Site icon Vistara News

`8.5% Blr min’ ಎಂದರೆ ಸಚಿವ ಮುನಿರತ್ನಗೆ ಲಂಚ: ಹನಿ ನೀರಾವರಿ ವಿತರಕರ ಆರೋಪ

minister-munirathna

ಚಾಮರಾಜನಗರ: ರಾಜ್ಯ ಸರ್ಕಾರದ ಮೇಲೆ ಈಗಾಗಲೆ 40% ಲಂಚ ಆರೋಪ ಹಾಗೂ ಇದರ ಹಿನ್ನೆಲೆಯಲ್ಲೆ ಹಿರಿಯ ಸಚಿವ ಕೆ.ಎಸ್‌. ಈಶ್ವರಪ್ಪ ರಾಜೀನಾಮೆ ಅಧ್ಯಾಯ ಮುಗಿಯುವ ಮುನ್ನವೇ ತೋಟಗಾರಿಕೆ ಸಚಿವ ಮುನಿರತ್ನ ವಿರುದ್ಧ 8.5% ಲಂಚ ಆರೋಪ ಕೇಳಿಬಂದಿದೆ. ಈ ಕುರಿತು ಚಾಮರಾಜನಗರ ಹನಿ ನೀರಾವರಿ ವಿತರಕರ ಸಂಘದಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ. ಸಚಿವರಿಗೆ ನೀರಾವರಿ ಕಂಪನಿಗಳು ನೀಡಿದ್ದು ಎನ್ನಲಾದ ಬ್ಯಾಂಕ್‌ ಸ್ಟೇಟ್‌ಮೆಂಟ್‌ ಅನ್ನೂ ರವಾನೆ ಮಾಡಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್‌ ಸಚಿವ ಈಶ್ವರಪ್ಪ ಅವರು 40% ಲಂಚ ಪಡೆಯುತ್ತಾರೆ ಎಂದು ಆರೋಪಿಸಿದ್ದ ಗುತ್ತಿಗೆದಾರ ಹಾಗೂ ಬಿಜೆಪಿ ಕಾರ್ಯಕರ್ತ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ಭುಗಿಲೆದ್ದ ಸಾರ್ವಜನಿಕರು ಆಕ್ರೋಶ ಹಾಗೂ ಪ್ರತಿಪಕ್ಷಗಳು ದಾಳಿ ನಂತರ ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಸಂತೋಷ್‌ ನವದೆಹಲಿಗೆ ತೆರಳಿ ಅಲ್ಲಿ ಪ್ರಧಾನಿ ಕಚೇರಿ, ಇನ್ನಿತರೆ ಕಚೇರಿಗಳಿಗೆ ದೂರು ನೀಡಿದ್ದರು. ಜತೆಗೆ ನವ ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನೂ ನಡೆಸಿದ್ದರು.

ಇದನ್ನೂ ಓದಿ | 40 ಪರ್ಸೆಂಟ್‌ ಕಮಿಷನ್‌ ಬಗ್ಗೆ ತನಿಖೆ ನಡೆದು ಸತ್ಯಾಂಶ ಹೊರಬರಲಿ: ಶಿವರಾಮ್‌ ಹೆಬ್ಬಾರ್

ಸಂತೋಷ್‌ ಪ್ರಕರಣಕ್ಕೂ ಮುನ್ನವೇ ರಾಜ್ಯ ಗುತ್ತಿಗೆದಾರರ ಸಂಘವು ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ 40%ಲಂಚ ಆರೋಪ ಮಾಡಿದ್ದರು. ಇದೀಗ ಹನಿ ನೀರಾವರಿ ವಿತರಕರ ಸಂಘದಿಂದ 8.5% ಲಂಚದ ಆರೋಪವನ್ನು ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಪ್ರತಿ ಕಂಪನಿಯಿಂದ ಲಂಚ

