ಮಡಿಕೇರಿ: ಬಿಜೆಪಿ ಮತ್ತು ಜೆಡಿಎಸ್‌ನ 20-25 ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆ ಆಗಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬಿಜೆಪಿಯಲ್ಲಿ ಕಾಣಿಸಿಕೊಂಡಿರುವ ನಾಯಕತ್ವ ಬದಲಾವಣೆ ಚರ್ಚೆ ಮತ್ತು ಸಿದ್ದರಾಮೋತ್ಸವದ ಬಳಿಕ ಕಾಂಗ್ರೆಸ್‌ನಲ್ಲಿ ಆವರಿಸಿರುವ ಹೊಸ ಉತ್ಸಾಹದ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದಿದೆ.
ʻʻಸಿದ್ಧರಾಮೋತ್ಸವದ ಬಳಿಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಯಾಗಿದೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಅವಕಾಶ ಕೊಡಿ ಎಂದು ಕೋರಿ ಬಿಜೆಪಿ ಮತ್ತು ಜೆಡಿಎಸ್‌ನ ಹಲವರು ಅರ್ಜಿ ಹಾಕಿದ್ದಾರೆʼʼ ಎಂದು ಎಂ. ಲಕ್ಷ್ಮಣ್ ಹೇಳಿದ್ದಾರೆ.
ನನಗೆ ಗೊತ್ತಿರುವ ಮಾಹಿತಿ ಪ್ರಕಾರ, ಬಿಜೆಪಿಯ ಒಂಬತ್ತು ಮಂದಿ ಮತ್ತು ಜೆಡಿಎಸ್‌ನ ೧೧ ಹಾಲಿ ಶಾಸಕರು ಕಾಂಗ್ರೆಸ್ ಸೇರಲು ಕಾತರರಾಗಿದ್ದಾರೆ. ಕೆಲವು ಮಾಜಿ ಶಾಸಕರು ಕೂಡಾ ಮಾತುಕತೆ ನಡೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನು ಅನಧಿಕೃತವಾಗಿ ಭೇಟಿ ಮಾಡಿ ಚರ್ಚೆಯನ್ನೂ ನಡೆಸಿದ್ದಾರೆ. ಆದರೆ, ಇನ್ನೂ ಅಧಿಕೃತವಾಗಿ ಕೆಪಿಸಿಸಿಗೆ ಅರ್ಜಿ ಹಾಕಬೇಕಷ್ಟೆ ಎಂದು ಲಕ್ಷ್ಮಣ್ ಹೇಳಿದರು.
ʻʻಅವರು ಅಧಿಕೃತವಾಗಿ ಅರ್ಜಿ ಹಾಕಿದ ಮೇಲೆ ಅದನ್ನು ಸಮಿತಿಗೆ ಕಳುಹಿಸಲಾಗುತ್ತದೆ. ಸಮಿತಿ ಅವರನ್ನು ತೆಗೆದುಕೊಳ್ಳಬೇಕೋ ಬೇಡವೋ ಅಂತ ನಿರ್ಧಾರ ಮಾಡುತ್ತದೆʼʼ ಎಂದು ಹೇಳಿದ ಲಕ್ಷ್ಮಣ್ ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿಯೇ ಬರುತ್ತಿದ್ದಾರೆ ಎನ್ನುವುದನ್ನು ಸೂಚ್ಯವಾಗಿ ಹೇಳಿದ್ದಾರೆ.
ಬಿಟ್ಟು ಹೋದವರಿಗೆ ಅವಕಾಶವಿಲ್ಲ
ʻʻಈ ಹಿಂದೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ 14 ಜನರನ್ನು ಮರಳಿ ಸೇರಿಸಿಕೊಳ್ಳುವುದಿಲ್ಲ. ಈ ಮಾತನ್ನು ಸಿದ್ಧರಾಮಯ್ಯನವರು ಈ ಮೊದಲೇ ಅಸೆಂಬ್ಲಿಯಲ್ಲೇ ಹೇಳಿದ್ದಾರೆ. ನಾವು ಬಿಜೆಪಿಯವರಂತೆ ಬಂದವರನ್ನೆಲ್ಲಾ ಮನೆ ತುಂಬಿಸಿಕೊಳ್ಳುವ ಕೆಲಸ ಮಾಡುವುದಿಲ್ಲʼʼ ಎಂದು ಹೇಳಿದ ಲಕ್ಷ್ಮಣ್, ʻಕಳ್ಳರು, ಚಿಲ್ಲರೆಗಳನ್ನೆಲ್ಲ ನಾವು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲʼʼ ಎಂದು ನುಡಿದರು.
ಇದನ್ನೂ ಓದಿ | ಕರ್ನಾಟಕದಲ್ಲಿ 3ನೇ ಮುಖ್ಯಮಂತ್ರಿ ಪ್ರತಿಷ್ಠಾಪನೆ ಕಸರತ್ತು ನಡೆದಿದೆ: ಕಾಂಗ್ರೆಸ್