ಆರೋಗ್ಯ
ವೈದ್ಯೋ ನಾರಾಯಣೋ ಹರಿಃ | ರೋಗಿಗೆ ಶಸ್ತ್ರಚಿಕಿತ್ಸೆ ಮಾಡಲು 3 ಕಿ.ಮೀ ಓಡಿ ಕರ್ತವ್ಯ ಬದ್ಧತೆ ಮೆರೆದ ಡಾಕ್ಟರ್!
ಭಾರಿ ಮಳೆಯಿಂದ ಟ್ರಾಫಿಕ್ ಜಾಮ್ ಉಂಟಾದ ಕಾರಣ ಕಾರಿನಲ್ಲಿ ಚಲಿಸಲು ಆಗದೆ, ವೈದ್ಯರು ನಡೆದುಕೊಂಡೇ ಆಸ್ಪತ್ರೆಗೆ ತೆರಳಿ, ಸರಿಯಾದ ಸಮಯಕ್ಕೆ ಸರ್ಜರಿ ಮಾಡುವ ಮೂಲಕ ಮಾದರಿ ಎನಿಸಿದ್ದಾರೆ.
ಬೆಂಗಳೂರು: ವೈದ್ಯೋ ನಾರಾಯನ ಹರಿಃ ಎಂಬ ಮಾತಿನಂತೆ ಬೆಂಗಳೂರಿನಲ್ಲಿ ವೈದ್ಯರೊಬ್ಬರು ರೋಗಿಯ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆವರೆಗೆ ಮೂರು ಕಿ.ಮೀ ನಡೆಯುವ ಮೂಲಕ ಎಲ್ಲ ವೈದ್ಯರಿಗೂ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಭಾರಿ ಮಳೆಯಿಂದ ಟ್ರಾಫಿಕ್ ಜಾಮ್ ಉಂಟಾದ ಕಾರಣ ಕಾರಿನಲ್ಲಿ ಚಲಿಸಲು ಆಗದೆ, ವೈದ್ಯರು ನಡೆದುಕೊಂಡೇ ಆಸ್ಪತ್ರೆಗೆ ತೆರಳುವ ಮೂಲಕ ವೃತ್ತಿಬದ್ಧತೆ ಮೆರೆದಿದ್ದಾರೆ.
ಆಗಸ್ಟ್ ೩೦ರಂದು ಕನ್ನಿಂಗ್‌ಹ್ಯಾಮ್ ರೋಡ್‌ನಿಂದ ಸರ್ಜಾಪುರ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಡಾ.ಗೋವಿಂದ್ ನಂದಕುಮಾರ್ ತೆರಳುತ್ತಿದ್ದರು. ಇದೇ ವೇಳೆ ಭಾರಿ ಮಳೆಯಿಂದಾಗಿ ಮೂರು ಕಿ.ಮೀ ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿದೆ. ಗೂಗಲ್ ಮ್ಯಾಪ್‌ನಲ್ಲಿ ಆಸ್ಪತ್ರೆ ತಲುಪಲು ೪೦ ನಿಮಿಷ ಬೇಕು ಎಂದು ತೋರಿಸಿದೆ. ಆದರೆ, ರೋಗಿಯೊಬ್ಬರಿಗೆ ಪಿತ್ತಕೋಶದ ಸರ್ಜರಿಗೆ ಸಮಯ ನಿಗದಿಯಾದ ಕಾರಣ ನಡೆದುಕೊಂಡೇ ಆಸ್ಪತ್ರೆಗೆ ತೆರಳಿದ್ದಾರೆ.
