Site icon Vistara News

Channapatna News: ಸಿಪಿವೈ ಬಾವ ಮಹದೇವಯ್ಯ ಪತ್ತೆಗೆ 4 ವಿಶೇಷ ತಂಡ ರಚನೆ

Mahadevaiah

ರಾಮನಗರ: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಬಾವ ಮಹದೇವಯ್ಯ ಪತ್ತೆಗೆ ಚನ್ನಪಟ್ಟಣ (Channapatna News) ಡಿವೈಎಸ್ಪಿ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡ ರಚನೆ ಮಾಡಲಾಗಿದೆ. ಪುತ್ರ ಪ್ರಶಾಂತ್ ದೂರಿನ ಅನ್ವಯ ಪ್ರಕರಣ ದಾಖಲಾಗಿದ್ದು, ಮಹದೇವಯ್ಯ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಈ ಬಗ್ಗೆ ರಾಮನಗರ ಎಸ್‌ಪಿ ಕಾರ್ತಿಕ್ ರೆಡ್ಡಿ‌ ಮಾಹಿತಿ ನೀಡಿದ್ದು, ಮಹದೇವಯ್ಯ ಅವರ ಪತ್ತೆಗಾಗಿ ನಿರಂತರವಾಗಿ ಮೊಬೈಲ್ ಲೊಕೇಷನ್ ಪರಿಶೀಲನೆ ಮಾಡಲಾಗದುತ್ತಿದೆ. ಅವರ ಮೊಬೈಲ್‌ನಲ್ಲಿ ಒಂದು ಬಾರಿ ಯಾರೋ ಕರೆ ರಿಸೀವ್ ಮಾಡಿ ಮಾತನಾಡಿದರು, ಬಳಿಕ ಮೊಬೈಲ್ ಮತ್ತೆ ಸ್ವಿಚ್ ಆಫ್ ಆಗಿದೆ. ಅವರು ಬಳಸುತ್ತಿದ್ದ ಕಾರು ಕೂಡ ಕಾಣೆಯಾಗಿದೆ. ಮನೆಯ ಸಿಸಿಟಿವಿ ಈ ಹಿಂದೆಯೇ ಕೆಟ್ಟುಹೋಗಿದೆ. ಅಕ್ಕಪಕ್ಕದ ಮನೆಗಳ ಸಿಸಿಟಿವಿಗಳನ್ನು ಪರಿಶೀಲನೆ ಮಾಡ್ತಿದ್ದೇವೆ. ಎಲ್ಲಾ ಆಯಾಮದಲ್ಲೂ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರ ಸಹೋದರಿ ಪುಷ್ಪಾ ಅವರ ಪತಿ ಮಹದೇವಯ್ಯ ರಿಯಲ್‌ ಎಸ್ಟೇಟ್ ಉದ್ಯಮಿಯಾಗಿದ್ದು, ಶುಕ್ರವಾರ ರಾತ್ರಿ ತೋಟದ ಮನೆಯಲ್ಲಿ (Channapatna News) ಇದ್ದವರು ನಾಪತ್ತೆಯಾಗಿದ್ದರು. ಅವರು ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದ ತೋಟದಲ್ಲಿ ವಾಸವಾಗಿದ್ದರು. ಮಹದೇಶ್ವರ ಬೆಟ್ಟದಲ್ಲಿ ಟವರ್ ಲೊಕೇಶನ್ ಟ್ರೇಸ್ ಆಗಿತ್ತು, ಮನೆಯಲ್ಲಿ ಬೀರು ಓಪನ್ ಆಗಿ, ಬೆಡ್ ರೂಮ್‌ನಲ್ಲಿ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿರುವುದು ಕಂಡುಬಂದಿತ್ತು.

ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬೆಳಗ್ಗೆಯಿಂದ ಮಹದೇವಯ್ಯ ಫೋನ್ ಸ್ವಿಚ್ ಆಫ್ ಆಗಿದ್ದು, ಕಾರು ಕೂಡಾ ನಾಪತ್ತೆಯಾಗಿದೆ. ಹೀಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಪೊಲೀಸರಿಗೆ ದೂರು ನೀಡಿದ್ದೇವೆ

ಮಹದೇವಯ್ಯ ನಾಪತ್ತೆ ಪ್ರಕರಣದ ಬಗ್ಗೆ ಮಾಜಿ ಸಚಿವ ಯೋಗೇಶ್ವರ್ ಸಹೋದರ ರಾಜೇಶ್ ಪ್ರತಿಕ್ರಿಯಿಸಿ, ಮಧ್ಯಾಹ್ನ 12 ಗಂಟೆಗೆ ನಮಗೆ ಫೋನ್ ಬಂತು. ಅವರು ತೋಟದ ಮನೆಯಲ್ಲಿಯೇ ಇದ್ದರು. ಹಸುಗಳು ಇವೆ ಹೊರಗೆ ಬಿಟ್ಟಿಲ್ಲ. ನಾವು ಬಂದು ನೋಡಿದಾಗ ಬಟ್ಟೆ, ಫೈಲ್‌ಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದವು. ಇಲ್ಲಿನ ವಾತಾವರಣ ನೋಡಿದ್ರೆ ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ ಎಂದು ಅನಿಸುತ್ತದೆ. ಪೊಲೀಸರಿಗೆ ದೂರು ನೀಡಿದ್ದೇವೆ. ಅವರು ಬೆಂಗಳೂರಿನಲ್ಲಿ ವಾಸವಾಗಿದ್ದು , ಈಗ ಮನೆ ಕೆಲಸ ನಡೆಯುತ್ತಿದೆ. ಹಾಗಾಗಿ ರಾತ್ರಿ ಇಲ್ಲಿಯೇ ಬರುತ್ತಿದ್ದರು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Telangana Elections 2023 : ರೇವಂತ್‌ ರೆಡ್ಡಿ: ಅಂದು ಎಬಿವಿಪಿ ನಾಯಕ, ಇಂದು ಕಾಂಗ್ರೆಸ್‌ ಸಿಎಂ ಪಟ್ಟದತ್ತ

ಕಂದಾಯ ಇಲಾಖೆ ಸಂಬಂಧಿಸಿದ ಡಾಕ್ಯುಮೆಂಟ್‌ಗಳನ್ನು ಅವರು ಮಾಡುತ್ತಿದ್ದರು. ಎಲ್ಲಾ ಫೈಲ್‌ಗಳನ್ನು ಇಲ್ಲಿಯೇ ಇದ್ದು ರೆಡಿ ಮಾಡುತ್ತಿದ್ದರು. ಹಣಕಾಸು, ಚಿನ್ನಾಭರಣ ಯಾವುದೂ ಕಳುವಾಗಿಲ್ಲ. ಇಲ್ಲಿನ ವಾತಾವರಣ ನೋಡಿದ್ರೆ ಬಲವಂತವಾಗಿ ಕರೆದುಕೊಂಡು ಹೋದ ಹಾಗೆ ಇದೆ ಎಂದು ಹೇಳಿದ್ದಾರೆ.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Exit mobile version