Site icon Vistara News

ಚಂದ್ರಯಾನ 3ಗೆ ಬಿಡಿಭಾಗ ಪೂರೈಸಿ ಶತಕೋಟ್ಯಧೀಶರಾದ ಮೈಸೂರು ಉದ್ಯಮಿ; ಯಾರಿವರು?

ramesh kunhikannan

60-year-old from Mysore becomes a billionaire after supplying parts to Chandraayan 3 Mission

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಕೈಗೊಂಡ ಚಂದ್ರಯಾನ 3 ಮಿಷನ್‌ (Chandrayaan 3) ಯಶಸ್ವಿಯಾಗಿ ಚಂದಿರನ ಅಂಗಳದಲ್ಲಿ ಇಳಿದಿದ್ದು ಪ್ರತಿ ಭಾರತೀಯರಿಗೂ ಹೆಮ್ಮೆಯ ಕ್ಷಣವಾಗಿದೆ. ಅದರಲ್ಲೂ, ಪ್ರಪಂಚದಲ್ಲಿಯೇ ಚಂದ್ರನ ದಕ್ಷಿಣ ಧ್ರುವದ ಮೇಲೆ ನೌಕೆಯನ್ನು ಸಾಫ್ಟ್‌ ಲ್ಯಾಂಡ್‌ ಮಾಡಿದ ಮೊದಲ ದೇಶ, ಚಂದ್ರಯಾನ ಕೈಗೊಂಡ ನಾಲ್ಕನೇ ದೇಶ ಎಂಬ ಖ್ಯಾತಿಗೆ ಭಾಜನವಾಗಿದೆ. ಹಾಗಾಗಿ, ಇಸ್ರೋ ಈಗ ಜಗತ್ತಿನ ಪ್ರಮುಖ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳಲ್ಲಿ ಒಂದು ಎಂಬ ಖ್ಯಾತಿ ಪಡೆದಿದೆ. ಇದರ ಬೆನ್ನಲ್ಲೇ, ಮೈಸೂರು ಉದ್ಯಮಿ ರಮೇಶ್‌ ಕುನ್ಹಿಕಣ್ಣನ್‌ (Ramesh Kunhikannan) ಅವರನ್ನು ಚಂದ್ರಯಾನ 3 ಮಿಷನ್‌ ಶತಕೋಟ್ಯಧೀಶರನ್ನಾಗಿ ಮಾಡಿದೆ ಎಂಬುದು ಕೂಡ ಗಮನಾರ್ಹ ಸಂಗತಿಯಾಗಿದೆ.

ಕಂಪನಿ ಲಾಭ ಮೂರು ಪಟ್ಟು ಹೆಚ್ಚಳ

ಹೌದು, ಚಂದ್ರಯಾನ 3 ಮಿಷನ್‌ಗೆ ಮೈಸೂರಿನಲ್ಲಿರುವ ಕೇನ್ಸ್‌ ಟೆಕ್ನಾಲಜಿ ಇಂಡಿಯಾ (Kaynes Technology India) ಕಂಪನಿಯು ಬಿಡಿ ಭಾಗಗಳನ್ನು ಪೂರೈಸುತ್ತದೆ ಎಂಬುದು ಬಹಿರಂಗವಾಗುತ್ತಲೇ ಕೇನ್ಸ್‌ ಟೆಕ್ನಾಲಜಿ ಸಂಸ್ಥೆಯ ಉತ್ಪನ್ನಗಳಿಗೆ ಭಾರಿ ಬೇಡಿಕೆ ಬಂದಿದೆ. ಅಷ್ಟೇ ಅಲ್ಲ, 2022ರ ನವೆಂಬರ್‌ನಲ್ಲಿ ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ (BSE) ಕೇನ್ಸ್‌ ಟೆಕ್ನಾಲಜಿ ಷೇರುಗಳ ಮೌಲ್ಯವು ಶೇ.40ರಷ್ಟು ಹೆಚ್ಚಾಗಿದೆ. ಕಂಪನಿಯ ಲಾಭವು ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಇದರಿಂದಾಗಿ ರಮೇಶ್‌ ಕುನ್ಹಿಕಣ್ಣನ್‌ ಅವರ ಆಸ್ತಿ ಮೌಲ್ಯವು 1.1 ಶತಕೋಟಿ ಡಾಲರ್‌ ದಾಟಿದೆ. ಹಾಗಾಗಿಯೇ, ಚಂದ್ರಯಾನ 3 ಮಿಷನ್‌ನಿಂದಾಗಿ ಇವರು ಶತಕೋಟ್ಯಧೀಶರಾದರು ಎಂದು ಹೇಳಲಾಗುತ್ತಿದೆ.

