ಬೆಂಗಳೂರು: ಬೆಂಗಳೂರಿನ ಸಂಚಾರ(Traffic) ದಟ್ಟಣೆಯಲ್ಲಿ ಎಲ್ಲ ಸಂಚಾರ ನಿಯಮವನ್ನು ಪಾಲಿಸುತ್ತ ವಾಹನವನ್ನು ಚಲಾಯಿಸಿಕೊಂಡು ಬಂದರೂ ನಿಮ್ಮ ಹೆಸರಿನಲ್ಲಿ ಬೀಳುತ್ತೆ ದಂಡ(Fine). ಹೌದು. ತಮ್ಮ ತಪ್ಪೇ ಇಲ್ಲದ ಅನೇಕರ ವಾಹನಗಳ ಹೆಸರಿನಲ್ಲಿ ಸಿಗ್ನಲ್ ಜಂಪ್, ಹೆಲ್ಮೆಟ್ ರಹಿತ ಪ್ರಯಾಣದಂತಹ ಅನೇಕ ಕಾನೂನು ಉಲ್ಲಂಘನೆಗೆ ದಂಡ ಬೀಳುತ್ತಿದೆ.
ಎರಡು ವರ್ಷದಿಂದ ತಮ್ಮ ವಾಹನದ ಜತೆಗೆ ಆಂಧ್ರ ಪ್ರದೇಶದಲ್ಲೆ ವಾಸವಾಗಿರುವವರಿಗೂ ಬೆಂಗಳೂರಿನಲ್ಲಿ (Bengaluru) ಸಂಚಾರ ನಿಯಮ ಉಲ್ಲಂಘನೆ ದಂಡ ಬಿದ್ದಿದೆ. ಇದು ವಾಹನ ಸವಾರರಲ್ಲಿ ಆಶ್ಚರ್ಯ ಹಾಗೂ ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಇತರೆ ವಾಹನಗಳ ನಂಬರ್ ಪ್ಲೇಟ್ ಅಳವಡಿಸಿಕೊಂಡು ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಾಗಿದೆ. ಇತ್ತೀಚೆಗೆ ಸಂಚಾರ ಪೊಲೀಸರು ನಿಯಮ ಉಲ್ಲಂಘನೆಯನ್ನು ಅತ್ಯಾಧುನಿಕ ಕ್ಯಾಮೆರಾಗಳ ಮೂಲಕ ಸೆರೆ ಹಿಡಿಯುತ್ತಿದ್ದಾರೆ. ಸ್ಥಿರ ಕ್ಯಾಮೆರಾಗಳ ಜತೆಗೆ ಪೊಲೀಸರ ಕೈಯಲ್ಲಿರುವ ಕ್ಯಾಮೆರಾಗಳ ಮೂಲಕ ಉಲ್ಲಂಘನೆಯನ್ನು ದಾಖಲಿಸಿ ಅವರ ಹೆಸರಿಗೆ ದಂಡವನ್ನು ನಿಗದಿಪಡಿಸುತ್ತಿದ್ದಾರೆ.
ಅನೇಕ ವಾಹನ ಸವಾರರಿಗೆ ಇಂತಹ ನೋಟಿಸ್ ಬಂದಾಗ ಅಚ್ಚರಿಯಾಗಿದೆ. ತಮ್ಮ ತಪ್ಪೇ ಇಲ್ಲದೆ ದಂಡ ಏಕೆ ಪಾವತಿಸಬೇಕು ಎಂದು ಸಂಚಾರ ಪೊಲೀಸರನ್ನು Twitter ಖಾತೆಯ ಮೂಲಕ @blrcitytraffic ಸಂಪರ್ಕಿಸಿದ್ದಾರೆ. ನಿಯಮ ಉಲ್ಲಂಘನೆ ವೇಳೆ ಪೊಲೀಸರು ಸೆರೆ ಹಿಡಿದಿದ್ದ ಫೋಟೊಗಳನ್ನು ಒದಗಿಸಿದಾಗ ಅದರಲ್ಲಿ ಸಾಕ್ಷಿ ಸಿಕ್ಕಿದೆ.
