Site icon Vistara News

2023 Election | ಸಿಎಎ ವಿರೋಧಿಸಿ ರಾಜೀನಾಮೆ ನೀಡಿದ್ದ ಮಾಜಿ IAS ಅಧಿಕಾರಿಗೆ ಕಾಂಗ್ರೆಸ್‌ ವಾರ್‌ ರೂಮ್‌ ಹೊಣೆ

sasikanth senthil

ಬೆಂಗಳೂರು: ಮುಂಬರುವ ವಿಧಾನಸಭೆ (2023 Election) ಚುನಾವಣೆ ನಿಮಿತ್ತ ಕಾಂಗ್ರೆಸ್‌ ತನ್ನ ವಿವಿಧ ವಿಭಾಗಗಳ ತಂಡವನ್ನು ಬಲಪಡಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. 2019ರಲ್ಲಿ ದೇಶಾದ್ಯಂತ ನಡೆದಿದ್ದ ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿ ಆಂದೋಲನಕ್ಕೆ ಬೆಂಬಲವಾಗಿ ಐಎಎಸ್‌ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದವರನ್ನು 2023ರ ಚುನಾವಣೆಯ ವಾರ್‌ ರೂಮ್‌ ಮುಖ್ಯಸ್ಥರನ್ನಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ನೇಮಕ ಮಾಡಿದ್ದಾರೆ.

2019ರಲ್ಲಿ ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳು ನಡೆಯುತ್ತಿದ್ದ ಸಮಯದಲ್ಲಿ ಶಶಿಕಾಂತ್‌ ಸೆಂಥಿಲ್‌ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದರು. ಸಿಎಎ ಹಾಗೂ ಎನ್‌ಆರ್‌ಸಿ ಜಾರಿಗೊಳಿಸುತ್ತಿರುವುದು ಭಾರತದಲ್ಲಿರುವ ಅಲ್ಪಸಂಖ್ಯಾತರನ್ನು ಹಿಂಸಿಸಲು ಎಂದು ಶಶಿಕಾಂತ್‌ ಸೆಂಥಿಲ್‌ ನಂಬಿದ್ದರು. ಕೊನೆಗೆ 2019ರಲ್ಲಿ ಐಎಎಸ್‌ ಹುದ್ದೆಗೆ ರಾಜೀನಾಮೆ ನೀಡಿದ್ದರು. ಪ್ರಜಾಪ್ರಭುತ್ವದ ಅಡಿಪಾಯವೇ ಅಲುಗಾಡುತ್ತಿರುವಾಗ ಐಎಎಸ್‌ ಅಧಿಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುವದಿಲ್ಲ ಎಂದು ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನು ದೂಷಿಸಿದ್ದರು. ಕರ್ನಾಟಕವಷ್ಟೆ ಅಲ್ಲದೆ ದೇಶದ ವಿವಿಧೆಡೆ ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳಲ್ಲಿ ಭಾಗವಹಿಸಿ ಭಾಷಣ ಮಾಡಿದ್ದರು.

ಸಿಎಎ ಹಾಗೂ ಎನ್‌ಆರ್‌ಸಿ ವಿರೋಧ ಮಾಡುತ್ತಿದ್ದ ಕಾಂಗ್ರೆಸ್‌ ಪಕ್ಷವೇ ತಮಗೆ ಸೂಕ್ತ ಎಂದು ರಾಜಕೀಯ ಪಾದಾರ್ಪಣೆ ಮಾಡಿದರು. ಮೂಲತಃ ತಮಿಳುನಾಡಿನ ಮೂಲದವರಾದ ಕಾರಣ, ಅಂದಿನ ತಮಿಳುನಾಡು ಕಾಂಗ್ರೆಸ್‌ ಉಸ್ತುವಾರಿ ಆಗಿದ್ದ ದಿನೇಶ್‌ ಗಂಡೂರಾವ್‌ ನೇತೃತ್ವದಲ್ಲಿ 2020ರ ನವೆಂಬರ್‌ 9ರಂದು ತಮಿಳುನಾಡು ಕಾಂಗ್ರೆಸ್‌ ಸೇರಿಕೊಂಡಿದ್ದರು. ತಮಿಳುನಾಡು ಕಾಂಗ್ರೆಸ್‌ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥರಾಗಿ ನೇಮಕ ಮಾಡಲಾಗಿತ್ತು.

ಇದನ್ನೂ ಓದಿ | ಸಿದ್ದರಾಮೋತ್ಸವ ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮ: ಡಿ.ಕೆ. ಶಿವಕುಮಾರ್‌ ಅಚ್ಚರಿಯ ಹೇಳಿಕೆ

