ಬೆಂಗಳೂರು: ವೈದ್ಯೋ ನಾರಾಯನ ಹರಿಃ ಎಂಬ ಮಾತಿನಂತೆ ಬೆಂಗಳೂರಿನಲ್ಲಿ ವೈದ್ಯರೊಬ್ಬರು ರೋಗಿಯ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆವರೆಗೆ ಮೂರು ಕಿ.ಮೀ ನಡೆಯುವ ಮೂಲಕ ಎಲ್ಲ ವೈದ್ಯರಿಗೂ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಭಾರಿ ಮಳೆಯಿಂದ ಟ್ರಾಫಿಕ್ ಜಾಮ್ ಉಂಟಾದ ಕಾರಣ ಕಾರಿನಲ್ಲಿ ಚಲಿಸಲು ಆಗದೆ, ವೈದ್ಯರು ನಡೆದುಕೊಂಡೇ ಆಸ್ಪತ್ರೆಗೆ ತೆರಳುವ ಮೂಲಕ ವೃತ್ತಿಬದ್ಧತೆ ಮೆರೆದಿದ್ದಾರೆ.
ಆಗಸ್ಟ್ ೩೦ರಂದು ಕನ್ನಿಂಗ್‌ಹ್ಯಾಮ್ ರೋಡ್‌ನಿಂದ ಸರ್ಜಾಪುರ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಡಾ.ಗೋವಿಂದ್ ನಂದಕುಮಾರ್ ತೆರಳುತ್ತಿದ್ದರು. ಇದೇ ವೇಳೆ ಭಾರಿ ಮಳೆಯಿಂದಾಗಿ ಮೂರು ಕಿ.ಮೀ ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿದೆ. ಗೂಗಲ್ ಮ್ಯಾಪ್‌ನಲ್ಲಿ ಆಸ್ಪತ್ರೆ ತಲುಪಲು ೪೦ ನಿಮಿಷ ಬೇಕು ಎಂದು ತೋರಿಸಿದೆ. ಆದರೆ, ರೋಗಿಯೊಬ್ಬರಿಗೆ ಪಿತ್ತಕೋಶದ ಸರ್ಜರಿಗೆ ಸಮಯ ನಿಗದಿಯಾದ ಕಾರಣ ನಡೆದುಕೊಂಡೇ ಆಸ್ಪತ್ರೆಗೆ ತೆರಳಿದ್ದಾರೆ.
ಕಾರಿನಿಂದ ಇಳಿದು ಡಾ.ಗೋವಿಂದ್ ನಡೆಯಲು ಆರಂಭಿಸಿದ್ದಾರೆ. ಆಗಲೂ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತೆರಳಲು ಆಗುವುದಿಲ್ಲ ಎನಿಸಿದಾಗ ಓಡಿಕೊಂಡು ಹೋಗಿದ್ದಾರೆ. ಸರಿಯಾದ ಸಮಯಕ್ಕೆ ತೆರಳಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಇವರು ಓಡಿಕೊಂಡು ಹೋದ ವಿಡಿಯೊ ಜಾಲತಾಣದಲ್ಲಿ ವೈರಲ್ ಆಗಿದೆ. ಇವರ ಕರ್ತವ್ಯ ಬದ್ಧತೆಗೆ ಆಸ್ಪತ್ರೆ ಸಿಬ್ಬಂದಿಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Petrol Price | ವೈದ್ಯರ ಲೆಟರ್ ಟ್ರೀಟ್ಮೆಂಟ್‌ಗೆ ಕೇಂದ್ರ ಸ್ಪಂದನೆ; ಶಿರಸಿ ಪೆಟ್ರೋಲ್ ದರದಲ್ಲಿ ಭಾರಿ ಇಳಿಕೆ!