ಕಾರಿನಿಂದ ಇಳಿದು ಡಾ.ಗೋವಿಂದ್ ನಡೆಯಲು ಆರಂಭಿಸಿದ್ದಾರೆ. ಆಗಲೂ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತೆರಳಲು ಆಗುವುದಿಲ್ಲ ಎನಿಸಿದಾಗ ಓಡಿಕೊಂಡು ಹೋಗಿದ್ದಾರೆ. ಸರಿಯಾದ ಸಮಯಕ್ಕೆ ತೆರಳಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಇವರು ಓಡಿಕೊಂಡು ಹೋದ ವಿಡಿಯೊ ಜಾಲತಾಣದಲ್ಲಿ ವೈರಲ್ ಆಗಿದೆ. ಇವರ ಕರ್ತವ್ಯ ಬದ್ಧತೆಗೆ ಆಸ್ಪತ್ರೆ ಸಿಬ್ಬಂದಿಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Petrol Price | ವೈದ್ಯರ ಲೆಟರ್ ಟ್ರೀಟ್ಮೆಂಟ್‌ಗೆ ಕೇಂದ್ರ ಸ್ಪಂದನೆ; ಶಿರಸಿ ಪೆಟ್ರೋಲ್ ದರದಲ್ಲಿ ಭಾರಿ ಇಳಿಕೆ!
ಆರೋಗ್ಯ
Salt intake: ಭಾರತೀಯರಿಗೆ ‘ಉಪ್ಪು’ ತಿನ್ನೋದು ‘ನೀರು’ ಕುಡಿದಷ್ಟೇ ಸಲೀಸು! ವಿಶ್ವ ಆರೋಗ್ಯ ಸಂಸ್ಥೆ ಪ್ರಮಾಣ ಲೆಕ್ಕಕ್ಕಿಲ್ಲ
Salt intake:ನ್ಯಾಷನಲ್ ಎನ್‌ಸಿಡಿ ಮಾನಿಟರಿಂಗ್ ಸರ್ವೇ ಭಾಗವಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಭಾರತೀಯರ ಉಪ್ಪು ಸೇವನೆಯ ಪ್ರಮಾಣ ಮಾಹಿತಿ ಬಹಿರಂಗವಾಗಿದೆ.
ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ (WHO Recommendations) ನಿಗದಿ ಪಡಿಸಿದ ಪ್ರಮಾಣಕ್ಕಿಂತಲೂ ಭಾರತೀಯ ನಿತ್ಯ ಹೆಚ್ಚು ಉಪ್ಪು ಸೇವಿಸುತ್ತಾರಂತೆ! ಹೌದು, ನ್ಯಾಷನಲ್ ಎನ್‌ಸಿಡಿ ಮಾನಿಟರಿಂಗ್ ಸರ್ವೇ(NNMS) ಭಾಗವಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ(ICMR)ಕೈಗೊಂಡ ಸಮೀಕ್ಷೆಯ ಪ್ರಕಾರ, ನಿತ್ಯ ಭಾರತೀಯರು (Indians) 8.09 ಗ್ರಾಮ್ ಉಪ್ಪು ಸೇವಿಸುತ್ತಾರೆ(Salt intake). ಈ ಪೈಕಿ ಪುರುಷರು ನಿತ್ಯ 8.9 ಮತ್ತು ಮಹಿಳೆಯರು 7.1 ಗ್ರಾಮ್ ಉಪ್ಪು ಸೇವಿಸುತ್ತಾರೆ. ಆದರೆ, ಇದು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಪ್ರಮಾಣಕ್ಕಿಂತಲೂ ಹೆಚ್ಚಾಗಿದೆ. ಡಬ್ಲ್ಯೂಎಚ್‌ಒ ನಿತ್ಯ 5 ಗ್ರಾಮ್ ಉಪ್ಪು ಸೇವಿಸಲು ಶಿಫಾರಸು ಮಾಡುತ್ತದೆ. ಪುರುಷರು ಮತ್ತು ಮಹಿಳೆಯರಿಗೆ ಹೋಲಿಸಿದರೆ, ಗ್ರಾಮೀಣ ಪ್ರದೇಶದಲ್ಲಿರುವ ಪುರುಷರೇ ಹೆಚ್ಚು ಸೇವಿಸುತ್ತಾರೆ ಎಂದು ಸಮೀಕ್ಷೆ ಹೇಳಿದೆ.
