Site icon Vistara News

ಶಾಸಕ ಜಮೀರ್‌ ಆದಾಯ ₹4 ಕೋಟಿ, ಅಕ್ರಮ ಆಸ್ತಿ ₹87 ಕೋಟಿ: ಇ.ಡಿ. ವರದಿಯಲ್ಲಿ ಬಹಿರಂಗ

ಜಮೀರ್‌ ಅಹ್ಮದ್

ಬೆಂಗಳೂರು: ಇತ್ತೀಚೆಗಷ್ಟೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಳಿ ಎದುರಿಸಿದ್ದ ಚಾಮರಾಜಪೇಟೆ ಶಾಸಕ ಬಿ.ಜಡ್‌. ಜಮೀರ್‌ ಅಹ್ಮದ್‌ ಖಾನ್‌ಗೆ ಮತ್ತಷ್ಟು ಸಂಕಷ್ಟ ಕಾದಿದೆ. ಇದೀಗ ಎಸಿಬಿ ದಾಳಿ ವೇಳೆ ಸಿಕ್ಕಿರುವ ಮಾಹಿತಿಗಿಂತಲೂ ಮುಖ್ಯವಾಗಿ ಕಳೆದ ವರ್ಷ ನಡೆದಿದ್ದ ಇ.ಡಿ. ದಾಳಿ ವೇಳೆಯಲ್ಲೆ, ಅಕ್ರಮ ಆಸ್ತಿಗೆ ಪಕ್ಕ ದಾಖಲೆಗಳು ಲಭ್ಯವಾಗಿವೆ. ಜಮೀರ್‌ ಅಹ್ಮದ್‌ ಅವರ ಆಸ್ತಿ ವಾರ್ಷಿಕ 4.3 ಕೋಟಿ ರೂ. ಆಸ್ತಿ ಇದ್ದರೆ, ಲೆಕ್ಕವಿಲ್ಲದ ಆಸ್ತಿ ಮಾತ್ರ 87.44 ಕೋಟಿ ಇದೆ ಎನ್ನುವುದು ಪತ್ತೆಯಾಗಿದೆ.

ಸುಮಾರು ಒಂದು ವರ್ಷದ ಹಿಂದೆ 2021ರ ಆಗಸ್ಟ್‌ 5ರಂದು ಚಾಮರಾಜಪೇಟೆ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ದಾಳಿ ನಡೆಸಲಾಗಿತ್ತು. ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿತ್ತು. ಈ ದಾಳಿ ನಡೆದ ಒಂದು ವರ್ಷದ ಒಳಗೆ ಜುಲೈ 5ರಂದು ಎಸಿಬಿ ದಾಳಿ ನಡೆಸಿದೆ.

ಇ.ಡಿ. ದಾಳಿ ವೇಳೆ ಅನೇಕ ದಾಖಲೆಗಳನ್ನು ಕಲೆ ಹಾಕಿತ್ತು. ಜಮೀರ್‌ ಅವರ ಆದಾಯ ಹಾಗೂ ಅವರ ಒಟ್ಟು ಆಸ್ತಿ ಮೌಲ್ಯವನ್ನು ತಾಳೆ ನೋಡಿತ್ತು. ಇದೆಲ್ಲದರ ನಂತರ ವರದಿಯನ್ನು ಸಿದ್ಧಪಡಿಸಿದೆ. ಅದರ ಆಧಾರದಲ್ಲಿ, ಜಮೀರ್‌ ಅವರ ಬಳಿ ಒಟ್ಟು ಸುಮಾರು 91 ಕೋಟಿ ರೂ. ಆಸ್ತಿ ಇರುವುದು ತಿಳಿದುಬಂದಿದೆ.

