ಬೆಂಗಳೂರು : ಸೋಮವಾರ ಸಂಜೆ ದೇಹಾಂತ್ಯಗೊಳಿದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳ ಅಂತಿಮ ದರ್ಶನಕ್ಕೆ 20 ಲಕ್ಷ ಮಂದಿ ಭೇಟಿ ನೀಡುವ ಸಾಧ್ಯತೆಗಳಿವೆ. ಮಂಗಳವಾರ ಮುಂಜಾನೆ 6 ಗಂಟೆಯ ತನಕ ಆಶ್ರಮದ ಮುಂಭಾಗದಲ್ಲಿ ಸಿದ್ಧಪಡಿಸಲಾಗಿರುವ ವೇದಿಕೆ ಮೇಲೆ ಸ್ವಾಮೀಜಿಗಳಿಗೆ ಪಾರ್ಥಿವ ಶರೀರವನ್ನು ಭಕ್ತರ ದರ್ಶನಕ್ಕೆ ಇಡಲಾಗುತ್ತದೆ. 6 ಗಂಟೆಯ ಬಳಿಕ ದೇಹವನ್ನು ಸೈನಿಕ ಶಾಲೆಯ ಬಳಿಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಮತ್ತೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಸಂಜೆ 3 ಗಂಟೆಯ ಬಳಿಕ ಸ್ವಾಮೀಜಿಗಳ ದೇಹವನ್ನು ಮೆರವಣಿಗೆ ಮೂಲಕ ಆಶ್ರಮಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಅಂತಿಮ ವಿಧಿ ವಿಧಾನ ಮುಗಿಸಿದ ಬಳಿಕ ಅಗ್ನಿಗೆ ಅರ್ಪಿಸಲಾಗುತ್ತದೆ.
ಸ್ವಾಮೀಜಿಗಳು ದೇಹಾಂತ್ಯಗೊಂಡ ವಿಚಾರ ಪ್ರಕಟಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಎಂಬಿ ಪಾಟೀಲ್, ಬಸನಗೌಡ ಪಾಟೀಲ್ ಯತ್ನಾಳ್ ಅವರು, ಸುಮಾರು 20 ಲಕ್ಷ ಮಂದಿಯು ಸ್ವಾಮೀಜಿಯವರ ಅಂತಿಮ ದರ್ಶನಕ್ಕೆ ಬರುವ ಸಾಧ್ಯತೆಗಳಿವೆ ಎಂದಿದ್ದಾರೆ.
ಆಶ್ರಮದ ವತಿಯಿಂದ ಅಂತಿಮ ದರ್ಶನಕ್ಕೆ ಬರುವ 10 ಲಕ್ಷ ಮಂದಿಗೆ ಪ್ರಸಾದ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಸ್ಥಳೀಯರು ಕೂಡ ಈ ಸೇವೆಯಲ್ಲಿ ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು, ಸಿದ್ದೇಶ್ವರ ಸ್ವಾಮೀಜಿಗಳು 2014ರಲ್ಲಿ ಬರೆದಿದ್ದ ಅಭಿವಂದನಾ ಪತ್ರವನ್ನು ವಾಚಿಸಿದರು. ಬಳಿಕ ಅಂತಿಮ ದರ್ಶನಕ್ಕೆ ಬರುವ ಭಕ್ತರಲ್ಲಿ ಶಾಂತ ರೀತಿಯಿಂದ ವರ್ತಿಸುವಂತೆ ಮನವಿ ಮಾಡಿದರು. ಅಲ್ಲದೆ, ಈ ಕೆಲಸದಲ್ಲಿ ಕೈ ಜೋಡಿಸುವಂತೆ ಸಂಘ, ಸಂಸ್ಥೆಗಳಿಗೆ ಮನವಿ ಮಾಡಿದರು.
ಇದನ್ನೂ ಓದಿ | Siddheshwar Swamiji | ಸಿದ್ದೇಶ್ವರ ಶ್ರೀಗಳ ದೇಹಾಂತ್ಯ, ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ ಸೇರಿ ಗಣ್ಯರಿಂದ ಕಂಬನಿ