ಮಂಡ್ಯ: ರೈತಾಕ್ರೋಶದ ನಡುವೆಯೇ ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಸಮಾರು 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ಬೆನ್ನಲ್ಲೇ ಬುಧವಾರ ಕಾವೇರಿ ನದಿಗೆ 4448 ಕ್ಯೂಸೆಕ್ ಕಾವೇರಿ ನೀರು (Cauvery Dispute) ಬಿಡುಗಡೆಯಾಗಿದೆ. ಇದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಕೆಆರ್‌ಎಸ್ ಡ್ಯಾಂ ಮುಂಭಾಗ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ರೈತರು ಬುಧವಾರ ಸಂಜೆಯಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ಅಹೋರಾತ್ರಿ ಧರಣಿಗೆ ಎಲ್ಲಾ ರೈತ ಹೋರಾಟಗಾರರು, ಸಂಘಟನೆಗಳು ಬೆಂಬಲಿಸುವಂತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮನವಿ ಮಾಡಿದ ಹಿನ್ನೆಲೆಯಲ್ಲಿ ಡ್ಯಾಂ ಮುಂಭಾಗ ನೂರಾರು ರೈತರು ಜಮಾಯಿಸುತ್ತಿದ್ದಾರೆ. ಕೆಆರ್‌ಎಸ್‌ನ ಬೃಂದಾವನ ಪಾರ್ಕ್ ಬಳಿ ಶಾಮಿಯಾನ ಹಾಕಿ ರೈತರು ಧರಣಿ ಆರಂಭಿಸಿದ್ದಾರೆ.
ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನಂತೆ 15 ದಿನಗಳವರೆಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಭಾ ಪ್ರಾಧಿಕಾರ ಆದೇಶ ನೀಡಿತ್ತು. ಅದರಂತೆ ಕಳೆದ ರಾತ್ರಿಯಿಂದಲೇ ರಾಜ್ಯ ಸರ್ಕಾರದಿಂದ ನೀರು ಬಿಡಲಾಗಿದೆ. ಕೆಆರ್‌ಎಸ್ ಡ್ಯಾಂನ 80 ಪ್ಲಸ್ ಗೇಟ್‌ಗಳ ಮೂಲಕ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಸದ್ಯ 4448 ಕ್ಯೂಸೆಕ್ ನೀರು ಹರಿಯುತ್ತಿದೆ.
ಶ್ರೀರಂಗಪಟ್ಟಣದಲ್ಲಿ ಪಂಜಿನ ಮೆರವಣಿಗೆ
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಶ್ರೀರಂಗಪಟ್ಟಣದಲ್ಲಿ ರೈತರು ಪಂಜಿನ ಮೆರವಣಿಗೆ ನಡೆಸಿದರು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪಂಜಿನ ಮೆರವಣಿಗೆ ನಡೆಸಿದ ರೈತರು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧವೂ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ | I.N.D.I.A Meeting: ನಾಳೆ ಇಂಡಿಯಾ ಒಕ್ಕೂಟದ ಸಭೆ; ಸೀಟು ಹಂಚಿಕೆ, ಹೊಸ ಲೋಗೊ; ಪ್ರಧಾನಿ ಅಭ್ಯರ್ಥಿ ಘೋಷಣೆ?
ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ
ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿರುವುದನ್ನು ವಿರೋಧಿಸಿ ಮಂಡ್ಯ ಯೂತ್ ಗ್ರೂಪ್ ವತಿಯಿಂದ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮಂಡ್ಯ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಸಾಗಿತು. ಕರ್ನಾಟಕಕ್ಕೆ ಆದ ಅನ್ಯಾಯ ಬಿಂಬಿಸುವ ತಕ್ಕಡಿ ಪ್ರದರ್ಶಿಸಿ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು, ಕಾವೇರಿ ವಿಚಾರದಲ್ಲಿ ಸದಾ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ತೀರ್ಪು ನ್ಯಾಯ ಸಮ್ಮತವಾಗಿರಲೆಂದು ನ್ಯಾಯದೇವತೆ ಕಣ್ಣಿಗೆ ಬಟ್ಟೆ ಕಟ್ಟಿರುತ್ತಾಳೆ. ಆದರೆ, ಕಾವೇರಿ ವಿಚಾರದಲ್ಲಿ ಪ್ರಾಧಿಕಾರ ಕಣ್ಣು, ಕಿವಿಗೆ ಬಟ್ಟೆ ಕಟ್ಟಿಕೊಂಡಿದೆ ಎಂಬುದನ್ನು ಬಿಂಬಿಸಲು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಡಿಗೆ ಮಾಡುತ್ತಿದ್ದೇವೆ ಎಂದು ಆಗ್ರಹಿಸಿದರು. ತಮಿಳುನಾಡಿಗೆ ಬಿಡಲಾಗ್ತಿರುವ ನೀರು ನಿಲ್ಲಿಸುವಂತೆ ಆಗ್ರಹಿಸಿದ ಪ್ರತಿಭಟನಾಕಾರರು
ಆ.31ರಂದು ಮಂಡ್ಯದಲ್ಲಿ ಪ್ರತಿಭಟನೆಗೆ ರೈತ ಸಂಘ ಕರೆ
ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಮಾಡಿರುವುದನ್ನು ವಿರೋಧಿಸಿ ಆ.31ರಂದು ಮಂಡ್ಯದಲ್ಲಿ ಪ್ರತಿಭಟನೆಗೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕರೆ ನೀಡಿದೆ. ಸಮಿತಿಯ ಪ್ರಮುಖರ ಜತೆ ಮಾತುಕತೆ ನಂತರ ಮಾಜಿ ಸಚಿವ ಎಂ.ಎಸ್. ಆತ್ಮಾನಂದ ತಿಳಿಸಿದ್ದಾರೆ. ನೀರು ಬಿಡುಗಡೆಗೆ ಸೂಚಿಸಿರುವ ಪ್ರಾಧಿಕಾರದ ನಿರ್ದೇಶನ ಖಂಡನೀಯ. ನಾಳೆ ವಿಶ್ವೇಶ್ವರಯ್ಯ ಪ್ರತಿಮೆ ಮುಂದೆ ಪ್ರತಿಭಟನಾ ಧರಣಿ ಮಾಡುತ್ತೇವೆ. ನಾಳಿನ ಪ್ರತಿಭಟನೆಗೆ ಎಲ್ಲಾ ಕನ್ನಡಪರ ಸಂಘಟನೆಗಳ ಮುಖಂಡರು, ರೈತ ಸಂಘಟನೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ. ನಾಳಿನ ಪ್ರತಿಭಟನೆಯಲ್ಲಿ ಎಲ್ಲರ ಜತೆಗೆ ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆ ಬಗಗ್ಗೆ ಪ್ರಕಟಿಸಲಾಗುತ್ತದೆ ಎಂದು ಮಾಜಿ ಸಚಿವ ಎಂ.ಎಸ್. ಆತ್ಮಾನಂದ ತಿಳಿಸಿದ್ದಾರೆ.