ಆದರೆ ಜಮೀರ್‌ ಅಹ್ಮದ್‌ ಅವರ ಒಟ್ಟು ವಾರ್ಷಿಕ ಆದಾಯ ಸುಮಾರು 4.3 ಕೋಟಿ ರೂ. ಎಂಬುದಕ್ಕೆ ಮಾತ್ರ ದಾಖಲೆ ಪತ್ತೆಯಾಗಿದೆ. ಉಳಿದ 87,44,05,057 ರೂ. ಆಸ್ತಿಗೆ ಆದಾಯದ ಮೂಲ ಒದಗಿಸುವಲ್ಲಿ ಜಮೀರ್‌ ವಿಫಲರಾಗಿದ್ದಾರೆ. ಅಂದರೆ ʻಆದಾಯಕ್ಕಿಂತ ಶೇ.2031 ಅಕ್ರಮ ಆಸ್ತಿಯನ್ನು ಹೊಂದಿರುವುದು ಪತ್ತೆಯಾಗಿದೆʼ ಎಂದು ಇ.ಡಿ. ವರದಿಯಲ್ಲಿ ತಿಳಿಸಿದೆ. ಈ ವರದಿಯನ್ನು ಎಸಿಬಿಗೆ ನೀಡಲಾಗಿದ್ದು, ಅದರ ಆಧಾರದಲ್ಲಿ ಎಸಿಬಿ ದಾಳಿ ನಡೆಸಿದೆ.

ಈ ಕುರಿತು ಪತ್ರಿಕಾ ಹೇಳಿಕೆಯನ್ನು ಎಸಿಬಿ ಬಿಡುಗಡೆ ಮಾಡಿದೆ. ಭ್ರಷ್ಟಾಚಾರ ನಿಗ್ರಹ ದಳದಿಂದ 2022ರ ಜುಲೈ 5ರಂದು ಬೆಂಗಳೂರು ಮತ್ತು ಗ್ರಾಮಾಂತರ ಜಿಲ್ಲೆಯ ಒಟ್ಟು 85 ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡ 5 ವಿವಿಧ ತಂಡಗಳಿಂದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಅವರಿಗೆ ಸೇರಿದ 4 ಸ್ಥಳಗಳಲ್ಲಿ ದಾಳಿ ನಡೆಸಿದೆ. ಅಸಮತೋಲನ ಆಸ್ತಿ-ಪಾಸ್ತಿಗಳನ್ನು ಹೊಂದಿರುವ ಬಗ್ಗೆ ಜಾರಿ ನಿರ್ದೇಶನಾಲಯ ವರದಿ ಹಾಗೂ ದಾಖಲಾತಿಗಳನ್ನು ಆಧರಿಸಿ ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಿಸಿಏಕ ಕಾಲಕ್ಕೆ ದಾಳಿ ನಡೆಸಲಾಗಿತ್ತು.

ಜಾರಿ ನಿರ್ದೇಶನಾಲಯ ಈ ಹಿಂದೆ ನಡೆಸಿದ ದಾಳಿಯ ಸಂದರ್ಭದಲ್ಲಿ ವಶಪಡಿಸಿಕೊಂಡಿರುವ ಮಾಹಿತಿ ಮತ್ತು ದಾಖಲಾತಿಗಳ ಆಧಾರದಲ್ಲಿ ಶಾಸಕರು 87,44,05,057 ರೂ. (ಶೇ.2031) ಅಕ್ರಮ ಆಸ್ತಿ ಹೊಂದಿದ್ದಾರೆ. ಹೀಗಾಗಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವಾರು ದಾಖಲಾತಿಗಳನ್ನು ಜಪ್ತಿ ಮಾಡಿ ತನಿಖೆಗೆ ಒಳಪಡಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಎಸಿಬಿ ಮಾಹಿತಿ ನೀಡಿದೆ.

ಎಸಿಬಿ ದಾಳಿ ವೇಲೆ ಸಿಕ್ಕ ದಾಖಲೆಗಳ ವಿವರವನ್ನು ಬಹಿರಂಗಪಡಿಸಿಲ್ಲ. ಆದರೆ ಇ.ಡಿ. ಬಳಿ ಇರುವ ದಾಖಲೆಗಳ ಆಧಾರದಲ್ಲೆ ಶಾಸಕ ಜಮೀರ್‌ ಅವರಿಗೆ ಮುಂಬರುವ ದಿನಗಳಲ್ಲಿ ಸಂಕಷ್ಟ ಎದುರಾಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ | ಎಸಿಬಿ ಟೀಕಿಸಿದ ಕಾಂಗ್ರೆಸ್‌ ನಾಯಕರು ಕ್ಷಮೆಯಾಚಿಸಲಿ ಎಂದ ಕೆ.ಎಸ್.ಈಶ್ವರಪ್ಪ, ಸಾಕ್ಷ್ಯ ಕೊಡಿ ಎಂದ ಗೃಹ ಸಚಿವ ಆರಗ

Exit mobile version