Site icon Vistara News

Karnataka CM : 30:30 ಫಾರ್ಮುಲಾ ಸಿಎಂ, ಡಿಸಿಎಂಗೆ ಮಾತ್ರ ಅಲ್ಲ; ಸಚಿವರು, ನಿಗಮ ಮಂಡಳಿಗೂ ವಿಸ್ತರಣೆ?

30:30 forrmula may be extended to ministers, boad and corporation also

30:30 forrmula may be extended to ministers, boad and corporation also

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ (Congress party) ರೂಪಿಸಿದೆ ಎಂದು ಹೇಳಲಾಗುತ್ತಿರುವ 30:30 ಫಾರ್ಮುಲಾ (30:30 Formula) ಎಂಬ ಒಬ್ಬರಿಗೆ 30 ತಿಂಗಳು ಅಧಿಕಾರ ನೀಡುವ ಹಂಚಿಕೆ ಸೂತ್ರವನ್ನು ಮುಖ್ಯಮಂತ್ರಿ (Karnataka CM) ಮತ್ತು ಉಪಮುಖ್ಯಮಂತ್ರಿಗಳಿಗೆ ಮಾತ್ರ ಸೀಮಿತಗೊಳಿಸದೆ ಸಚಿವರು ಹಾಗೂ ನಿಗಮ ಮತ್ತು ಮಂಡಳಿಗಳಿಗೂ (Boards and corporation) ವಿಸ್ತರಿಸುವ ಸಾಧ್ಯತೆ ಕಂಡುಬಂದಿದೆ.

ಹಿರಿಯ ನಾಯಕರಾದ ಸಿದ್ದರಾಮಯ್ಯ (Siddaramaiah) ಮತ್ತು ಡಿ.ಕೆ. ಶಿವಕುಮಾರ್‌ (DK Shivakumar) ಅವರ ನಡುವಿನ ನಾಯಕತ್ವ ಬಿಕ್ಕಟ್ಟನ್ನು ಬಗೆಹರಿಸುವ ಉದ್ದೇಶದಿಂದ ರೂಪಿಸಲಾದ ಈ ಸೂತ್ರವನ್ನು ಪಕ್ಷದಿಂದ ಗೆದ್ದ ಎಲ್ಲ ಶಾಸಕರಿಗೆ, ಪಕ್ಷಕ್ಕಾಗಿ ದುಡಿದ ನಾಯಕರಿಗೆ ಅಧಿಕಾರ ನೀಡುವುದಕ್ಕಾಗಿ ವಿಸ್ತರಿಸುವ ಪ್ಲ್ಯಾನ್‌ ಅನ್ನು ಪಕ್ಷ ಹೊಂದಿದೆ ಎಂದು ಹೇಳಲಾಗುತ್ತಿದೆ.

ಶನಿವಾರ (ಮೇ 20) ನಡೆಯಲಿರುವ ಸಿಎಂ, ಡಿಸಿಎಂ ಮತ್ತು ಎಂಟು ಮಂದಿ ಸಚಿವರ ಪ್ರಮಾಣವಚನದ ನಡುವೆಯೇ ಈ ಮಾಹಿತಿಯನ್ನು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಸಿಎಂ ಸೇರಿದಂತೆ 34 ಮಂತ್ರಿ ಹುದ್ದೆಗಳಿವೆ. 30:30 ಅಧಿಕಾರ ಹಂಚಿಕೆ ಸೂತ್ರ ಜಾರಿಗೆ ಬಂದರೆ ಕನಿಷ್ಠ 67 ಜನರಿಗಾದರೂ ಅಧಿಕಾರ ಸಿಕ್ಕಿದಂತಾಗುತ್ತದೆ.

ರಾಜ್ಯದಲ್ಲಿ ಸುಮಾರು 75ಕ್ಕೂ ಅಧಿಕ ನಿಗಮ ಮತ್ತು ಮಂಡಳಿಗಳಿವೆ. ಇದಕ್ಕೂ 30 ತಿಂಗಳ ಅಧಿಕಾರಾವಧಿ ಸೂತ್ರವನ್ನು ವಿಸ್ತರಿಸಿದರೆ 150ರಷ್ಟು ನಾಯಕರಿಗೆ ಅಧಿಕಾರ ನೀಡಿದಂತಾಗುತ್ತದೆ. ಮಂತ್ರಿಗಿರಿ ಸಿಗದಿರುವ ಶಾಸಕರಲ್ಲಿ ಕೆಲವರಿಗೆ ನಿಗಮ ಮತ್ತು ಮಂಡಳಿ ಜವಾಬ್ದಾರಿ ನೀಡಬಹುದು ಮತ್ತು ಪಕ್ಷಕ್ಕಾಗಿ ಕೆಲಸ ಮಾಡಿದ ನಾಯಕರಿಗೂ ಅವಕಾಶ ನೀಡಲು ಒಳ್ಳೆಯ ದಾರಿಯಾಗುತ್ತದೆ ಎನ್ನುವುದು ಆಂತರಿಕ ಮೂಲಗಳ ಅಭಿಪ್ರಾಯ.

