Site icon Vistara News

ಬಿಡಿಎ ಬ್ರೋಕರ್‌ಗಳ ಮನೆ ಮೇಲೆ ಎಸಿಬಿ ದಾಳಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ

ಬೆಂಗಳೂರು: ಬೆಂಗಳೂರಿನ ನಾಗರಿಕರಿಗೆ ಉತ್ತಮ ಗುಣಮಟ್ದದ ಮೂಲಸೌಕರ್ಯ ಕಲ್ಪಿಸಲು ಸ್ಥಾಪಿತವಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ(ಬಿಡಿಎ) ನುಸುಳಿ ಭ್ರಷ್ಟಾಚಾರದ ಮೂಲವಾಗಿದ್ದ ಬ್ರೋಕರ್‌ಗಳ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ಕಳೆದ ವಾರ ನಡೆಸಿದ್ದ ದಾಳಿ ಇದೀಗ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.

ಜನರಿಗೆ ಮನೆ, ಮೂಲೆ ನಿವೇಶನ ಸೇರಿ ಇನ್ನಿತರೆ ಆಸ್ತಿ ಖರೀದಿಸಲು ಸಹಾಯ ಮಾಡುವ ನೆಪದಲ್ಲಿ ಭ್ರಷ್ಟಾಚಾರ ಎಸಗುತ್ತಿದ್ದ ಒಂಭತ್ತು ಬ್ರೋಕರ್‌ಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆದಿತ್ತು. ಚಾಮರಾಜಪೇಟೆಯ ರಘು ಬಿ ಎನ್ , ಮನೋರಾಯನ ಪಾಳ್ಯದ ಮೋಹನ್, ದೊಮ್ಮಲೂರಿನ ಮನೋಜ್, ಕೆಂಗುಟೆಯ ಮುನಿರತ್ನ@ರತ್ನವೇಲು, ರಾಜರಾಜೇಶ್ವರಿ ನಗರದತೇಜು@ತೇಜಸ್ವಿ,, ಮುದ್ದಿನಪಾಳ್ಯದ ಅಶ್ವಥ್ @ಮುದ್ದಿನಪಾಳ್ಯ ಅಶ್ವಥ್, ಚಾಮುಂಡೇಶ್ವರಿನಗರದ ರಾಮ, ಮುದ್ದಿನಪಾಳ್ಯ ದ ಚಿಕ್ಕ ಹನುಮಯ್ಯ,, ಚಾಮುಂಡಿ ನಗರದ ಲಕ್ಷ್ಮಣ್ ಮನೆಗಳ ಮೇಲೆ ದಾಳಿ ನಡೆದಿತ್ತು.

ಬಿಡಿಎ ಬ್ರೋಕರ್‌ಗಳ ಮನೆಯಲ್ಲಿ ಕಡತ ಪರಿಶೀಲಿಸುತ್ತಿರುವ ಎಸಿಬಿ ಅಧಿಕಾರಿಗಳು

ನೂರಕ್ಕೂ ಹೆಚ್ಚು ಸಿಬ್ಬಂದಿ ಏಕಕಾಲದಲ್ಲಿ ನಡೆಸಿದ ದಾಳಿ ವೇಳೆ 150ಕ್ಕೂ ಹೆಚ್ಚು ದಾಖಲೆಗಳು, ಕಡತಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬ್ರೋಕರ್‌ಗಳು ನಿರ್ಮಿಸಿಕೊಂಡಿರುವ ಐಷಾರಾಮಿ ಬಂಗಲೆಗಳೇ, ಅವರ ಬ್ರಹ್ಮಾಂಡ ಭ್ರಷ್ಟಾಚಾರದ ಕಥೆ ಹೇಳುತ್ತಿದ್ದವು. ವಶಪಡಿಸಿಕೊಂಡ ಕಡತಗಳನ್ನು ಪರಿಶೀಲಿಸುವಾಗ ಎಸಿಬಿ ಅಧಿಕಾರಿಗಳಿಗೆ ಮತ್ತಷ್ಟು ಅಚ್ಚರಿಯಾಗಿದೆ. ಏಕೆಂದರೆ ವಶಪಡಿಸಿಕೊಂಡ ಕಡತಗಳಲ್ಲಿ ಅನೇಕ ಬಿಡಿಎ ಅಧಿಕೃತ ಕಡತಗಳೂ ಸೇರಿವೆ. ಈ ಕಡತಗಳನ್ನು ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ ಖಾಸಗಿ ಸ್ಥಳಗಳಿಗೆ ಕೊಂಡೊಯ್ಯುವುದು ಕಾನೂನುಬಾಹಿರ.

ಕಡತಗಳನ್ನು ಮನೆಯಲ್ಲಿ ತಂದಿಟ್ಟುಕೊಂಡಿದ್ದಾರೆ ಎಂದರೆ ಇದರ ಮಾಹಿತಿ ಅಧಿಕಾರಿಗಳಿಗೆ ಇರಲೇಬೇಕು. ಮಾಃಇತಿ ಇರಲೇಬೇಕು ಎನ್ನುವುದಕ್ಕಿಂತಲೂ ಅಧಿಕಾರಿಗಳ ಸಹಕಾರದಿಂದಲೇ ಈ ಕೃತ್ಯ ನಡೆದಿರುತ್ತದೆ. ಮೂರ್ನಾಲ್ಕು ವರ್ಷದ ಕಡತಗಳನ್ನು ಎಸಿಬಿ ಅಧೀಕಾರಿಗಳು ವಶಪಡಿಸಿಕೊಂಡಿದ್ದಾರೆ. ಹೀಗಾಗಿ ಈ ವರ್ಷಗಳಲ್ಲಿ ಬಿಡಿಎಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ ಹಾಗೂ ಭ್ರಷ್ಟಾಚಾರದಲ್ಲಿ ಸಹಕಾರ ನೀಡಿದ ಅಧಿಕಾರಿಗಳಿಗೆ ಎದೆನಡುಕ ಆರಂಭವಾಗಿದೆ.

ಇದೇ ವೇಳೆ, ದಾಳಿಗೊಳಗಾಗಿರುವ ಎಲ್ಲ ಬ್ರೋಕರ್‌ಗಳೂ ಇನ್ನೂ ಎಸಿಬಿ ವಿಚಾರಣೆಗೆ ಹಾಜರಾಗಿಲ್ಲ. ಎಸಿಬಿ ವಿಚಾರಣೆಗೆ ಆಗಮಿಸುವಂತೆ ಈಗಾಗಲೇ ನೋಟಿಸ್‌ ನೀಡಲಾಗಿದೆ. ರಘು ಹಾಗೂ ಲಕ್ಷ್ಮಣ ಅವರು ಆಗಮಿಸಿ ವಿಚಾರಣೆ ಎದುರಿಸಿದ್ದಾರೆ. ಉಳಿದಂತೆ ಅನೇಕ ಬ್ರೋಕರ್‌ಗಳು ಸಮಯಾವಕಾಶ ಕೋರಿದ್ದಾರೆ. ಕೆಲ ಸಮಯದ ನಂತರ ವಿಚಾರಣೆಗೆ ಹಾಜರಾಗುವುದಾಗಿ ವಕೀಲರ ಮೂಲಕ ಸಂದೇಶ ಕಳಿಸಿದ್ದಾರೆ. ಶೀಘ್ರದಲ್ಲೆ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

Exit mobile version