ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದ ನೈತಿಕ ಪೊಲೀಸ್‌ಗಿರಿ ಪ್ರಕರಣದಲ್ಲಿ ವಿದ್ಯಾರ್ಥಿಗೆ ಹಿಗ್ಗಾಮುಗ್ಗ ಥಳಿಸಿದ 9 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ಸುಳ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಕಾಂನ ಮೊಹಮ್ಮದ್ ಹನೀಫ್ ಎಂಬಾತನ ಮೇಲೆ ಹಲ್ಲೆ ನಡೆಸಿದ್ದ ಕಾಲೇಜು ವಿದ್ಯಾರ್ಥಿಗಳಾದ ದೀಕ್ಷಿತ್, ಧನುಷ್, ಪ್ರಜ್ವಲ್, ತನುಜ್, ಅಕ್ಷಯ್, ಮೋಕ್ಷಿತ್, ಚರಣ್, ನಿಶ್ಚಯ್ ಮತ್ತು ಪವನ್‌ರನ್ನು ಬಂಧಿಸಲಾಗಿದೆ. ಇವರಲ್ಲಿ ತನುಜ್, ಮೋಕ್ಷಿತ್, ದೀಕ್ಷಿತ್, ಅಕ್ಷಯ್ ಮತ್ತು ಪ್ರಜ್ವಲ್ ಹಲ್ಲೆ ನಡೆಸಿದವರು. ಚರಣ್, ಧನುಷ್, ನಿಶ್ಚಯ್ ಮತ್ತು ಪವನ್ ಹಲ್ಲೆಗೆ ಸಹಕರಿಸಿದವರು.
ಸುಳ್ಯದ ಕಾಲೇಜು ಗ್ರೌಂಡ್‌ನಲ್ಲಿ ಬುಧವಾರ ಘಟನೆ ನಡೆದಿತ್ತು. ಕಾಲೇಜಿನ ಹೊರಗೆ ಆತ್ಮೀಯವಾಗಿ ವರ್ತಿಸುತ್ತಿದ್ದ ಹಿಂದೂ ಹುಡುಗಿ ಹಾಗೂ ಮುಸ್ಲಿಂ ಹುಡುಗ ಜೋಡಿಯನ್ನು ಗಮನಿಸಿದ್ದ ವಿದ್ಯಾರ್ಥಿಗಳು ಅವರಿಗೆ ಎಚ್ಚರಿಕೆ ನೀಡಿದ್ದರು. ಎಚ್ಚರಿಕೆಗೆ ಸೊಪ್ಪು ಹಾಕದೆ ಇದ್ದಾಗ ಹುಡುಗನ ಬೆನ್ನ ತುಂಬಾ ಬಾಸುಂಡೆ ಬರುವ ಹಾಗೆ ಥಳಿಸಿದ್ದರು. ಥಳಿತಕ್ಕೊಳಗಾದ ವಿದ್ಯಾರ್ಥಿ ಹನೀಫ್ ದೂರು ನೀಡಿದ್ದ. ಸುಳ್ಯ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ; ವಿದ್ಯಾರ್ಥಿಗೆ ಥಳಿಸಿದ ಕಿಡಿಗೇಡಿಗಳು!