ವಾರ್‌ ರೂಮ್‌ ಮುಖ್ಯಸ್ಥ

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯ ಮೇಲುಸ್ತುವಾರಿ ವಹಿಸಲು ವಾರ್‌ ರೂಮ್‌ ಸ್ಥಾಪಿಸಲಾಗಿದೆ. ಈಗಾಗಲೆ ಕೆಲ ದಿನಗಳಿಂದ ಕಾರ್ಯನಿರ್ವಹಿಸುತ್ತಿರುವ ವಾರ್‌ ರೂಮ್‌ನಲ್ಲಿ ಪ್ರಮುಖವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ವರ್ಚಸ್ಸು ವೃದ್ಧಿ, ವಿರೋಧಿಗಳ ತಂತ್ರಕ್ಕೆ ಪ್ರತಿ ತಂತ್ರ ಹೆಣೆಯುವುದು, ಪ್ರಣಾಳಿಕೆ ಸಿದ್ಧಪಡಿಸುವಿಕೆ ಸೇರಿ ಅನೇಖ ಕೆಲಸ ಮಾಡಲಿದೆ. ಈ ವಾರ್‌ ರೂಮ್‌ ಮುಖ್ಯಸ್ಥರಾಗಿ ಶಶಿಕಾಂತ್‌ ಸೆಂಥಿಲ್‌ ನೇಮಕವಾಗಿದ್ದಾರೆ.

ಒಟ್ಟಾರೆ ವಾರ್‌ ರೂಮ್‌ ಮೇಲುಸ್ತುವಾರಿಯಾಗಿ ಸುನೀಲ್‌ ಕಣುಗೋಲು ಮುಂದುವರಿಯುತ್ತಾರೆ, ಕೆಪಿಸಿಸಿ ಉಪಾಧ್ಯಕ್ಷ ಸೂರಜ್‌ ಹೆಗಡೆ, ಪ್ರಧಾನ ಕಾರ್ಯದರ್ಶಿ ಮೆಹರೋಜ್‌ ಖಾನ್‌, ವಾರ್‌ ರೂಮ್‌ನ ದಿನನಿತ್ಯದ ಚಟುವಟಿಕೆಗಳನ್ನು ನಿರ್ವಹಣೆ ಮಾಡಲಿದ್ದಾರೆ ಎಂದು ವೇಣುಗೋಪಾಲ್‌ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಿಯಾಂಕ್‌ ಖರ್ಗೆ ಹೊಣೆ ಬದಲಾವಣೆ

ಇಲ್ಲಿಯವರೆಗೆ ಕೆಪಿಸಿಸಿ ವಕ್ತಾರರಾಗಿದ್ದ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ಸಂವಹನ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥರಾಗಿ ಕೆ.ಸಿ. ವೇಣುಗೋಪಾಲ್‌ ನೇಮಕ ಮಾಡಿದ್ದಾರೆ. ಉಪಾಧ್ಯಕ್ಷರಾಗಿ, ಇತ್ತೀಚೆಗಷ್ಟೆ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ, ಕಾಂಗ್ರೆಸ್‌ ಹಿರಿಯ ನಾಯಕ ರೆಹಮಾನ್‌ ಖಾನ್‌ ಪುತ್ರ ಮನ್ಸೂರ್‌ ಅಲಿಖಾನ್‌ ನೇಮಕವಾಗಿದ್ದಾರೆ.

ಸಹ ವಕ್ತಾರರಾಗಿದ್ದ ಹಾಗೂ ಇತ್ತೀಚೆಗೆ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾದ ನಾಗರಾಜ ಯಾದವ್‌ ಅವರನ್ನು ಮುಖ್ಯ ವಕ್ತಾರ ಹಾಗೂ ಸಂವಹನ ವಿಭಾಗದ ಸಂಚಾಲಕರಾಗಿ ನೇಮಿಸಲಾಗಿದೆ. ಸಂವಹನ ವಿಭಾಗದ ಉಪಾಧ್ಯಕ್ಷರಾಗಿ ವಿಧಾನ ಪರಿಷತ್‌ಸದಸ್ಯ ದಿನೇಶ್‌ ಗೂಳಿಗೌಡ, ಜೆಡಿಎಸ್‌ ಮಾಜಿ ನಾಯಕ ಹಾಗೂ ಮಾಜಿ ಎಂಎಲ್‌ಸಿ ರಮೇಶ್‌ ಬಾಬು ಅವರನ್ನು ನೇಮಿಸಲಾಗಿದೆ.

ವಕ್ತಾರರು ಹಾಗೂ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿಗಳಾಗಿ ನಾಲ್ವರು ಮಹಿಳೆಯರನ್ನು(ದಕ್ಷಿಣ ಕನ್ನಡದ ಲಾವಣ್ಯ ಬಲ್ಲಾಳ್‌, ಬೆಂಗಳೂರಿನ ಕವಿತಾ ರೆಡ್ಡಿ, ಮೈಸೂರಿನ ಡಾ. ನಾಗಲಕ್ಷ್ಮೀ, ಕೆ.ಆರ್‌. ನಗರ ಮಾಜಿ ಶಾಸಕ ದಿ. ಮಂಚನಹಳ್ಳಿ ಮಹದೇವ್‌ ಪುತ್ರಿ ಐಶ್ವರ್ಯ ಮಹದೇವ್‌) ಅವರನ್ನು ನೇಮಕ ಮಾಡಲಾಗಿದೆ.

ಇದನ್ನೂ ಓದಿ | ವಿಧಾನ ಪರಿಷತ್‌ 7 ಅಭ್ಯರ್ಥಿಗಳ ಅರ್ಜಿ ಸ್ವೀಕೃತ: ಔಪಚಾರಿಕ ಘೋಷಣೆ ಬಾಕಿ

Exit mobile version