Site icon Vistara News

ಜಾಗತಿಕ ಸ್ಟಾರ್ಟ್‌ಅಪ್‌ ಪರಿಸರ ಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದ ಬೆಂಗಳೂರು: ಜಿಎಸ್‌ಇಆರ್‌ ಸಮೀಕ್ಷೆ

ತಂತ್ರಜ್ಞಾನ ಶೋಧನಾ ಬಂಡವಾಳ

ಬೆಂಗಳೂರು: ಜಾಗತಿಕ ನವೋದ್ಯಮ ಕಾರ್ಯಪರಿಸರ (ಜಿಎಸ್‌ಇಆರ್‌-2022) ಸಮೀಕ್ಷಾ ವರದಿ ಪ್ರಕಾರ ಬೆಂಗಳೂರು ಸ್ಟಾರ್ಟ್‌ಅಪ್‌ ವಾತಾವರಣವು 22ನೇ ಸ್ಥಾನ ಪಡೆದಿದ್ದು, ಕಳೆದ ವರ್ಷಕ್ಕಿಂತ ಒಂದು ರ‍್ಯಾಂಕ್‌ ಮೇಲಕ್ಕೇರಿದೆ. ಜೀನೋಮ್ ಸ್ಟಾರ್ಟ್ ಅಪ್ ನಿಯತಕಾಲಿಕೆ ಪ್ರಕಟಿಸಿರುವ ಈ ವರದಿಯಲ್ಲಿ ಬೆಂಗಳೂರು ನಗರವು ನಿಧಿ ಹೂಡಿಕೆ, ಸಂಪರ್ಕ, ಮಾರುಕಟ್ಟೆ ತಲುಪುವಿಕೆ, ಪ್ರತಿಭೆ, ಅನುಭವೀ ಮಾನವ ಸಂಪನ್ಮೂಲ ಹಾಗೂ ಜ್ಞಾನಾರ್ಜನೆ ವಿಭಾಗಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದೆ.

ಬೆಂಗಳೂರು ಸ್ಟಾರ್ಟ್‌ಅಪ್ ವಾತಾವರಣವು ಹೂಡಿಕೆಯಲ್ಲಿ ಜಾಗತಿಕವಾಗಿ 15ರೊಳಗಿನ ಸ್ಥಾನದಲ್ಲಿದ್ದರೆ, ಸಾಧನೆಯಲ್ಲಿ 25ರೊಳಗಿದೆ. ನಾಲ್ಕು ವರ್ಷಗಳ ಅವಧಿಯಲ್ಲಿ (2017-2021) ಬೆಂಗಳೂರು ನಗರ 21 ಶತಕೋಟಿ ಡಾಲರ್ ಸಂಶೋಧನಾ ಬಂಡವಾಳವನ್ನು ಆಕರ್ಷಿಸಿದ್ದು, ಇದು ಜಾಗತಿಕ ಸರಾಸರಿಯಾದ 4.5 ಶತಕೋಟಿ ಡಾಲರ್ ಗಳಿಗಿಂತ ಬಹಳ ಮುಂದಿದೆ.

ಬೆಂಗಳೂರು ನಗರವು ತಂತ್ರಜ್ಞಾನ ಸಂಬಂಧಿ ಸಂಶೋಧನಾ ಬಂಡವಾಳ ಹೂಡಿಕೆಯಲ್ಲಿ ಜಾಗತಿಕವಾಗಿ 5ನೇ ಸ್ಥಾನ ಪಡೆದಿದೆ. 2022ರ ಪ್ರಸಕ್ತ ಐದು ತಿಂಗಳುಗಳಲ್ಲಿ ಬೆಂಗಳೂರಿನಲ್ಲಿ, ಈ ವಲಯದಲ್ಲಿ 7.5 ಶತಕೋಟಿ ಡಾಲರ್ ಬಂಡವಾಳ ಹೂಡಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಹೂಡಿಕೆಯಾಗಿದ್ದ 5.2 ಶತಕೋಟಿ ಡಾಲರ್ ಗಳಿಗೆ ಹೋಲಿಸಿದರೆ ಈ ವರ್ಷ ಗಣನೀಯ ಏರಿಕೆಯಾಗಿದೆ.

ವರದಿಯ ಕುರಿತು ಪ್ರತಿಕ್ರಿಯಿಸಿರುವ ಐಟಿಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, “ಭಾರತದ ಸಿಲಿಕಾನ್ ನಗರವಾದ ಬೆಂಗಳೂರು ಸಿಂಗಪುರ, ಪ್ಯಾರಿಸ್, ಬರ್ಲಿನ್‌ಗಿಂತ ಹೆಚ್ಚಿನ ಬಂಡವಾಳವನ್ನು ತನ್ನತ್ತ ಸೆಳೆಯುತ್ತಿದೆ. ಭಾರತದಲ್ಲಿ ಸ್ಟಾರ್ಟಪ್‌ ವಾತಾವರಣವು ಉತ್ತಮಗೊಳ್ಳುತ್ತಿರುವುದನ್ನು ಈ ಸಮೀಕ್ಷೆ ದೃಢೀಕರಿಸಿದೆ. ಭಾರತದ ನವೋದ್ಯಮಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕೆಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಧ್ಯೇಯವನ್ನು ಇದು ಪ್ರತಿಬಿಂಬಿಸುತ್ತದೆ” ಎಂದಿದ್ದಾರೆ.

ಇದನ್ನೂ ಓದಿ: LIC ಷೇರು ದರ 710 ರೂ.ಗೆ ಕುಸಿತ, ಮಾರುಕಟ್ಟೆ ಬಂಡವಾಳ 4.5 ಲಕ್ಷ ಕೋಟಿ ರೂ.ಗೆ ಇಳಿಕೆ

Exit mobile version