ಬೆಂಗಳೂರು: ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ತುಮಕೂರಿನ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಯವರ 116ನೇ ಜಯಂತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾರ್ಚ್ 31ರಂದು ಆಗಮಿಸಲಿದ್ದಾರೆ.
ಏಪ್ರಿಲ್ ಒಂದರಂದು ತುಮಕೂರಿನಲ್ಲಿ ಜಯಂತಿ ಕಾರ್ಯಕ್ರಮಗಳು ನಡೆಯಲಿವೆ. ಬಿಜೆಪಿ ನಾಯಕ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಷಾ ಉಪಸ್ಥಿತರಿರಲಿದ್ದು, ಎರಡು ಲಕ್ಷ ಜನರ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ನಡುವೆ ರಾಹುಲ್ ಗಾಂಧಿಯವರು ಅಮಿತ್ ಷಾ ಆಗಮನಕ್ಕೂ ಒಂದು ದಿನ ಮೊದಲೇ ಭೇಟಿ ನೀಡುತ್ತಿದ್ದಾರೆ.(ಅಮಿತ್ ಷಾ ಆಗಮನದ ಕುರಿತ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
ಮೊದಲಿಗೆ ಸಿದ್ಧಗಂಗಾ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ರಾಹುಲ್ ಗಾಂಧಿ, ನಂತರ ತುಮಕೂರಿನ ಕಾಂಗ್ರೆಸ್ ಪದಾಧಿಕಾರಿಗಳನ್ನು ಭೇಟಿ ಮಾಡುತ್ತಾರೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾಂಗ್ರೆಸ್ ನಾಯಕರೊಂದಿಗೆ ಸಭೆ ನಡೆಸುತ್ತಾರೆ. ಈ ಸಭೆಯ ನಂತರ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು ಹಾಗೂ ಈ ಹಿಂದೆ ಸ್ಪರ್ಧಿಸಿ ಪರಾಭವಗೊಂಡಿರುವ ಅಭ್ಯರ್ಥಿಗಳ ಜತೆಗೆ ಜೂಮ್ ಆಪ್ ಮೂಲಕ ಸಭೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
ಸದಸ್ಯತ್ವ ಅಭಿಯಾನಕ್ಕೆ ಚುರುಕು
ಕಾಂಗ್ರೆಸ್ ಪಕ್ಷ ನಾಯಕರ ಪಕ್ಷ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಬೃಹತ್ ಪ್ರಮಾಣದಲ್ಲಿ ಸದಸ್ಯತ್ವ ಅಭಿಯಾನವನ್ನು ನಡೆಸುತ್ತಿದೆ. ಬಿಜೆಪಿ ರೀತಿಯಲ್ಲಿ ಕಾರ್ಯಕರ್ತರನ್ನು ಹೊಂದಿದರೆ ಮಾತ್ರವೇ ಚುನಾವಣೆಯಲ್ಲಿ ಜಯಿಸುವುದು ಸಾಧ್ಯ ಎಂದು ಆನ್‌ಲೈನ್ ಮೂಲಕ ಅಭಿಯಾನ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಇನ್ನೇನು ಚುನಾವಣಾ ಹವಾ ಆರಂಭವಾಗುತ್ತದೆ ಎಂದು ಅರಿತಿರುವ ಪಕ್ಷ, ಸದಸ್ಯತ್ವ ಅಭಿಯನದಲ್ಲಿ ಹೆಚ್ಚಿನ ಸಾಧನೆ ಮಾಡಿರುವವರನ್ನು ಭೇಟಿ ಮಾಡಲಿದ್ದಾರೆ. ಈ ಮೂಲಕ ಮತ್ತಷ್ಟು ಜನರಿಗೆ ಉತ್ತೇಜನ ನೀಡಿ ತನ್ನ ಕಾರ್ಯಕರ್ತರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.