ಜೀವನ್ ಎಂಬುವವರು ಕಳೆದ ಎರಡು ವರ್ಷದಿಂದ ಆಂಧ್ರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರ ಮಾಲೀಕತ್ವದ ಬಜಾಜ್ ಡಿಸ್ಕವರ್ ವಾಹನ ತಮ್ಮ ಬಳಿಯಲ್ಲೇ ಇರಿಸಿಕೊಂಡಿದ್ದಾರೆ. ಆದರೆ ಇದೇ ಸಂಖ್ಯೆಯ ವಾಹನಕ್ಕೆ ಬೆಂಗಳೂರಿನಲ್ಲಿ ಎರಡು ಬಾರಿ ದಂಡ ವಿಧಿಸಲಾಗಿದೆ. ಈ ಕುರಿತು ಬೆಂಗಳೂರು ಸಂಚಾರ ಪೊಲೀಸರನ್ನು ಸಂಪರ್ಕಿಸಿದಾಗ ಫೋಟೊ ಒದಗಿಸಿದ್ದಾರೆ. ಅದರಲ್ಲಿರುವ ವಾಹನ ಟಿವಿಎಸ್ ಅಪಾಚೆ ವಾಹನದ್ದು. ಇದರ ಕುರಿತು ಜೀವನ್ ಟ್ವೀಟ್ ಮಾಡಿದ್ದಾರೆ. ತಾನು ಆಂಧ್ರಪ್ರದೇಶದಲ್ಲೇ ಇರುವುದಕ್ಕೆ ಹಾಗೂ ವಾಹನ ಮಾಲೀಕತ್ವಕ್ಕೆ ಸಂಪೂರ್ಣ ದಾಖಲೆ ಒದಗಿಸುತ್ತೇನೆ. ಪೊಲೀಸರು ಸಹಾಯ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.
ಪೊಲೀಸರಿಂದ ಸಿಕ್ಕಿಲ್ಲ ಸಹಾಯ
ಪಾಶಾ ಎನ್ನುವವರ ಹೆಸರಿನಲ್ಲಿರುವ ವಾಹನದ ನಂಬರ್ ಪ್ಲೇಟ್‌ನ ಮತ್ತೊಂದು ವಾಹ ಪತ್ತೆಯಾಗಿದೆ. ಅವರೂ ಪೊಲೀಸರಿಂದ ಫೋಟೊಗಳನ್ನು ಪಡೆದು ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಪೊಲೀಸರು ಈ ಟ್ವೀಟ್‌ಗಳಿಗೆ ಸ್ಪಂದನೆ ಮಾಡುತ್ತಿದ್ದಾರಾದರೂ ಗಂಭೀರ ಕ್ರಮ ಕೈಗೊಳ್ಳುತ್ತಿಲ್ಲ. ಕೆಲವು ದೂರವಾಣಿ ಸಂಖ್ಯೆಗಳನ್ನು ನೀಡಿ ಸಂಪರ್ಕಿಸಿ ಎಂದು ವಾಹನ ಸವಾರರಿಗೇ ತಿಳಿಸುತ್ತಿದ್ದಾರೆ. ನಕಲಿ ನಂಬರ್ ಪ್ಲೇಟ್ ಬಳಕೆ ಗಂಭಿರ ಅಪರಾಧ. ಪೊಲೀಸರೇ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ವಾದ.
ಏಕೆ ಹೀಗಾಗಿರಬಹುದು?
ಒಂದೇ ನಂಬರ್ ಪ್ಲೇಟ್ ಎರಡು ಅಥವಾ ಹೆಚ್ಚಿನ ವಾಹನದಲ್ಲಿರಲು ಅನೇಕ ಕಾರಣಗಳಿವೆ.
- ಕಿಡಿಗೇಡಿಗಳು ತಮ್ಮ ಅರ್ಹತಾ ಪ್ರಮಾಣಪತ್ರ ಮುಗಿದ ವಾಹನಕ್ಕೆ ಇನ್ನೊಂದು ವಾಹನದ ಪ್ಲೇಟ್ ಅಳವಡಿಸಿಕೊಂಡಿರುವುದು.
- ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವಾಗ ಮೋಸ ಹೋಗಿರಬಹುದು.
- ನಂಬರ್ ಪ್ಲೇಟ್ ಬದಲಾಯಿಸುವಾಗ ಅಥವಾ ಹೊಸದಾಗಿ ಬರೆಯಿಸುವಾಗ ತಪ್ಪು ಅಂಕೆ ಬರೆಸಿರಬಹುದು.
- ಕೆಲವು ಅಧಿಕಾರಿಗಳು ಹಾಗೂ ಸೆಕೆಂಡ್ ಹ್ಯಾಂಡ್ ವಾಹನ ಮಾರಾಟಗಾರರು ಸೇರಿ ಈ ರೀತಿ ಮಾಡಿರಬಹುದು.
- ಕಿಡಿಗೇಡಿಗಳು ಈ ವಾಹನ ಬಳಸಿ ಅಪಹರಣ, ಕೊಲೆಯಂತಹ ಕೃತ್ಯ ನಡೆಸಲು ಹೊಂಚು ರೂಪಿಸಿರಬಹುದು. ಇದರಿಂದ ಅವರು ಪಾರಾಗಿ ಅಸಲಿ ವಾಹನ ಮಾಲೀಕರು ಸಂಕಷ್ಟ ಎದುರಿಸಬೇಕಾಗುತ್ತದೆ.
ತಪ್ಪು ದಂಡದಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು?
- ಆಗಾಗ್ಗೆ ಸಂಚಾರ ಪೊಲೀಸರ ವೆಬ್ಸೈಟ್ನಲ್ಲಿ ವಾಹನ ಸಂಕ್ಯೆ ನಮೂದಿಸಿ ದಂಡ ಪರೀಕ್ಷಿಸಬೇಕು
- ತಪ್ಪಾಗಿ ದಂಡ ನಮೂದಾಗಿದ್ದರೆ ಕೂಡಲೆ ಟ್ವಿಟ್ಟರ್ ಮೂಲಕ ಸಂಚಾರ ಪೊಲೀಸರನ್ನು ಸಂಪರ್ಕಿಸಿ ಅದರ ಸಾಕ್ಷಿಗೆ ಫೋಟೊ ಕೇಳಬೇಕು
- ಫೋಟೊದಲ್ಲಿ ಬೇರೆ ವಾಹನವಿದ್ದರೆ ಕೂಡಲೆ ಅದರ ಮಾಹಿತಿ ನೀಡಿ
- ಸೆಕೆಂಡ್ಹ್ಯಾಂಡ್ ವಾಹನ ಖರೀದಿ ಮಾಡುವಾಗ ಆರ್ಟಿಒ, ಆನ್ಲೈನ್ ಮೂಲಕ ಸಂಪೂರ್ಣ ದಾಖಲೆ ಪರಿಶೀಲಿಸಿ
- ವಾಹನ ಕಳೆದುಹೋದರೆ ಕೂಡಲೆ ಪೊಲೀಸರಿಗೆ ದೂರು ನೀಡಿ. ನಿಮ್ಮ ವಾಹನವನ್ನು ಬಳಸಿ ಯಾರಾದರೂ ಕುಕೃತ್ಯ ನಡೆಸಿದರೆ ಮಾಲೀಕರಿಗೇ ಸಂಕಷ್ಟ ಎದುರಾಗುತ್ತದೆ
- ವಾಹನದ ಅರ್ಹತಾ ಅವಧಿ(ಫಿಟ್ನೆಸ್) ಮುಗಿದ ಕೂಡಲೆ ನವೀಕರಿಸಿ ಹೊಸ ಪ್ರಮಾಣಪತ್ರ ಪಡೆದುಕೊಳ್ಳಿ
ಹೆಚ್ಚಿನ ಓದಿಗಾಗಿ: ಸಿಲಿಕಾನ್ ಸಿಟಿಯಲ್ಲಿ ಪುಂಡರ ʻಕಾರುʼಬಾರು: ನಾಲ್ಕು ಕಾರುಗಳ ಗಾಜು ಪುಡಿ ಪುಡಿ