Site icon Vistara News

Child dead in ambulance : ಸಕಾಲದಲ್ಲಿ ಬಾರದ ಆಂಬ್ಯುಲೆನ್ಸ್‌ ರಕ್ಷಣೆ, ನಾಲ್ಕು ದಿನದ ಹಸುಗೂಸು ದಾರಿ ಮಧ್ಯೆಯೇ ಸಾವು

Child death

#image_title

ಮೈಸೂರು: ಸಕಾಲದಲ್ಲಿ ಬಾರದ ಆಂಬ್ಯುಲೆನ್ಸ್‌, ಕೊನೆಗೊಮ್ಮೆ ಬಂದರೂ ಅದರಲ್ಲಿ ಯಾವುದೇ ಜೀವರಕ್ಷಕ ವ್ಯವಸ್ಥೆ ಇಲ್ಲದ ಕಾರಣ ನಾಲ್ಕು ದಿನದ ಹಸುಗೂಸೊಂದು ವಾಹನದ ಒಳಗೇ ಹೆತ್ತವರ ಕೈಯಲ್ಲೇ ಪ್ರಾಣ ಬಿಟ್ಟಿದೆ (Child dead in ambulance). ಈ ಹೃದಯ ವಿದ್ರಾವಕ ಘಟನೆ ನಡೆದಿರುವುದು ಮೈಸೂರು ಜಿಲ್ಲೆ ಎಚ್.ಡಿ ಕೋಟೆ ತಾಲೂಕಿನ ಬುಂಡನಮಾಳ ಗ್ರಾಮದಲ್ಲಿ.

ಬುಂಡನಮಾಳ ಗ್ರಾಮದ ಶೀಲಾ ಮತ್ತು ಮಹದೇವಸ್ವಾಮಿ ದಂಪತಿಯ ನಾಲ್ಕು ದಿನದ ಮಗು ಹೀಗ ಜೀವ ಕಳೆದುಕೊಂಡ ಹಸುಗೂಸು. ಎನ್.ಬೇಗೂರು- ಎಚ್.ಡಿ.ಕೋಟೆ ಮಾರ್ಗ ಮಧ್ಯೆಯ ಬಿದರಹಳ್ಳಿ ಬಳಿ ಮಗುವಿನ ಉಸಿರು ನಿಂತಿದೆ.

ನಾಲ್ಕು ದಿನದ ಹಿಂದಷ್ಟೇ ಹುಟ್ಟಿದ ಮಗುವಿಗೆ ಗುರುವಾರ ಸಂಜೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಪೋಷಕರು ಕೂಡಲೇ ಮಗುವನ್ನು ಬೇಗೂರು ಆಸ್ಪತ್ರೆಗೆ ಬೈಕ್‌ನಲ್ಲಿ ಕರೆದೊಯ್ದಿದ್ದರು. ಆದರೆ, ಅಲ್ಲಿ ಮೂಲ ಸೌಕರ್ಯ‌ ಇಲ್ಲದ ಕಾರಣ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಹೇಳಿದರು.

ಈ ನಡುವೆ ಬೇಗೂರಿಗೆ ಮಗುವನ್ನು ಕರೆದೊಯ್ಯಲು ಆಂಬ್ಯುಲೆನ್ಸ್‌ ಸಿಬ್ಬಂದಿಗೆ ಕರೆ ಮಾಡಿದರೆ ಪ್ರತಿಕ್ರಿಯೆ ದೊರೆಯಲಿಲ್ಲ. ಹೀಗಾಗಿ ಬೈಕಿನಲ್ಲಿಯೇ ಮಗುವನ್ನು ಎಚ್.ಡಿ.ಕೋಟೆಗೆ ಕರೆದೊಯ್ದಲು ಪೋಷಕರು ಯತ್ನಿಸಿದರು. ಆದರೆ, ಮಗುವಿನ ಸ್ಥಿತಿ ಭಾರಿ ಕಷ್ಟದಲ್ಲಿತ್ತು. ಉಸಿರು ಕಟ್ಟುತ್ತಿದ್ದ ಮಗುವನ್ನು ಮಗು ಬಾಯಿಗೆ ಉಸಿರು ಊದಿ ಜೀವ ಉಳಿಸಲು ಹರಸಾಹಸ ಮಾಡಿದರು.

ಈ ನಡುವೆ, ಬೈಕ್‌ನಲ್ಲಿ ಸಾಗುತ್ತಿದ್ದಾಗ ಮಾರ್ಗ‌ಮಧ್ಯೆ ಬಂದ ಆಂಬ್ಯುಲೆನ್ಸ್‌ ಸಿಕ್ಕಿತು. ಪೋಷಕರು ಕೂಡಲೇ ಮಗುವನ್ನು ಆಂಬ್ಯುಲೆನ್ಸ್‌ಗೆ ಶಿಫ್ಟ್‌ ಮಾಡಿದರು. ಆದರೆ, ಆಂಬ್ಯುಲೆನ್ಸ್‌ನಲ್ಲಿ ಯಾವುದೇ ಮೂಲ ಸೌಕರ್ಯವೇ ಇರಲಿಲ್ಲ. ಹೀಗಾಗಿ ಉಸಿರಿಗಾಗಿ ಮಗುವಿನ ಚಡಪಡಿಕೆ ನರಳಾಟ ಹೆಚ್ಚಾಯಿತು.

ಆಂಬ್ಯುಲೆನ್ಸ್‌ನಲ್ಲಿ ಮೂಲ ಸೌಕರ್ಯ ಇಲ್ಲದಿರುವ ಬಗ್ಗೆ ಕೇಳಿದ್ದಕ್ಕೆ ಸಿಬ್ಬಂದಿಯಿಂದ ಹಾರಿಕೆ ಉತ್ತರ ಬಂತು. ಈ ನಡುವೆ, ಮಗು ಉಸಿರಿಗಾಗಿ ಚಪಡಿಸುತ್ತಾ ಎಚ್.ಡಿ.ಕೋಟೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಪ್ರಾಣವನ್ನೇ ಕಳೆದುಕೊಂಡಿತು.

ಈ ನಡುವೆ, ಆಂಬ್ಯುಲೆನ್ಸ್‌ ಸಿಬ್ಬಂದಿ ಮಗುವಿನ ಶವ ಸಹಿತ ಪೋಷಕರನ್ನು ಆಂಬ್ಯುಲೆನ್ಸ್‌ನಿಂದ ಇಳಿಸಿ ಹೋದರು. ಬೇಸತ್ತ ಪೋಷಕರು ಬೈಕಿನಲ್ಲಿಯೇ ಮಗು ಶವವನ್ನು ತೆಗೆದುಕೊಂಡು ಮನೆಗೆ ಹೊರಟರು.

ಇದನ್ನೂ ಓದಿ : Baby death | ಫುಟ್‌ಪಾತ್‌ ಮೇಲೆ ಹೆರಿಗೆ, ಮಗು ಸಾವು, ತಾಯಿ ನಾಪತ್ತೆ

Exit mobile version