು ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಹಿಂದಿಗೆ ಹೋಲಿಕೆ ಮಾಡಿದರೆ ಈಗ ಸಮಸ್ಯೆ ಕಡಿಮೆಯಾಗಿದೆ, ಆದರೂ ಇನ್ನೂ ಈ ನಿಟ್ಟಿನಲ್ಲಿ ಕೆಲಸ ಆಗಬೇಕಿದೆ ಎಂದರು.

ಇಲಾಖೆ ಉತ್ತಮ ಸಾಧನೆ

ತಮ್ಮ ಇಲಾಖೆಯ ಸಾಧನೆಗಳನ್ನು ಪ್ರಚಾರ ಮಾಡುವ ಸಲುವಾಗಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಈಶ್ವರಪ್ಪ ಮಾತನಾಡಿದರು. ಸ್ವಚ್ಛ ಭಾರತದಲ್ಲಿ 12 ಲಕ್ಷಕ್ಕೂ ಹೆಚ್ಚು ವೈಯಕ್ತಿಕ ಶೌಚಾಲಯ ನಿರ್ಮಾಣ ಆಗಿದೆ. 45-46 ಗ್ರಾಮ ಪಂಚಾಯಿತಿಗಳು ಸೇರಿ 4 ಕ್ಲಸ್ಟರ್‌ ರೂಪಿಸಲಾಗಿದೆ. ಈ ರೀತಿ ಪ್ರತಿ ಜಿಲ್ಲೆಗೂ ಕ್ಲಸ್ಟರ್‌ ರೂಪಿಸಿ ಘನತ್ಯಾಜ್ಯ ನಿರ್ವಹಣೆ ಮಾಡಲಾಗುತ್ತದೆ. ನರೇಗಾ, ಮನೆಮನೆಗೆ ಗಂಗೆ ಯೋಜನೆಗಳ ಕುರಿತು ಏಪ್ರಿಲ್‌ 28-29ರಂದು ಮಂಗಳೂರಿನಲ್ಲಿ ರಾಜ್ಯದ ಎಲ್ಲ ಸಿಇಒಗಳಿಗೆ ತರಬೇತಿ ನೀಡಲಾಗುತ್ತಿದೆ. ಯಾವ ಜಿಲ್ಲೆಗಳು ಮುಂದೆ ಇವೆ, ಯಾವ ಜಿಲ್ಲೆಗಳು ಮುಂದೆ ಇವೆ, ಪರಸ್ಪರ ಅನುಭವ ಹಂಚಿಕೆ ನಡೆಯುತ್ತದೆ. ಈಗಾಗಲೆ 18 ತಿಂಗಳ ಅವಧಿಯಲ್ಲಿ 5,623 ಗ್ರಂಥಾಲಯ ಸ್ಥಾಪನೆ ಆಗಿವೆ. ಶಿಕ್ಷಣ ಇಲಾಖೆ ಅಡಿಯಲ್ಲಿದ್ದ ಗ್ರಂಥಾಲಯಗಳನ್ನು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಪಡೆದಿದ್ದೇವೆ. ಗ್ರಂಥಪಾಲಕರಿಗೆ ನೀಡುತ್ತಿದ್ದ ₹7 ಸಾವಿರ ಗೌರವಧನವನ್ನು ₹12 ಸಾವಿರಕ್ಕೆ ಹೆಚ್ಚಳ ಮಾಡಿದ್ದೇವೆ. ಸದ್ಯ 2,214 ಡಿಜಿಟಲ್‌ ಗ್ರಂಥಾಲಯಗಳು ನಿರ್ಮಾಣವಾಗಿದ್ದು, ಭವಿಷ್ಯದಲ್ಲಿ ಎಲ್ಲ ಗ್ರಂಥಾಲಯಗಳನ್ನೂ ಡಿಜಿಟಲ್‌ ಮಾಡಲಾಗುತ್ತದೆ. ಗ್ರಾಮ ಸಡಕ್‌ ಯೋಜನೆ ಗುರಿಯನ್ನೂ ಸಾಧಿಸಿದ್ದೇವೆ. ರಾಜ್ಯ ಸರ್ಕಾರದಿಂದಲೂ ಅಮೃತ ಗ್ರಾಮೋತ್ಥಾನ ಯೋಜನೆ ಸೇರಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇಲಾಖೆ ಪ್ರಗತಿ ತೃಪ್ತಿಕರವಾಗಿದೆ ಎಂದು ಈಶ್ವರಪ್ಪ ಹೇಳಿದರು.

ಪ್ರತಿಪಕ್ಷಗಳು ಹಿಂದು ಮುಸ್ಲಿಂ ಗಲಾಟೆ ಮಾಡುತ್ತಿವೆ. ನಾವು ಅಭಿವೃದ್ಧಿ ಕಾಮಗಾರಿಗಳು, ಇಲಾಖೆ ಸಾಧನೆಗಳನ್ನು ಮುಂದಿಟ್ಟುಕೊಂಡು ಜನರಿಗೆ ಮನವರಿಕೆ ಮಾಡುತ್ತಿದ್ದೇವೆ.

-ಕೆ.ಎಸ್‌. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ

ಹೆಚ್ಚಿನ ಓದಿಗಾಗಿ: ಬ್ರಿಟಿಷರಿಗೂ ಬಿಜೆಪಿಯವರಿಗೂ ವ್ಯತ್ಯಾಸವಿಲ್ಲ: ಕಮಲ ಪಕ್ಷದ ವಿರುದ್ಧ HDK ವಾಗ್ದಾಳಿ

Exit mobile version