ಇದರ ಜತೆಗೆ ಸ್ಪೀಕರ್‌, ಡೆಪ್ಯುಟಿ ಸ್ಪೀಕರ್‌, ರಾಜಕೀಯ ಕಾರ್ಯದರ್ಶಿಗಳು ಸೇರಿದಂತೆ ಸಂಪುಟ ದರ್ಜೆಯ ಕನಿಷ್ಠ ಆರಕ್ಕೂ ಹೆಚ್ಚು ಹುದ್ದೆಗಳಿಗೆ ಅವಕಾಶವಿದೆ.

ಇದರಿಂದ ಏನೇನು ಲಾಭ?

1.ಬಹುತೇಕ ಪ್ರಮುಖ ನಾಯಕರಿಗೆ ಸರ್ಕಾರದಲ್ಲಿ ಕಾರ್ಯ ನಿರ್ವಹಿಸಲು ಅವಕಾಶ.
2. ಎರಡೂವರೆಗೆ ವರ್ಷದ ಅಧಿಕಾರ ಅವಧಿ ಎಂದು ಮೊದಲೇ ಗೊತ್ತಿದ್ದರೆ ತ್ವರಿತವಾಗಿ ಉತ್ತಮ ಕೆಲಸ ಮಾಡಲು ಅವಕಾಶ.
3. ಹೊಸ ಶಕ್ತಿ ತುಂಬಲು ಅನುಕೂಲ, ಯುವಜನರಿಗೂ ಅವಕಾಶ.
4. ತಮಗೆ ಅಧಿಕಾರ ಸಿಕ್ಕಿಲ್ಲ ಎಂದು ಪ್ರಧಾನ ವಾಹಿನಿಯಲ್ಲಿರುವ ಯಾರೂ ಗೊಣಗುವಂತಿಲ್ಲ.

ಸಮನ್ವಯ ಸಮಿತಿ ರಚನೆ ಸಾಧ್ಯತೆ

ರಾಜ್ಯ ಸಚಿವ ಸಂಪುಟ, ನಿಗಮ ಮತ್ತು ಮಂಡಳಿಗಳ ನಿರ್ವಹಣೆ ಸೇರಿದಂತೆ ನಾಯಕರ ನಡುವೆ ಸಮನ್ವಯವನ್ನು ಕಾಯ್ದುಕೊಳ್ಳುವುದಕ್ಕಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವು ಸಮನ್ವಯ ಸಮಿತಿಯೊಂದನ್ನು ರಚಿಸುವ ಸಾಧ್ಯತೆ ಕಂಡುಬಂದಿದೆ.

ರಾಜ್ಯ ಚುನಾವಣಾ ಉಸ್ತುವಾರಿಯಾಗಿರುವ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರೇ ಈ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಸಾಧ್ಯತೆ ಇದೆ. ಜತೆಗೆ ಇತರ ಕೆಲವರಿಗೂ ಇದರಲ್ಲಿ ಅವಕಾಶ ಸಿಗಬಹುದು.

30:30 ಸೂತ್ರ ಕಡ್ಡಾಯ ಪಾಲನೆ ಅಗತ್ಯ

ಈಗ ಅನಧಿಕೃತವಾಗಿ ರೂಪಿಸಲಾಗಿರುವ 30:30 ಅಧಿಕಾರ ಹಂಚಿಕೆ ಸೂತ್ರವನ್ನು ಯಾವುದೇ ಗೊಂದಲವಿಲ್ಲದೆ ಪಾಲಿಸಬೇಕು ಎನ್ನುವುದು ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್‌. ಶಂಕರ್‌ ಅವರ ಮಾತು. ʻʻಪಕ್ಷದ ಶಿಸ್ತು ಪಾಲನೆ ನಿಯಮಗಳ ಪ್ರಕಾರ ನಾವು ಆಂತರಿಕ ವಿಚಾರಗಳನ್ನು ಹೊರಗಡೆ ಮಾತನಾಡುವಂತಿಲ್ಲ. ಆದರೆ, ಅಧಿಕಾರ ಹಂಚಿಕೆ ಸೂತ್ರ ಪಕ್ಷದ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಅತ್ಯಂತ ಅಗತ್ಯ ಎಂದು ನಾವು ಹೇಳುವುದರಲ್ಲಿ ತಪ್ಪಿಲ್ಲ. ಮೊದಲ ಹಂತದಲ್ಲಿ 30 ತಿಂಗಳ ಅಧಿಕಾರ ಪಡೆದವರು ಮುಂದಿನ ಅವಧಿಗೆ ಬೇರೆಯವರಿಗೆ ಅಧಿಕಾರ ಬಿಟ್ಟುಕೊಡುವ ಸೌಜನ್ಯವನ್ನು ತೋರಬೇಕುʼʼ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Karnataka CM: ಸ್ಟಾಲಿನ್‌, ನಿತೀಶ್‌, ಪವಾರ್- ಪ್ರಮಾಣ ವಚನಕ್ಕೆ ಆಗಮಿಸುವವರು ಯಾರ್ಯಾರು?

Exit mobile version