ಮೈಸೂರು: ರಾಜ್ಯದ ನಾನಾ ಭಾಗಗಳಲ್ಲಿ ಚಿರತೆ ದಾಳಿ ವಿಪರೀತವಾಗಿದೆ. ಇದುವರೆಗೆ ಕಾಡಿನ ನಿರ್ಜನ ದಾರಿಯಲ್ಲಿ ಹೊಂಚು ಹಾಕಿ ದಾಳಿ ಮಾಡುತ್ತಿದ್ದ, ಹೊಲ ಗದ್ದೆಗಳಲ್ಲಿ ಮನುಷ್ಯರ ಮೇಲೆ ಮುಗಿಬೀಳುತ್ತಿದ್ದ ಚಿರತೆ ಈಗ ಮನೆ ಬಾಗಿಲಿಗೇ ಬಂದು ಪ್ರಾಣ ತೆಗೆಯುವಷ್ಟರ ಮಟ್ಟಿಗೆ ಅಟ್ಟಹಾಸ (Leopard attack) ಮೆರೆಯುತ್ತಿದೆ.
ಇಂತಹುದೊಂದು ಭಯಾನಕ ಘಟನೆ ನಡೆದಿರುವುದು ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದಲ್ಲಿ. ಸಂಜೆಯ ಹೊತ್ತು ಮನೆ ಮುಂದೆ ಕುಳಿತಿದ್ದ ಯುವತಿಯ ಮೇಲೆ ದಾಳಿ ಮಾಡಿದ ಚಿರತೆ ಆಕೆಯ ಕುತ್ತಿಗೆಯನ್ನೇ ಹಿಡಿದು ಸಾಯಿಸಿದೆ. ಮೇಘನಾ (20) ಚಿರತೆ ದಾಳಿಯಿಂದ ಮೃತಪಟ್ಟ ಯುವತಿ.
ಇನ್ನೂ ಕತ್ತಲಾಗುತ್ತಿರುವ ಹೊತ್ತಿನಲ್ಲಿ ಈ ಘಟನೆ ನಡೆದಿದ್ದು, ಮನೆ ಮಂದಿಯೆಲ್ಲ ಬೊಬ್ಬೆ ಹೊಡೆದಾಗ ಚಿರತೆ ಓಡಿದೆ. ಕೂಡಲೇ ಮೇಘನಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ತಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಯುವತಿಗೆ ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ಯುವತಿ ಪ್ರಾಣ ಕಳೆದುಕೊಂಡರು.
ಆಸ್ಪತ್ರೆ ಎದುರು ಪ್ರತಿಭಟನೆ
ಈ ನಡುವೆ. ತಿ.ನರಸೀಪುರ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಶಾಸಕ ಅಶ್ವಿನ್ ಕುಮಾರ್ ಅವರು ಆಸ್ಪತ್ರೆಗೆ ಆಗಮಿಸಿದಾಗ ಸುತ್ತುವರೆದ ಜನರು ಅರಣ್ಯ ಇಲಾಖೆ, ತಾಲ್ಲೂಕು ಆಡಳಿತ ವಿರುದ್ಧ ಧಿಕ್ಕಾರ ಕೂಗಿದರು.
ಚಿರತೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ದೊಡ್ಡ ಸಂಖ್ಯೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಉಸ್ತುವಾರಿ ಸಚಿವರು, ಅರಣ್ಯ ಇಲಾಖೆ ಸಚಿವರು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದಿದ್ದಾರೆ.
ಮೇಘನ ಸಾವಿಗೆ ನ್ಯಾಯ ಸಿಗಬೇಕು, ತಾಲ್ಲೂಕಿನಲ್ಲಿ ಚಿರತೆಗಳ ಹಾವಳಿ ತಪ್ಪಿಸಬೇಕು ಎಂದು ಆಗ್ರಹಿಸುತ್ತಿದ್ದು, ಇಷ್ಟು ದೊಡ್ಡ ಸಮಸ್ಯೆಯ ಬಗ್ಗೆ ಅಸಡ್ಡೆ ತೋರಿಸುತ್ತಿರುವ ಜನಪ್ರತಿನಿದಿಗಳು, ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ಕೆಲವೇ ವಾರದಲ್ಲಿ ಎರಡನೇ ಘಟನೆ
ಕಳೆದ ಅಕ್ಟೋಬರ್ ೩೧ರಂದು ದೇವಸ್ಥಾನಕ್ಕೆ ಹೋಗಿದ್ದ ಯುವಕನೊಬ್ಬ ಚಿರತೆ ದಾಳಿಗೆ ಬಲಿಯಾದ ಘಟನೆ ತಿ.ನರಸೀಪುರ ತಾಲೂಕಿನ ಉಕ್ಕಲಗೆರೆ ಗ್ರಾಮದಲ್ಲಿ ನಡೆದಿದೆ. ತಿ.ನರಸೀಪುರ ತಾಲ್ಲೂಕಿನ ಎಂ.ಎಲ್.ಹುಂಡಿ ಗ್ರಾಮದ ಮಂಜುನಾಥ್ (20) ಮೃತ ದುರ್ದೈವಿ. ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಮಂಜುನಾಥ್ ಕಾರ್ತಿಕ ಸೋಮವಾರದ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದ. ಹೋಗುವಾಗಲೋ, ಬರುವಾಗಲೋ ಚಿರತೆ ಅವನ ಮೇಲೆ ದಾಳಿ ಮಾಡಿದ್ದು, ಯುವಕ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.
ಇದನ್ನೂ ಓದಿ | Leopard attack | ದೇವಸ್ಥಾನಕ್ಕೆ ಹೋಗಿದ್ದ ಪದವಿ ವಿದ್ಯಾರ್ಥಿ ಮೇಲೆ ಚಿರತೆ ದಾಳಿ, ಯುವಕ ಸ್ಥಳದಲ್ಲೇ ಬಲಿ