ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಉರುಳಿದ್ದರಿಂದ (Road Accident) 35 ಜನರು ಗಾಯಗೊಂಡಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರಿನ ಬಸವನ ಬೆಟ್ಟದಲ್ಲಿ ನಡೆದಿದೆ. ಗಾಯಾಳುಗಳ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ.
ಮಳವಳ್ಳಿ ತಾಲೂಕಿನ ತಮ್ಮಡಹಳ್ಳಿ ಗ್ರಾಮಸ್ಥರು ಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ದೇವರ ದರ್ಶನ ಮುಗಿಸಿ ವಾಪಸಾಗುವ ವೇಳೆ ದುರ್ಘಟನೆ ನಡೆದಿದೆ. ಕ್ಯಾಂಟರ್ ಉರುಳಿದ್ದರಿಂದ ಸುಮಾರು 30 ರಿಂದ 35 ಜನರಿಗೆ ಗಾಯಗಳಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಹಲಗೂರು ಹಾಗೂ ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | Cyber Crime: ಬೆಂಗಳೂರಿನಲ್ಲಿ ಖತರ್ನಾಕ್ ಹ್ಯಾಕರ್ ಬಂಧನ; 4.16 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ
ಮಂಡ್ಯದಲ್ಲಿ ಅಟ್ಟಾಡಿಸಿ ಯುವಕನ ಭೀಕರ ಕೊಲೆ
ಮಂಡ್ಯ: ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯದ ಗಾಂಧಿನಗರ 4ನೇ ಕ್ರಾಸ್‌ನಲ್ಲಿ ನಡೆದಿದೆ. ಅಕ್ಷಯ್ ಅಲಿಯಾಸ್ ಗಂಟ್ಲು (22) ಕೊಲೆಯಾದ ಯುವಕ. ಹಳೇ ದ್ವೇಷಕ್ಕೆ ಕೊಚ್ಚಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದಾಗ ದುಷ್ಕರ್ಮಿಗಳು ದಾಳಿ ನಡೆಸಿ ಕೊಂದಿದ್ದಾರೆ.
ಯುವಕನನ್ನು ಸುಮಾರು 100 ಮೀಟರ್ ಅಟ್ಟಾಡಿಸಿ ಮನಸೋ ಇಚ್ಛೆ ಹಲ್ಲೆ ನಡೆಸಲಾಗಿದೆ. ಈ ವೇಳೆ ತಪ್ಪಿಸಿಕೊಳ್ಳಲು ಮನೆಯೊಂದರ ಕಾಂಪೌಂಡ್ ಒಳಗೆ ನುಗ್ಗಿದರೂ ಆತನನ್ನು ಬಿಡದೆ ಹಲ್ಲೆ ಮಾಡಿ ಕೊಲ್ಲಲಾಗಿದೆ. ಐದು ಮಂದಿ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಸ್ಥಳಕ್ಕೆ ಪಶ್ಚಿಮ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.