ಭಾರತೀಯ ಜನಸಂಖ್ಯೆಯಲ್ಲಿ ಸರಾಸರಿ ಆಹಾರದ ಉಪ್ಪು ಸೇವನೆಯು ಅಧಿಕವಾಗಿದೆ. ಸಂಸ್ಕರಿಸಿದ ಆಹಾರಗಳನ್ನು ಮತ್ತು ಮನೆಯ ಹೊರಗೆ ಬೇಯಿಸಿದ ಆಹಾರವನ್ನು ತಿನ್ನುವುದನ್ನು ನಾವು ಕಡಿಮೆ ಮಾಡಬೇಕು. 18–69 ವರ್ಷ ವಯಸ್ಸಿನ 10,659 ವಯಸ್ಕರು ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ ಎಂದು ಅಧ್ಯಯನದ ಪ್ರಮುಖ ಲೇಖಕ ಮತ್ತು ICMR-ರಾಷ್ಟ್ರೀಯ ರೋಗ ಮಾಹಿತಿ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರಶಾಂತ್ ಮಾಥುರ್ ಹೇಳಿದ್ದಾರೆ.
ಉದ್ಯೋಗದಲ್ಲಿರುವವರು(8.6 ಗ್ರಾಮ್), ತಂಬಾಕು ಸೇವನೆ ಮಾಡುವವರು(8.3 ಗ್ರಾಮ್) ಮತ್ತು ಅಧಿಕ ರಕ್ತದೊತ್ತಡ(8.5 ಗ್ರಾಮ್) ಇರುವವರು ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಸೇವಿಸುವುದು ಅಧ್ಯಯನದ ವೇಳೆ ಗೊತ್ತಾಗಿದೆ. ಉಪ್ಪ ಸೇವನೆಯನ್ನು ಕಡಿಮೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಜತೆಗೆ, ಶೇ.25ರಷ್ಟು ರಕ್ತದೊತ್ತಡ ಇಳಿಕೆಯ ಸಂಬಂಧ ವೆಚ್ಚ ನಿಯಂತ್ರಣವೂ ಸಾಧ್ಯವಾಗಲಿದೆ. ಇದರಿಂದಾಗಿ 2025ರ ಹೊತ್ತಿಗೆ ಶೇ.30ರಷ್ಟು ಜನಸಂಖ್ಯೆ ಉಪ್ಪು ಸೇವನೆ ಕಡಿಮೆಯಾಗಲಿದೆ.
ಈ ಸುದ್ದಿಯನ್ನೂ ಓದಿ: Sugar Vs Salt: ಸಕ್ಕರೆ ಮತ್ತು ಉಪ್ಪು: ಕಿಡ್ನಿಗೆ ಯಾವುದು ಹಿತಕರ?
ಭಾರತದಲ್ಲಿನ ಒಟ್ಟು ಸಾವಿನ ಪ್ರಮಾಣದಲ್ಲಿ ಶೇ.28.1 ಸಾವುಗಳು ಹೃದಯ ಸಂಬಂಧಿ ಕಾಯಿಲೆಗಳಿಂದಲೇ ಸಂಭವಿಸಿವೆ. 1990 ರಲ್ಲಿ 0.78 ಮಿಲಿಯನ್ ಸಾವುಗಳಿಗೆ ಹೋಲಿಸಿದರೆ 2016ರಲ್ಲಿ 1.63 ಮಿಲಿಯನ್ ಸಾವುಗಳು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಿವೆ ಎಂದು ಅಧ್ಯಯನವು ಹೇಳಿದೆ.
ಭಾಗವಹಿಸುವವರಲ್ಲಿ ಅರ್ಧಕ್ಕಿಂತ ಕಡಿಮೆ ಜನರು ಆಹಾರದ ಉಪ್ಪು ಸೇವನೆಯನ್ನು ನಿಯಂತ್ರಿಸುವ ಕ್ರಮಗಳನ್ನು ಅಭ್ಯಾಸ ಮಾಡಿದ್ದಾರೆ ಮತ್ತು ಉಪ್ಪಿನ ಮಿತಿಮೀರಿದ ಪ್ರಮಾಣವನ್ನು ತಡೆಗಟ್ಟಲು ಸಾಮಾನ್ಯವಾಗಿ ಅಳವಡಿಸಿಕೊಂಡ ಹಂತವೆಂದರೆ ಮನೆಯ ಹೊರಗೆ ಊಟವನ್ನು ