ಬೆಂಗಳೂರು: ಮೂರು ಆಯಾಮದಲ್ಲಿ ಪ್ರಿಂಟ್ (3D printed building) ಆದ ದೇಶದ ಮೊದಲ ಅಂಚೆ ಕಚೇರಿಯನ್ನು (3D printed post office) ರಾಜ್ಯ ರಾಜಧಾನಿಯಲ್ಲಿ ಉದ್ಘಾಟಿಸಲಾಗಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮಾಹಿತಿ ತಂತ್ರಜ್ಞಾನ ( Information Technology) ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಇದನ್ನು ಕೇಂಬ್ರಿಡ್ಜ್ ಲೇಔಟ್‌ನಲ್ಲಿ ಉದ್ಘಾಟಿಸಿದ್ದಾರೆ.
ಬೆಂಗಳೂರಿನ ಹಲಸೂರು ಬಜಾರ್ ಬಳಿಯ ಕೇಂಬ್ರಿಡ್ಜ್ ಲೇಔಟ್‌ನಲ್ಲಿ 1100 ಚದರ ಅಡಿ ವಿಸ್ತೀರ್ಣದ ಅಂಚೆ ಕಚೇರಿ (3D printed post office) ಉದ್ಘಾಟನಾ ಸಮಾರಂಭ ನಡೆಯಿತು. “ಬೆಂಗಳೂರು ನಗರ ಯಾವಾಗಲೂ ಭಾರತದ ಹೊಸ ಸ್ವರೂಪವನ್ನು ಪ್ರತಿನಿಧಿಸುತ್ತದೆ. ಈಗ ನೀವು ನೋಡುತ್ತಿರುವ ಮೂರು ಆಯಾಮದ ಮುದ್ರಿತ ಅಂಚೆ ಕಚೇರಿಯು ಇಂದಿನ ಭಾರತದ ಚೈತನ್ಯವಾಗಿದೆ. ಇದು ಭಾರತದ ಪ್ರಗತಿಯ ಚೈತನ್ಯ. ನಮ್ಮ ಅಭಿವೃದ್ಧಿ, ನಮ್ಮ ತಂತ್ರಜ್ಞಾನದ ಅಭಿವೃದ್ಧಿಗಳು ಇದರಲ್ಲಿ ಮೇಳೈಸಿವೆ. ಇದು ಸಾಧ್ಯವಾಗಿರುವುದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಂಥ ನಿರ್ಧಾರಾತ್ಮಕ ನಾಯಕತ್ವವನ್ನು ನಾವು ಹೊಂದಿರುವುದರಿಂದʼʼ ಎಂದು ಅಶ್ವಿನಿ ವೈಷ್ಣವ್ ಹೇಳಿದರು.
“ಕಳೆದ ಒಂಬತ್ತು ವರ್ಷಗಳಲ್ಲಿ, ಪ್ರಧಾನಿ ಮೋದಿಯವರ (PM Narendra Modi) ನಾಯಕತ್ವದಲ್ಲಿ, ದೇಶವು ವಂದೇ ಭಾರತ್ ಆಗಿರಲಿ, 4G ಮತ್ತು 5G ಆಗಿರಲಿ ಹೀಗೆ ಅನೇಕ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ. ಅದೇ ಉತ್ಸಾಹದಲ್ಲಿ 3D-ಮುದ್ರಿತ ಕಾಂಕ್ರೀಟ್ ಕಟ್ಟಡವನ್ನು ನಿರ್ಮಿಸಲಾಗಿದೆ. ಐಐಟಿ ಮದ್ರಾಸ್ ಈ ಬಗ್ಗೆ ಅಸಾಧಾರಣ ಕೆಲಸವನ್ನು ಮಾಡಿದೆ” ಎಂದು ವೈಷ್ಣವ್ ಹೇಳಿದರು.
ಏನಿದು 3D ಮುದ್ರಣದ ಕಟ್ಟಡ?
ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್‌ನಲ್ಲಿ ಉದ್ಘಾಟನೆಯಾಗಿರುವ 3D-ಮುದ್ರಿತ ಅಂಚೆ ಕಚೇರಿ ದೇಶದಲ್ಲೇ ಮೊದಲನೆಯದು. ಈ ಅಂಚೆ ಕಚೇರಿಯ ನಿರ್ಮಾಣದ ವೆಚ್ಚ ಸಾಂಪ್ರದಾಯಿಕ ಕಟ್ಟಡಕ್ಕಿಂತ 30ರಿಂದ 40 ಪ್ರತಿಶತದಷ್ಟು ಕಡಿಮೆ. 30 ದಿನಗಳಲ್ಲಿ ಇದರ ನಿರ್ಮಾಣ ಪೂರ್ಣಗೊಂಡಿದೆ. 1100 ಚದರ ಅಡಿ ವಿಸ್ತೀರ್ಣದ ಅಂಚೆ ಕಚೇರಿ ನಿರ್ಮಾಣಕ್ಕೆ ಸುಮಾರು 23 ಲಕ್ಷ ರೂ. ತಗುಲಿದೆ. ಇದರ 3D ಮುದ್ರಣಕ್ಕಾಗಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮತ್ತು IIT-ಮದ್ರಾಸ್‌ನ ಬಿಲ್ಡಿಂಗ್ ಮೆಟೀರಿಯಲ್ಸ್ ಮತ್ತು ಟೆಕ್ನಾಲಜಿ ಪ್ರಮೋಷನ್ ಕೌನ್ಸಿಲ್‌ನಿಂದ ಅನುಮತಿ ಪಡೆದಿದೆ.
3D ಮುದ್ರಣ ತಂತ್ರಜ್ಞಾನದ ಬಳಕೆಯು ನಿರ್ಮಾಣ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ಕಟ್ಟಡ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಭಾರತದಲ್ಲಿ ಮೊದಲ ಬಾರಿಗೆ 3D ಮುದ್ರಣ ತಂತ್ರಜ್ಞಾನವನ್ನು ಬಳಸಿಕೊಂಡು 700 ಚದರ ಅಡಿ ಕಟ್ಟಡವನ್ನು 2020ರಲ್ಲಿಯೇ ಯಶಸ್ವಿಯಾಗಿ ನಿರ್ಮಿಸಲಾಗಿದೆ. ಇದನ್ನು ಕಟ್ಟಿದ್ದು L&T ಕಂಪನಿ. ಸುಲಭವಾಗಿ ಲಭ್ಯವಿರುವ ಸಾಮಾನ್ಯ ನಿರ್ಮಾಣ ಸಾಮಗ್ರಿಗಳಿಂದ ಮಾಡಿದ ಕಾಂಕ್ರೀಟ್ ಮಿಶ್ರಣವನ್ನು ಬಳಸಿಕೊಂಡು, ಸ್ವಯಂಚಾಲಿತ 3D ಪ್ರಿಂಟರ್ ಅನ್ನು ಬಳಸಿ ತಮಿಳುನಾಡಿನ ಕಾಂಚೀಪುರಂನಲ್ಲಿ ಇದನ್ನು ಮಾಡಲಾಗಿದೆ.