ಬೆಂಗಳೂರು: ಶಾಲೆಯಲ್ಲಿ ಪ್ರಬಲ ಬಾಂಬ್ ಇರಿಸಲಾಗಿದ್ದು, ಎಚ್ಚರಿಕೆ ವಹಿಸಿ ಎಂಬ ಸಂದೇಶವು ಬೆಂಗಳೂರಿನ ಮತ್ತೊಂದು ಪ್ರತಿಷ್ಠಿತ ಶಾಲೆಗೂ ಬಂದಿದೆ. ಬಿಷಪ್ ಕಾಟನ್ ಬಾಲಕಿಯರ ಶಾಲೆಗೂ ಇಂತಹದ್ದೇ ಬೆದರಿಕೆ ಈಮೇಲ್ ಬಂದಿದೆ.
ಏಪ್ರಿಲ್ 8ರಂದು ಬೆಂಗಳೂರಿನ ಸುಮಾರು 15 ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿತ್ತು. ಅಂದೇ ಬಿಷಪ್ ಕಾಟನ್ ಶಾಲೆಗೂ ಇಮೇಲ್ ಬಂದಿದೆ. ಆದರೆ ಶಾಲೆಯ ಪ್ರಾಂಶುಪಾಲರು ಸೋಮವಾರ ಇಮೇಲ್ ಪರಿಶೀಲನೆ ಮಾಡುತ್ತಿರುವಾಗ ಗಮನಕ್ಕೆ ಬಂದಿದೆ. ಕೂಡಲೆ ಕಬ್ಬನ್ ಪಾರ್ಕ್ ಪೊಲೀಸರಿಗೆ ಸಂದೇಶ ರವಾನೆ ಮಾಡಿದ್ದಾರೆ. ಕೂಡಲೆ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದ ಜತೆಗೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಎಲ್ಲ ಶಾಲೆಗಳಂತೆಯೇ ಇಲ್ಲಿಯೂ ಯಾವುದೇ ಬಾಂಬ್ ಅಥವಾ ಬಾಂಬ್ ರೀತಿಯ ವಸ್ತು ಇಲ್ಲಿವರೆಗೆ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಇಲ್ಲಿವರೆಗೆ ಬಾಂಬ್ ಬೆದರಿಕೆ ಇಮೇಲ್ ಬಂದಿರುವ ಯಾವುದೇ ಶಾಲೆಯಲ್ಲೂ ಪತ್ತೆಯಾಗಿಲ್ಲ. ಬಹುಶಃ ಪರೀಕ್ಷೆ ಸಮಯದಲ್ಲಿ ಶಾಲೆಗಳಲ್ಲಿ ಗೊಒಂದಲ ಸೃಷ್ಟಿಸಲು ಕಿಡಿಗೇಡಿಗಳು ಅಥವಾ ಕೆಲ ವಿದ್ಯಾರ್ಥಿಗಳೇ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಆದರೆ ಒಂದೆರಡು ಪ್ರಕರಣದಲ್ಲಿ ಬಾಂಬ್ ಪತ್ತೆಯಾಗಿಲ್ಲ ಎಂದ ಕೂಡಲೆ ಉಳಿದದ್ದನ್ನು ಕಡೆಗಣಿಸುವಂತಿಲ್ಲ. ಪ್ರತಿ ಬಾರಿ ಇಂತಹ ಸಂದೇಶ ಬಂದಾಗಲೂ ಗಂಭೀರವಾಗಿ ಪರಿಗಣಿಸಿ ತಪಾಸಣೆ ಮಾಡಲಾಗುತ್ತದೆ. ಭಯೋತ್ಪಾದಕರಾಗಿರಬಹುದು ಅಥವಾ ತಮಾಷೆಗೆ ಕಿಡಿಗೇಡಿಗಳು ಮಾಡಿದ ಕೃತ್ಯವಿರಬಹುದು, ಅವರತ್ತು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಕುರಿತು ಶುಕ್ರವಾರ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಲಾ ಬಾಂಬ್ ಬೆದರಿಕೆಯ ಗಂಭೀರ ತನಿಖೆ ಮಾಡಲಾಗುತ್ತದೆ ಎಂದು ತಿಳಿಸಿದ್ದರು.
ಕಿಡಿಗೇಡಿಗಳಿಗೆ ಶಾಲೆಗಳ ಇಮೇಲ್ ಐಡಿ ಎಲ್ಲಿಂದ ಸಿಕ್ಕವು ಎಂಬ ಸಂಶಯವೂ ಪೊಲೀಸರಿಗೆ ವ್ಯಕ್ತವಾಗಿದೆ. ಬಹುತೇಕ ಪ್ರತಿಷ್ಠಿತ ಶಾಲೆಗಳು ವೆಬ್‌ಸೈಟ್ ಹೊಂದಿದ್ದು, ಅವುಗಳನ್ನು ಸಂಪರ್ಕಿಸಲು ಇಮೇಲ್ ವಿಳಾಸವನ್ನೂ ನೀಡಲಾಗಿರುತ್ತದೆ. ಅವುಗಳನ್ನು ಬಳಸಿ ಬೆದರಿಕೆ ಸಂದೇಶ ರವಾನಿಸಿರಬಹುದು. ಅಥವಾ ಇನ್ನೇನು ದಾಖಲಾತಿಗಳಿಗಾಗಿ ಪ್ರಚಾರಾಭಿಯಾನವನ್ನು ಶಾಲೆಗಳು ನಡೆಸುತ್ತಿವೆ. ಅದರಲ್ಲಿ ನೀಡಿರುವ ಇಮೇಲ್ ವಿಳಾಸಕ್ಕೇ ಬೆದರಿಕೆಯನ್ನೂ ರವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಪೊಲೀಸ್ ತನಿಖೆ ನಂತರವಷ್ಟೆ ಸತ್ಯಾಂಶ ಹೊರಬೀಳುತ್ತದೆ.