ರೈತರ ಜಮೀನಿನಲ್ಲಿ ಹನಿ ನೀರಾವರಿ ಅಳವಡಿಸಿಕೊಳ್ಳಲು ಪ್ರತಿ ವರ್ಷ ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಸಬ್ಸಿಡಿ ಹಣವನ್ನು ನೀಡಲಾಗುತ್ತಿದೆ. ಆದರೆ ಇತ್ತೀಚೆಗೆ ಕರ್ನಾಟಕದ ತೋಟಗಾರಿಕಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮುನಿರತ್ನ ಅವರು ಎಲ್ಲ ಮಾರ್ಗದಿಂದಲೂ ಅಕ್ರಮವಾಗಿ ಹಣ ಮಾಡಲು ಶುರು ಮಾಡಿದ್ದಾರೆ. ಈ ಸಂಬಂಧ ರೈತರಿಗೆ ನೀಡಬೇಕಾದ ಸಬ್ಸಿಡಿ ಹಣದಲ್ಲಿ ಪರ್ಸೆಂಟೇಜ್‌ ಪಡೆಯುವ ಉದ್ದೇಶದಿಂದ ಹನಿ ನೀರಾವರಿ ನಿಯಮಗಳಲ್ಲಿ ಅನೇಕ ಬದಲಾವಣೆಗಳನ್ನು ಮಾಡಿ ಅದನ್ನು ಸರಿಪಡಿಸಲು ಇಷ್ಟು ಪರ್ಸೆಂಟೇಜ್‌ ಕೊಡಬೇಕು ಎಂದು ಕಂಪನಿಗಳಿಗೆ ತಾಕೀತು ಮಾಡಿದ್ದಾರೆ. ಕಂಪನಿಯ ಅಪ್ರುವಲ್‌ ಮಾಡಲು ಪ್ರತಿ ಕಂಪನಿಯಿಂದ 15 ಲಕ್ಷ ರೂ. ಬೇಡಿಕೆ ಇಟ್ಟಿರುವುದು ತಿಳಿದುಬಂದಿದೆ. ಈ ಸಂಬಂಧ ಹನಿ ನೀರಾವರಿ ಕಂಪನಿಗಳು ಡೀಲರ್‌ಗಳ ಬಿಲ್‌ನಲ್ಲಿ ಎಂಟೂವರೆ ಪರ್ಸೆಂಟ್‌ ಹಣವನ್ನು ಮಿನಿಸ್ಟರ್‌ಗೆ ನೀಡುವ ಪರ್ಸೆಂಟೇಜ್‌ ಎಂದು ನಮೂದಿಸಿ ಸ್ಟೇಟ್‌ಮೆಂಟ್‌ಗಳನ್ನು ಡೀಲರ್‌ಗಳಿಗೆ ಕೊಟ್ಟಿರುವುದು ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ಲಂಚ ನೀಡಲಾಗಿದೆ ಎಂದು ಆರೋಪಿಸಿರುವ ಬ್ಯಾಂಕ್‌ ಖಾತೆ ಸ್ಟೇಟ್‌ಮೆಂಟ್‌

ಈ ಸಂಬಂಧ ಮುಖ್ಯಮಂತ್ರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಿ ಚಳವಳಿ ಮಾಡಲು ಮುಂದಾದಾಗ ಸಂಘವನ್ನು ಇಬ್ಭಾಗ ಮಾಡಿ ಕೆಲ ಡೀಲರ್‌ಗಳಿಗೆ ಆಮಿಷಗಳನ್ನು ಒಡ್ಡಿ ತಮ್ಮ ಮೇಲೆ ಬಂದಿರುವ ಆರೋಪದಿಂದ ಕಳಚಿಕೊಳ್ಳಲು ಪ್ರಯತ್ನಿಸಿದ್ದಾರೆ.

ಅವರು ಸಬ್ಸಿಡಿ ಹಣದಲ್ಲಿ ಎಂಟೂವರೆ ಪರ್ಸೆಂಟ್‌ ಬಡ ರೈತರಿಂದ ಬಂದಿರುವ ಹಣವನ್ನು ತೆಗೆದುಕೊಂಡು, ಇದಲ್ಲದೆ ತೋಟಗಾರಿಕೆ ಇಲಾಖೆಯಲ್ಲಿ ಕಮಿಷನರ್‌ ಆಗಿರುವ ಕಟಾರಿಯಾ ಅವರು ಎರಡೂವರೆ ಪರ್ಸೆಂಟ್‌ ಪಡೆದಿರುವುದು ಕೂಡ ಗುಟ್ಟಾಗಿ ಉಳಿದಿಲ್ಲ.

