ನವದೆಹಲಿ: ಭಾರತದಲ್ಲಿ ಧರ್ಮ, ಜಾತಿ, ಮತ, ಆಚಾರ, ವಿಚಾರ, ಸಂಪ್ರದಾಯ, ಆಚರಣೆ, ನಂಬಿಕೆಗಳಲ್ಲಿ ಎಷ್ಟು ವೈವಿಧ್ಯತೆ ಇದೆಯೋ, ಆಹಾರ, ತಿನಿಸುಗಳಲ್ಲೂ ಅಷ್ಟೇ ವೈವಿಧ್ಯತೆ ಇದೆ. ಆಹಾರ, ತಿನಿಸು ನಮ್ಮ ಸಂಸ್ಕೃತಿ, ಸಂಪ್ರದಾಯದ ಭಾಗವೇ ಆಗಿದೆ. ಹಾಗಾಗಿ, ದೇಶದ ಯಾವುದೇ ಮೂಲೆಗೆ ಹೋಗಿ, ನಾಲಗೆಯ ರುಚಿ ಗ್ರಂಥಿಗಳು ಬೇರೆಯದ್ದೇ ಅನುಭವ ಪಡೆಯುತ್ತವೆ. ಬೇರೆ ರುಚಿಯನ್ನೇ ಸವಿಯುತ್ತೇವೆ. ಈಗ, ವಿಶ್ವದ 50 ಬೆಸ್ಟ್ ಸ್ಟ್ರೀಟ್ ಫುಡ್ ಸ್ವೀಟ್‌ಗಳ ಪಟ್ಟಿ ಪ್ರಕಟವಾಗಿದ್ದು, ಭಾರತದ ಮೂರು ತಿನಿಸುಗಳು (Street Food Sweets) ಇವುಗಳಲ್ಲಿ ಸ್ಥಾನ ಪಡೆದಿರುವುದೇ ಭಾರತದ ಆಹಾರ ವೈವಿಧ್ಯತೆಗೆ ಸಾಕ್ಷಿಯಾಗಿದೆ. ಪಟ್ಟಿಯಲ್ಲಿ ಕರ್ನಾಟಕದ ಮೈಸೂರು ಪಾಕ್ ಕೂಡ ಇದೆ ಎಂಬುದು ಇನ್ನೂ ಗಮನಾರ್ಹ ಸಂಗತಿಯಾಗಿದೆ.
ಹೌದು, ಭಾರತದ ಕುಲ್ಫಿ, ಕುಲ್ಫಿ ಫಾಲುದಾ ಹಾಗೂ ಕರ್ನಾಟಕದ ಮೈಸೂರು ಪಾಕ್ ಜಗತ್ತಿನ 50 ಅತ್ಯುತ್ತಮ ಬೀದಿ ಬದಿ ಸಿಹಿ ತಿನಿಸು ಎನಿಸಿವೆ. ಟೇಸ್ಟ್ ಅಟ್ಲಾಸ್ (Taste Atlas) ಎಂಬ ಸಂಸ್ಥೆಯು ಇನ್‌ಸ್ಟಾಗ್ರಾಮ್‌ನಲ್ಲಿ ಪಟ್ಟಿಯನ್ನು ಹಂಚಿಕೊಂಡಿದೆ. 50 ತಿನಿಸುಗಳ ಜಾಗತಿಕ ಪಟ್ಟಿಯಲ್ಲಿ ಮೈಸೂರು ಪಾಕ್ 14, ಕುಲ್ಫಿ 18 ಹಾಗೂ ಕುಲ್ಫಿ ಫಾಲುದಾ 32ನೇ ಸ್ಥಾನ ಪಡೆದಿವೆ.
ಪೋರ್ಚುಗಲ್‌ನ ಪ್ಯಾಸ್ಟೆಲ್ ಡೆ ನಾಟಾ, ಇಂಡೋನೇಷ್ಯಾದ ಸೆರಾಬಿ, ಟರ್ಕಿಯ ದೊಂಡುರ್ಮಾ, ದಕ್ಷಿಣ ಕೊರಿಯಾದ ಹೊಟ್ಟೆಯೋಕ್ ಹಾಗೂ ಥೈಲ್ಯಾಂಡ್‌ನ ಪಾ ಥಾಂಗ್ ಕೊ ಕ್ರಮವಾಗಿ ಒಂದರಿಂದ ಐದನೇ ಸ್ಥಾನದಲ್ಲಿವೆ. ಪಟ್ಟಿಯಲ್ಲಿ ಭಾರತದ ಮೂರು ತಿನಿಸುಗಳು ಸ್ಥಾನ ಪಡೆದಿರುವುದಕ್ಕೆ ಭಾರತೀಯರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಮುಲ್‌ನಿಂದ ಮೈಸೂರು ಪಾಕ್ ತಯಾರಾದರೆ, ನಂದಿನಿಯಿಂದ ಗುಜರಾತ್‌ನ ಶ್ರೀಖಂಡ ತಯಾರು: ಬೊಮ್ಮಾಯಿ ಸವಾಲು
ಮೈಸೂರು ಪಾಕ್ ಕೂಡ ಪಟ್ಟಿಯಲ್ಲಿರುವುದಕ್ಕೆ ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಹಾಗೆಯೇ, ಗೊಂದಲದ ಪ್ರಶ್ನೆಯೊಂದನ್ನು ಅವರು ಕೇಳಿದ್ದಾರೆ. “ಇದು ತುಪ್ಪದ ಮೈಸೂರು ಪಾಕ್ ಇದೆಯಾ ಅಥವಾ ಹಾಲಿನ ಮೈಸೂರು ಪಾಕ್” ಎಂದು ಪ್ರಶ್ನಿಸಿದ್ದಾರೆ. ಹಾಗೆಯೇ, ಕುಲ್ಫಿ ಹಾಗೂ ಕುಲ್ಫಿ ಫಾಲುದಾ ನನ್ನ ಫೇವರಿಟ್ ಎಂದಿದ್ದಾರೆ.