Site icon Vistara News

Skeletons Found: ಚಿತ್ರದುರ್ಗದ ಪಾಳು ಬಿದ್ದ ಮನೆಯಲ್ಲಿ 5 ಅಸ್ಥಿಪಂಜರ ಪತ್ತೆ!

skeletons found in chitradurga

ಚಿತ್ರದುರ್ಗ: ಪಾಳು ಬಿದ್ದ ಮನೆಯಲ್ಲಿ 5 ಅಸ್ಥಿಪಂಜರ (Skeletons Found) ಪತ್ತೆಯಾಗಿವೆ. ಈ ಪ್ರಕರಣ ಪೊಲೀಸರು ಸೇರಿದಂತೆ ಊರಿನವರನ್ನೂ ಬೆಚ್ಚಿ ಬೀಳಿಸಿದ್ದು, ಕಾರಣ ನಿಗೂಢವಾಗಿದೆ. ನಗರದ ನಡುವೆಯೇ ಇದ್ದರೂ ಇದು ವರ್ಷಗಳಿಂದ ಯಾರ ಗಮನಕ್ಕೂ ಬರದಿರುವುದು ಇನ್ನೂ ನಿಗೂಢವಾಗಿದೆ.

ಚಿತ್ರದುರ್ಗದ ಚಳ್ಳಕೆರೆ ಗೇಟ್‌ನಲ್ಲಿರುವ, ಹಳೆ ಬೆಂಗಳೂರು ರಸ್ತೆಯ ಬದಿ ಇರುವ ಪಾಳು ಬಿದ್ದ ಮನೆಯಲ್ಲಿ 5 ಅಸ್ಥಿಪಂಜರ ಕಂಡುಬಂದಿವೆ. ಚಿತ್ರದುರ್ಗದ ದೊಡ್ಡ ಸಿದ್ದವ್ವನಹಳ್ಳಿಯ ಜಗನ್ನಾಥ್ ರೆಡ್ಡಿ ಎಂಬವರಿಗೆ ಸೇರಿದ ಮನೆ ಇದಾಗಿದೆ. ಇವರು ಪಿಡಬ್ಲ್ಯುಡಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿದ್ದು ನಿವೃತ್ತರಾಗಿದ್ದರು. ಮನೆಯ ಮುಂದೆ ನಿವೃತ್ತ ಇಂಜಿನಿಯರ್ ಎಂಬ ಬೋರ್ಡ್ ಇದೆ.

ಇವೆಲ್ಲವೂ ಒಂದೇ ಕುಟುಂಬಸ್ಥರ ಶವಗಳು, ಸುಮಾರು 4 ವರ್ಷಗಳ ಹಿಂದೆಯೇ ಮೃತಪಟ್ಟಿರಬಹುದು (Mass death) ಎಂದು ಇದೀಗ ಶಂಕಿಸಲಾಗಿದೆ. ಜಗನ್ನಾಥ ರೆಡ್ಡಿ, ಪತ್ನಿ ಪ್ರೇಮಾ ಹಾಗೂ ಮಗಳು ಮೃತಪಟ್ಟಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಜಗನ್ನಾಥ ರೆಡ್ಡಿಗೆ 3 ಜನ ಗಂಡು ಮಕ್ಕಳು ಹಾಗೂ ಒಬ್ಬರು ಹೆಣ್ಣು ಮಗಳು ಎಂದು ಹೇಳಲಾಗಿದೆ. ಕುಟುಂಬಸ್ಥರಿಗೆ ಗಂಭೀರ ಆರೋಗ್ಯ ಸಮಸ್ಯೆ ಇತ್ತು ಎಂಬ ಮಾಹಿತಿಯಿದೆ.

ಜಗನ್ನಾಥ ರೆಡ್ಡಿಯವರ ಪತ್ನಿ ಅಸ್ವಸ್ಥರಾಗಿದ್ದು , 2 ಕೋಟಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ದರೂ ಫಲಕಾರಿಯಾಗಿರಲಿಲ್ಲ. ಈ ಮನೆಯವರು ಯಾರನ್ನೂ ಒಳಬಿಟ್ಟುಕೊಳ್ಳುತ್ತಿರಲಿಲ್ಲ. ಬಾಗಿಲು ತೆರೆಯದೇ ಕಿಟಕಿಯಿಂದ ಮಾತಾಡಿಸಿ ಕಳುಹಿಸುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. 2022ರ ಬಳಿಕ ಈ ಮನೆಯವರು ಯಾರಿಗೂ ಕಾಣಿಸಿಕೊಂಡಿಲ್ಲ. ಮನೆಯಲ್ಲಿ ಆಕ್ಸಿಜನ್‌ ಸಿಲಿಂಡರ್‌ ಕೂಡ ಕಂಡುಬಂದಿದೆ.

ಆದರೆ ಈ ಪ್ರಕರಣ ಹೆಚ್ಚಿನ ಕುತೂಹಲ ಗರಿಗೆದರಿಸುವಂತಿದೆ. ಸಿಕ್ಕ ಐದು ಅಸ್ಥಿಪಂಜರಗಳು ಯಾರು ಯಾರದು? ಎಲ್ಲರೂ ಏಕಕಾಲಕ್ಕೆ ಸತ್ತರೇ? ಸಾವಿಗೆ ಆತ್ಮಹತ್ಯೆ ಕಾರಣವೇ? ‌ಸಾವಿಗೆ ಕಾಯಿಲೆ ಅಥವಾ ಅನ್ಯ ಕಾರಣಗಳಿದ್ದಿರಬಹುದೇ? ನಾಲ್ಕಾರು ವರ್ಷಗಳೇ ಆದರೂ ಈ ಸಾವುಗಳು ಯಾರ ಗಮನಕ್ಕೂ ಬರದೇ ಇದ್ದುದು ಹೇಗೆ? ಈ ಎಲ್ಲ ಪ್ರಶ್ನೆಗಳಿಗೂ ಪೊಲೀಸ್‌ ತನಿಖೆ ಉತ್ತರಿಸಬೇಕಿದೆ.

ಸ್ಥಳಕ್ಕೆ ಚಿತ್ರದುರ್ಗ ಬಡಾವಣೆ ಪೊಲೀಸರು, ಎಎಸ್‌ಪಿ ಎಸ್.ಜೆ. ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಂಡ ಹಾಗೂ ವಿಧಿ ವಿಜ್ಞಾನ ತಂಡ ಭೇಟಿ ನೀಡಿದ್ದು, ಇಂಚಿಂಚು ಜಾಗವನ್ನೂ ಪರಿಶೀಲನೆ ನಡೆಸುತ್ತಿವೆ.

ಇದನ್ನೂ ಓದಿ: Nithari Killings Case: ನಿಥಾರಿ ಸರಣಿ ಹತ್ಯಾಕಾಂಡದ ಆರೋಪಿಗಳಿಗೆ ಅಲಹಾಬಾದ್ ಹೈಕೋರ್ಟ್ ಕ್ಲೀನ್‌ಚಿಟ್

Exit mobile version