Site icon Vistara News

16ರ ಬಾಲಕನನ್ನು 2 ದಿನ ಠಾಣೆಯಲ್ಲಿಟ್ಟು ವಿಚಾರಣೆ: ಮನೆಗೆ ಬಂದ ಹುಡುಗ ಆತ್ಮಹತ್ಯೆ, ಶವವಿಟ್ಟು ಪ್ರತಿಭಟನೆ

maddur suicide

ಮದ್ದೂರು(ಮಂಡ್ಯ): ಎರಡು ದಿನಗಳ ಕಾಲ ಪೊಲೀಸ್‌ ಠಾಣೆಯಲ್ಲಿ ವಿಚಾರಣೆ ಎದುರಿಸಿದ ೧೬ ವರ್ಷದ ಬಾಲಕನೊಬ್ಬ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸ್‌ ಠಾಣೆಯಲ್ಲಿ ನೀಡಿದ ಚಿತ್ರಹಿಂಸೆಯೇ ಆತನ ಸಾವಿಗೆ ಕಾರಣ ಎಂದು ಮನೆಯವರು ಆರೋಪಿಸಿದ್ದಾರೆ. ಠಾಣೆಯ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.

ವಳಗೆರೆಹಳ್ಳಿ ಗ್ರಾಮದ ಪವನ್(16) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಆತನನ್ನು ಪ್ರಕರಣವೊಂದಕ್ಕೆ ಸಂಬಂಧಿಸಿ ವಿಚಾರಣೆ ನೆಪದಲ್ಲಿ ಬೆಸಗರಹಳ್ಳಿ ಪೊಲೀಸರು ಕರೆದುಕೊಂಡು ಹೋಗಿದ್ದರೆನ್ನಲಾಗಿದೆ. ಆತನನ್ನು ಎರಡುವರೆ ದಿನಗಳ ಕಾಲ ಠಾಣೆಯಲ್ಲಿಟ್ಟುಕೊಂಡು ವಿಚಾರಣೆ ನಡೆಸಿದ್ದಾರೆನ್ನಲಾಗಿದೆ. ಪೊಲೀಸರು ಮನೆಯವರಿಗೆ ತಿಳಿಸದೆ ಕರೆದುಕೊಂಡು ಹೋಗಿದ್ದಾರೆನ್ನಲಾಗಿದೆ. ಈ ನಡುವೆ ಮನೆಯವರು ನಾಪತ್ತೆ, ಅಪಹರಣ ದೂರು ನೀಡಲು ಮುಂದಾಗಿದ್ದರೂ ಪೊಲೀಸರು ಸ್ವೀಕರಿಸಲಿಲ್ಲ ಎನ್ನಲಾಗಿದೆ.

ಎರಡೂವರೆ ದಿನಗಳ ಬಳಿಕ ಮನೆಗೆ ಬಂದ ಪವನ್‌ ಠಾಣೆಯಲ್ಲಿ ತನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾಗಿ ಹೇಳಿದ್ದಾನೆ ಎಂದು ಮನೆಯವರು ತಿಳಿಸಿದ್ದಾರೆ. ಈ ನಡುವೆ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪೊಲೀಸ್‌ ಠಾಣೆಯ ಮುಂದೆ ಮೃತದೇಹ ತಂದಿಟ್ಟು ಪ್ರತಿಭಟನೆ
ಸೋಮವಾರ ಮುಂಜಾನೆ ಮನೆಯವರು ಬಾಲಕನ ಶವವನ್ನು ಪೊಲೀಸ್‌ ಠಾಣೆಯ ಮುಂದಿಟ್ಟು ಪ್ರತಿಭಟನೆ ನಡೆಸಿದರು. ಪೊಲೀಸರು ಅಪ್ರಾಪ್ತನನ್ನು ಯಾವುದೇ ಮಾಹಿತಿ ನೀಡದೆ, ಠಾಣೆಗೆ ಕರೆದುಕೊಂಡು ಹೋಗಿದ್ದು ಅಪರಾಧ. ಠಾಣೆಯಲ್ಲಿ ಚಿತ್ರ ಹಿಂಸೆ ನೀಡಿ ಪವನ್ ಸಾವಿಗೆ ಕಾರಣಕರ್ತರಾಗಿರುವ ಪೊಲೀಸರ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮದ್ದೂರು ಸಿಪಿಐ ಹರೀಶಗೌಡ ಅವರು ಪ್ರತಿಭಟನಾಕಾರರ ಮನವೊಲಿಸಿ ಸೂಕ್ತ ಕ್ರಮದ ಭರವಸೆ ನೀಡಿದರು. ಶವವನ್ನು ಪರೀಕ್ಷೆಗೆ ಕಳಿಸಿಕೊಡುವಲ್ಲಿ ಯಶಸ್ವಿಯಾದರು. ಸೂಕ್ತ ತನಿಖೆ ನಡೆಸಿ, ಮೇಲಧಿಕಾರಿಗಳಿಗೆ ವರದಿ ನೀಡುವ ಭರವಸೆ ಬಳಿಕ ಪ್ರತಿಭಟನೆ ಅಂತ್ಯವಾಯಿತು.

ಯಾಕೆ ಠಾಣೆಗೆ ಕರೆದೊಯ್ದರು?
೧೬ ವರ್ಷದ ಈ ಬಾಲಕನ ಕೆಲವು ಗೆಳೆಯರು ಚಿನ್ನದ ಸರ ಕಸಿಯುವ ಕೃತ್ಯದಲ್ಲಿ ಭಾಗಿಯಾಗಿದ್ದಾರೆಂಬ ಆರೋಪವಿತ್ತು. ಈ ಬಗ್ಗೆ ಮಾಹಿತಿ ಪಡೆಯಲು ಪೊಲೀಸರು ಪವನ್‌ನನ್ನು ಕರೆದೊಯ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಪವನ್‌ನ ತಂದೆ ಕೃಷಿಕರಾಗಿದ್ದು, ಬಡತನದ ಹಿನ್ನೆಲೆ ಹೊಂದಿದ್ದಾರೆ.

Exit mobile version