ದೇವನಹಳ್ಳಿ: ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಕ್ಕೆ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ (Karave Protest) ಹಿನ್ನೆಲೆಯಲ್ಲಿ ಬಂಧನವಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಸೇರಿ 29 ಕರವೇ ಕಾರ್ಯಕರ್ತರಿಗೆ ದೇವನಹಳ್ಳಿಯ 5ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯವು ಶನಿವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ನಾಪತ್ತೆಯಾಗಿರುವ ನಾಲ್ಕು ಮಂದಿಗೆ ಹೊರತುಪಡಿಸಿ 29 ಮಂದಿಗೆ ಜಾಮೀನು ಮಂಜೂರು ಮಾಡಲಾಗಿದೆ. ಜಾಮೀನು ಅರ್ಜಿ ಸಲ್ಲಿಸಿದ ನಂತರ ಸರ್ಕಾರಿ ಅಭಿಯೋಜಕರ ಅಭಿಪ್ರಾಯವನ್ನು ಕೋರ್ಟ್ ಕೇಳಿತ್ತು. ಸರ್ಕಾರಿ ಅಭಿಯೋಜಕರು ಜ.2ರಂದು ತಮ್ಮ ಅಭಿಪ್ರಾಯವನ್ನು ಕೋರ್ಟ್ ಮುಂದೆ ದಾಖಲಿಸಿದರಾದರೂ ಕೋರ್ಟ್ ತನ್ನ ತೀರ್ಪನ್ನು ಜನವರಿ 6.ಕ್ಕೆ ಕಾಯ್ದಿರಿಸಿತ್ತು. ಇದೀಗ ನಾರಾಯಣಗೌಡರು ಸೇರಿ 29 ಕಾರ್ಯಕರ್ತರಿಗೆ ಕೋರ್ಟ್ ಜಾಮೀನು ನೀಡಿದೆ. ಜೈಲಿನ ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಬಂಧಿತರು ಬಿಡುಗಡೆಯಾಗಲಿದ್ದಾರೆ.
ಜಾಮೀನು ಆದೇಶ ಪೊಲೀಸ್ ಅಧಿಕಾರಿಗಳ ಕೈಗೆ ಸೇರುವುದು ತಡವಾಗುವ ಕಾರಣ, ಕರವೇ ಕಾರ್ಯಕರ್ತರ ಬಿಡುಗಡೆ ಪ್ರಕ್ರಿಯೆ ಸೋಮವಾರಕ್ಕೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ.
ನಾರಾಯಣ ಗೌಡರ ಮೇಲಿನ ಆರೋಪಗಳೇನು?
ಟಿ.ಎ ನಾರಾಯಣ ಗೌಡರು ಡಿಸೆಂಬರ್ 27ರಂದು ಯಲಹಂಕ ಸಮೀಪ ಸಾದಹಳ್ಳಿ ಟೋಲ್‌ಗೇಟ್ ಬಳಿ ಪ್ರತಿಭಟನೆ ನಡೆಸಿದ್ದರು. ಆ ಸಂದರ್ಭದಲ್ಲಿ ಅವರನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದರು. ಸಾದ ಹಳ್ಳಿಯಿಂದ ಮೆರವಣಿಗೆ ಹೊರಡುವುದು ಎಂದು ತೀರ್ಮಾನಿಸಲಾಗಿತ್ತಾದರೂ ಅದಕ್ಕಿಂತ ಮೊದಲೇ ಅವರನ್ನು ಇತರ ಕಾರ್ಯಕರ್ತರು ನಾಯಕರ ಜತೆ ವಶಕ್ಕೆ ಪಡೆಯಲಾಗಿತ್ತು.
ಡಿಸೆಂಬರ್ 27ರ ಮಧ್ಯಾಹ್ನದ ಹೊತ್ತು ವಶಕ್ಕೆ ಪಡೆದ ನಾರಾಯಣ ಗೌಡ ಮತ್ತು ಇತರರನ್ನು ಒಂದು ಕಟ್ಟಡದ ಆವರಣದಲ್ಲಿ ರಾತ್ರಿವರೆಗೂ ಕೂಡಿ ಹಾಕಲಾಗಿತ್ತು. ಸಾಮಾನ್ಯವಾಗಿ ಇಂಥ ಪ್ರತಿಭಟನೆ ಸಂದರ್ಭದಲ್ಲಿ ಹೀಗೆ ವಶಕ್ಕೆ ಪಡೆದು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಪೊಲೀಸರು ರಾತ್ರಿ ಒಂದು ಗಂಟೆವರೆಗೂ ಅವರನ್ನು ಬಿಟ್ಟಿರಲಿಲ್ಲ. ಬಳಿಕ ರಾತ್ರೋರಾತ್ರಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದರು. ಆಗ ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದರು. ಡಿಸೆಂಬರ್ 28ರಂದು ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಹಾಕಲಾಗಿತ್ತು.
ನಾರಾಯಣ ಗೌಡರ ಮೇಲೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪ್ರತಿಭಟನೆ ಮಾಡಿ ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿದ ಆರೋಪವನ್ನು ಹೊರಿಸಲಾಗಿದೆ. ಬೆಂಗಳೂರಿನಲ್ಲಿ ಫ್ರೀಡಂ ಫಾರ್ಕ್ ನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶವಿದೆ. ಆದರೆ, ಕರವೇ ಕಾರ್ಯಕರ್ತರು ನಗರದಾದ್ಯಂತ ಪ್ರತಿಭಟನೆ ನಡೆಸಿದ್ದಲ್ಲದೆ ಕೆಲವೊಂದು ಕಡೆ ದಾಂಧಲೆ ಎಬ್ಬಿಸಿದ್ದರು.
ಇದನ್ನೂ ಓದಿ | Hubballi Riots Case : ಶ್ರೀಕಾಂತ್ ಪೂಜಾರಿ ರಿಲೀಸ್; ಅಯೋಧ್ಯೆಗೆ ಹೋಗ್ತೀನಿ ಎಂದು ಘೋಷಣೆ
ಟಿಎ ನಾರಾಯಣಗೌಡರ ವಿರುದ್ಧ ಎಂಟಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇರುವ ಕಾರಣ ಅವರ ವಿಚಾರಣೆಗೆ ಚಾರಣೆಗೆ ತೊಂದರೆಯಾಗುವ ಕಾರಣ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದರು. ಬಂಧಿಸುವ ಸಂಧರ್ಭದಲ್ಲಿ ಕ್ರಮಬದ್ದ ಬಂಧನಕ್ಕೆ ತಕರಾರು ಒಡ್ಡಿದ್ದರು ಎಂಬ ಆರೋಪವನ್ನೂ ಹೊರಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