Site icon Vistara News

Karnataka Election: ಬೆಳಗಾವಿಯಲ್ಲಿ ಕಾರು ಸೇರಿ 53 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಜಪ್ತಿ

53 lakh Rs including a car, Gold, silver ornaments seized in Belagavi

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಲಿಂಗನಮಠ ಚೆಕ್‌ಪೋಸ್ಟ್‌ನಲ್ಲಿ (Karnataka Election) ದಾಖಲೆ ಇಲ್ಲದೆ ಸಾಗಿಸುತ್ತಿದ್ದ 21 ಲಕ್ಷ ರೂಪಾಯಿ ಮೌಲ್ಯದ 398 ಗ್ರಾಂ ಚಿನ್ನ, 19 ಲಕ್ಷ ರೂಪಾಯಿ ಮೌಲ್ಯದ 28 ಕೆಜಿ ಬೆಳ್ಳಿ, 13 ಲಕ್ಷ ರೂಪಾಯಿ ಮೌಲ್ಯದ ಕಾರು ಸೇರಿ ಒಟ್ಟು 53 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ನಂದಗಡ ಪೊಲೀಸರು ಜಪ್ತಿ ಮಾಡಿದ್ದಾರೆ. ಧರ್ಮರಾಜ್ ಕುಟ್ರೆ ಎಂಬುವವರು ಹಳಿಯಾಳದಿಂದ ಖಾನಾಪುರಕ್ಕೆ ಕಾರಿನಲ್ಲಿ ವಸ್ತುಗಳನ್ನು ಸಾಗಿಸುವಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆಯಲ್ಲಿ 32 ಲಕ್ಷ ಹಣ ಸೀಜ್

ದಾವಣಗೆರೆ: ನಗರದ ಬೇತೂರು ಚೆಕ್ ಪೋಸ್ಟ್‌ನಲ್ಲಿ 32 ಲಕ್ಷ ರೂ.ಗಳನ್ನು ಸೀಜ್ ಮಾಡಲಾಗಿದೆ. ದಾವಣಗೆರೆ ಅಣಜಿ ಕಡೆಯಿಂದ ದಾವಣಗೆರೆ ನಗರಕ್ಕೆ ವಾಹನದಲ್ಲಿ ತರುತ್ತಿದ್ದಾಗ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಣವು ಧರ್ಮಸ್ಥಳ ಮಹಿಳಾ ಸ್ವಸಹಾಯ ಸಂಘಗಳಿಗೆ ಸೇರಿದ್ದು ಎಂಬುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಮಹಿಳಾ ಸಂಘಗಳಿಂದ ಹಣ ಸಂಗ್ರಹಿಸಿ ದಾವಣಗೆರೆ ಸಂಘದ ಮುಖ್ಯ ಕಚೇರಿಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಪ್ರಕರಣವನ್ನು ಆದಾಯ ತೆರಿಗೆ ಅಧಿಕಾರಿಗಳಿಗೆ ವರ್ಗಾವಣೆ ಮಾಡಲಾಗಿದೆ.

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ವಶಕ್ಕೆ

ಶಿವಮೊಗ್ಗ: ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಸಾಗರ ತಾಲೂಕಿನ ಬಳಸಗೋಡು ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಸಾಗರ ಉಪ ವಿಭಾಗದ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಪ್ರವೀಣ್ ಕುಮಾರ್ ತಂಡ ದಾಳಿ ನಡೆಸಿದೆ.

ಇದನ್ನೂ ಓದಿ | Karnataka Elections : ಬಿಜೆಪಿ ನಾಯಕನ ಮನೆಗೆ ಜಿಎಸ್ಟಿ ದಾಳಿ; ಸೀರೆ, ಗಿಫ್ಟ್‌ ವಸ್ತುಗಳು ಪತ್ತೆ

ದಾಳಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 7 ಮದ್ಯದ ಬಾಕ್ಸ್ ಜಪ್ತಿ ಮಾಡಲಾಗಿದ್ದು, 20, 234 ರೂ ಮೌಲ್ಯದ ಒರಿಜಿನಲ್‌ ಚಾಯ್ಸ್‌ ಡಿಲಕ್ಸ್‌ ವಿಸ್ಕಿ ಪೌಚ್‌ ಮತ್ತು 3,372 ರೂ ಬೆಲೆಯ ಕ್ಯಾಪ್ಟನ್‌ ಮಾರ್ಟಿನ್‌ ಸ್ಪೆಷಲ್ ವಿಸ್ಕಿ ಪೌಚ್‌ ಅನ್ನು ವಶಕ್ಕೆ ಪಡೆದುಕೊಂಡು ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಿ.ಟಿ ರವಿ ಭಾವಚಿತ್ರದ ಲೇಬಲ್ ಇದ್ದ ಬ್ಯಾಗ್‌ಗಳ ಜಪ್ತಿ

ಚಿಕ್ಕಮಗಳೂರು: ನಗರದ ಮಲ್ಲಂದೂರು ರಸ್ತೆಯ ಚಿಕ್ಕಮಗಳೂರು ಟ್ರಾನ್ಸ್‌ಪೋರ್ಟ್‌ನಲ್ಲಿ ಬಿಜೆಪಿ ಶಾಸಕ ಸಿ.ಟಿ ರವಿ ಭಾವಚಿತ್ರದ ಲೇಬಲ್ ಇದ್ದ 500 ಬ್ಯಾಗ್‌ಗಳನ್ನು ಫ್ಲೈಯಿಂಗ್ ಸ್ಕ್ವಾಡ್ ತಂಡ ವಶಕ್ಕೆ ಪಡೆದಿದೆ. ಬ್ಯಾಗ್‌ ಮೇಲೆ ಸಿ.ಟಿ ರವಿ ಹಾಗೂ ಕಮಲದ ಭಾವಚಿತ್ರ ಇದೆ. ಪರಿಶೀಲನೆ ಬಳಿಕ ಸಿ.ಟಿ ರವಿ ಆಪ್ತ ಮಾಜಿ ನಗರ ಸಭಾ ಸದಸ್ಯ ನಟರಾಜ್ ವಿರುದ್ಧ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

80ಕ್ಕೂ ಹೆಚ್ಚು ಡಿನ್ನರ್ ಸೆಟ್‌ ವಶಕ್ಕೆ

ರಾಮನಗರ: ತಾಲೂಕಿನ ಚಿಕ್ಕ ಸೂಲಿಕೆರೆ ಗ್ರಾಮದಲ್ಲಿ ಮತದಾರರಿಗೆ ಹಂಚಲು ತಂದಿದ್ದ 80ಕ್ಕೂ ಹೆಚ್ಚು ಡಿನ್ನರ್ ಸೆಟ್‌ಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಗ್ರಾಮದ ಸತೀಶ್ ಎಂಬುವರ ಮನೆಯಲ್ಲಿ ಎಂಬತ್ತಕ್ಕೂ ಹೆಚ್ಚು ಡಿನ್ನರ್ ಸೆಟ್ ಪತ್ತೆಯಾಗಿವೆ. ಇವು ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಅವರಿಗೆ ಸೇರಿದವು ಎನ್ನಲಾಗಿದೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version