ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯ ತೊಟ್ಟಿಲುಮಡು ಜಾತ್ರೆಯಲ್ಲಿ ಹೆಜ್ಜೇನು ದಾಳಿಯಿಂದ (Honeybee Attack) 35ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, 17 ಮಂದಿ ಸ್ಥಿತಿ ಗಂಭೀರವಾಗಿದೆ.
ಪ್ರತಿ ವರ್ಷ ಮೇಲುಕೋಟೆಯಲ್ಲಿ ತೊಟ್ಟಿಲುಮಡು ಜಾತ್ರೆ ನಡೆಯುತ್ತದೆ. ಹೀಗಾಗಿ ಬುಧವಾರ ಅಷ್ಠ ತೀರ್ಥೋದ್ಭವ ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸಿದ್ದರು. ಈ ವೇಳೆ ಏಕಾಏಕಿ ಹೆಜ್ಜೇನು ದಾಳಿ ನಡೆಸಿದ್ದರಿಂದ 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪಾಂಡವಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ 17 ಜನರನ್ನು ಮೈಸೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ | Coconut thief : ಇವನು ಸಾಮಾನ್ಯನಲ್ಲ, ಕಾರಲ್ಲಿ ಬಂದು ಎಳನೀರು ಕದಿಯೋ ರಮ್ಮಿ ಪ್ಲೇಯರ್!
ಸಿಲಿಂಡರ್ ಸ್ಫೋಟಕ್ಕೆ ಮನೆಯೇ ಛಿದ್ರ; ಒಂದೇ ಕುಟುಂಬದ 7 ಮಂದಿ ಗಂಭೀರ
ಬೆಂಗಳೂರು: ಬೆಂಗಳೂರಿನ ಅಂಜನಾಪುರ ಸಮೀಪದ ವೀವರ್ಸ್ ಕಾಲೋನಿಯ ಮಾರುತಿ ಲೇಔಟ್‌ನಲ್ಲಿ ಸಿಲಿಂಡರ್ (Cylinder Blast) ಸ್ಫೋಟಗೊಂಡಿದ್ದು, ಒಂದೇ ಕುಟುಂಬದ ಏಳು ಮಂದಿ ಗಾಯಗೊಂಡಿದ್ದಾರೆ.
ಮಾರ್ಟಿನ್ ಎಂಬುವವರಿಗೆ ಸೇರಿದ ಮನೆಯಲ್ಲಿ ಐದು ಮಂದಿ ಬಾಡಿಗೆ ಪಡೆದು ವಾಸವಾಗಿದ್ದರು. ಉತ್ತರ ಪ್ರದೇಶದ ಬನಾರಸ್ ಮೂಲದ ಜಮಾಲ್(32), ನಾಜಿಯಾ(22) ಹಾಗೂ ಇರ್ಫಾನ್ (21), ಗುಲಾಬ್ (18), ಶಹಜಾದ್ (9) ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬುಧವಾರ ಮುಂಜಾನೆ 5:30ರ ಸುಮಾರಿಗೆ ಅಡುಗೆ ಮನೆಯ ಲೈಟ್ ಸ್ವಿಚ್ ಆನ್ ಮಾಡಿದಾಗ ಸ್ಫೋಟಗೊಂಡಿದೆ. ಅಡುಗೆ ಅನಿಲ ಸೋರಿಕೆಯಾಗಿರುವುದು ತಿಳಿಯದೆ ಲೈಟ್ ಆನ್ ಮಾಡಿದ್ದೆ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಸಿಲಿಂಡರ್ ಸ್ಫೋಟದ ತೀವ್ರತೆಗೆ ಮನೆಯೇ ಧ್ವಂಸವಾಗಿದೆ. ಮನೆಯ ಚಾವಣಿಯ ಹಾರಿ ಹೋಗಿದ್ದು ಕಿಟಕಿ, ಬಾಗಿಲು ಸೇರಿ ಕಾರಿಡರ್‌ನ ಕಂಬಿಯೂ ಛಿದ್ರಗೊಂಡಿದೆ. ಮನೆಯೊಳಗಿನ ವಸ್ತುಗಳು ಛಿದ್ರಗೊಂಡ ತೀವ್ರತೆಗೆ ಮನೆಯ ಮುಂಭಾಗ ನಿಲ್ಲಿಸಿದ್ದ ಕಾರಿನ ಗಾಜು ಪುಡಿ ಪುಡಿಯಾಗಿದೆ.
ಇದನ್ನೂ ಓದಿ | Engagement Ring : ನಿಶ್ಚಿತಾರ್ಥದ ಉಂಗುರ ಕಳೆದು ಹೋಗಿದ್ದಕ್ಕೆ ವಿಷ ಸೇವಿಸಿದ!
ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಣನಕುಂಟೆ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಸಿಲಿಂಡರ್ ಸ್ಫೋಟಕ್ಕೆ ಪಕ್ಕದ ಮನೆ ನಿವಾಸಿ ಈಶ್ವರಮ್ಮ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.