ಈಗಾಗಲೆ ಈಶ್ವರಪ್ಪ ಅವರ ಮೇಲೆ 40% ಆರೋಪಕ್ಕೆ ಸಂಬಂಧಪಟ್ಟಂತೆ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಬಹಳ ಸುದ್ದಿಯಾಗಿದೆ. ಈ ನಿಟ್ಟಿನಲ್ಲಿ ಡೀಲರ್‌ಗಳು ದುರಂತದ ಕಡೆ ಹೋಗುವ ಮುನ್ನ ತಾವು ಈ ಕಮಿಷನ್‌ ದಂಧೆಯನ್ನು ನಿಲ್ಲಿಸಬೇಕು ಹಾಗೂ ಈ ಆರೋಪಕ್ಕೆ ಸಂಬಂಧಪಟ್ಟಂತೆ ಸೂಕ್ತ ಕಾನೂನು ತನಿಖೆಯನ್ನು ನಡೆಸಿ ಅಪರಾಧಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಕಳಕಳಿಯ ಮನವಿ ಎಂದು ಪತ್ರದಲ್ಲಿ ತಿಳಿಸಲಾಗಿದೆ. ನಂತರ ಮೂರು ಒತ್ತಾಯಗಳನ್ನು ಮಾಡಲಾಗಿದೆ.

1. ಹನಿ ನೀರಾವರಿ ದರ ಪಟ್ಟಿ ಪರಿಷ್ಕರಣೆ ಆಗಬೇಕು

2. ಎಲ್ಲ ರಾಜ್ಯಗಳಂತೆ ಕರ್ನಾಟಕದಲ್ಲೂ ಹನಿ ನೀರಾವರಿ ಕಾರ್ಯಾದೇಶವನ್ನು ವರ್ಷಪೂರ್ತಿ ನೀಡಬೇಕು

3. 2019ರ ಹಿಂದೆ ಇದ್ದಂತೆ ಡೀಲರ್‌ ಬಿಲ್‌ಗಳಿಗೆ ಅವಕಾಶ ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ನ್ಯಾಯಾಂಗ ತನಿಖೆ ಆಗಬೇಕು

ಈ ಕುರಿತು ಪ್ರತಿಕ್ರಿಯೆ ನೀಡಿರುವ ಹನಿ ನೀರಾವರಿ ವಿತರಕರ ಸಂಘದ ಗೌರಾವಾಧ್ಯಕ್ಷ ಗುರುಪ್ರಸಾದ್, ಕಂಪನಿಗಳಿಂದ ಡೀಲರ್‌ಗಳಿಗೆ ನೀಡುವ ಬ್ಯಾಂಕ್‌ ಸ್ಟೇಟ್‌ಮೆಂಟ್‌ಗಳಲ್ಲಿ ʻ8.5% Blr min’ ಎಂದು ನಮೂದಿಸಲಾಗಿದೆ. ಇದರರ್ಥ, ಸಚಿವರಿಗೆ 8.5% ಕಮಿಷನ್‌ ನೀಡಲಾಗುತ್ತಿದೆ ಎಂದು ತಿಳಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿಯವರಿಗೆ ಪತ್ರ ಬರೆಯಲಾಗಿತ್ತು. ಆದರೆ ಏನೂ ಪ್ರಯೋಜನವಾಗಿಲ್ಲ. ಹೀಗಾಗಿ ಪ್ರಧಾನಮಂತ್ರಿಯವರ ಮೊರೆ ಹೋಗಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Eshwarappa Resignation: ಕೊನೆಗೂ ರಾಜೀನಾಮೆ ನೀಡಿದ ಈಶ್ವರಪ್ಪ: ರಾಜಕೀಯ ಜೀವನದ ಅಂತ್ಯ?

Exit mobile version