ಚಂದ್ರಯಾನ 3 ಮಿಷನ್‌ಗೆ ಪೂರೈಕೆ ಮಾಡಿದ್ದೇನು?

ಚಂದ್ರಯಾನ 3 ಮಿಷನ್‌ನ ರೋವರ್‌ ಹಾಗೂ ಲ್ಯಾಂಡರ್‌ಗೆ ಕೇನ್ಸ್‌ ಟೆಕ್ನಾಲಜಿ ಇಂಡಿಯಾ ಕಂಪನಿಯಿಂದ ಎಲೆಕ್ಟ್ರಾನಿಕ್‌ ಸಿಸ್ಟಮ್‌ಗಳನ್ನು ಪೂರೈಕೆ ಮಾಡಲಾಗಿದೆ. ವೃತ್ತಿಯಲ್ಲಿ ಎಂಜಿನಿಯರ್‌ ಆಗಿರುವ ರಮೇಶ್‌ ಕುನ್ಹಿಕಣ್ಣನ್‌ ಅವರು ಈ ಕಂಪನಿ ಒಟ್ಟು ಷೇರುಗಳಲ್ಲಿ ಶೇ.64ರಷ್ಟು ಷೇರುಗಳನ್ನು ಹೊಂದಿರುವುದರಿಂದ ಅವರಿಗೆ ಹೆಚ್ಚು ಲಾಭವಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಫೋರ್ಬ್ಸ್‌ ಮ್ಯಾಗಜಿನ್‌ ಕೂಡ ವರದಿ ಮಾಡಿದೆ. ರಮೇಶ್‌ ಕುನ್ಹಿಕಣ್ಣನ್‌ ಅವರ ಪತ್ನಿ ಸವಿತಾ ರಮೇಶ್‌ ಅವರು ಕೂಡ ಕಂಪನಿಯ ಚೇರ್‌ಪರ್ಸನ್‌ ಆಗಿದ್ದಾರೆ.

ಚಂದ್ರಯಾನ 3 ಯಶಸ್ಸಿನ ಕ್ಷಣಗಳು

ಇದನ್ನೂ ಓದಿ: ಚಂದ್ರಯಾನ-3 ಯಶಸ್ಸಿನ ಬಳಿಕ ಇಸ್ರೋ ಬಗ್ಗೆ ಗೌರವ ಹೆಚ್ಚಳ ಎಂದ ಅಮೆರಿಕದ ನಾಸಾ!

ಕೇನ್ಸ್‌ ಟೆಕ್ನಾಲಜಿ ಇಂಡಿಯಾ ಕಂಪನಿಯನ್ನು ರಮೇಶ್‌ ಕುನ್ಹಿ ಕಣ್ಣನ್‌ ಅವರು 1988ರಲ್ಲಿ ಸ್ಥಾಪಿಸಿದರು. ಈ ಕಂಪನಿಯು ವಾರ್ಷಿಕ 137 ದಶಲಕ್ಷ ಡಾಲರ್‌ (ಸುಮಾರು 1,142 ಕೋಟಿ ರೂ.) ಆದಾಯವನ್ನು ಹೊಂದಿದೆ. ಪ್ರಿಂಟೆಡ್‌ ಸರ್ಕ್ಯೂಟ್‌ ಬೋರ್ಡ್‌ ಅಸ್ಸೆಂಬ್ಲಿಗಳು, ಎಲೆಕ್ಟ್ರಾನಿಕ್‌ ಸಿಸ್ಟಮ್‌, ಡಿಸೈನ್‌ ಸರ್ವಿಸ್‌, ಬಾಹ್ಯಾಕಾಶ, ವೈದ್ಯಕೀಯ, ರಕ್ಷಣೆ ಸೇರಿ ಹಲವು ಕ್ಷೇತ್ರಗಳಿಗೆ ಬಿಡಿ ಭಾಗಗಳನ್ನು ಕೂಡ ಕಂಪನಿಯು ಪೂರೈಸುತ್ತದೆ. ವೆಂಟಿಲೇಟರ್‌ ವೆಹಿಕಲ್‌ಗಳು, ರೈಲ್ವೆ ಸಿಗ್ನಲ್‌ಗಳಲ್ಲೂ ಕೇನ್ಸ್‌ ಕಂಪನಿಯ ಉತ್ಪನ್ನಗಳನ್ನು ಬಳಸಲಾಗುತ್ತದೆ. ಚಂದ್ರಯಾನ 3 ಮಿಷನ್‌ಅನ್ನು ಇಸ್ರೋ ಜುಲೈ 14ರಂದು ಉಡಾವಣೆ ಮಾಡಿತು. ಆಗಸ್ಟ್‌ 23ರಂದು ಬಾಹ್ಯಾಕಾಶ ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್‌ಲ್ಯಾಂಡ್‌ ಆಯಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version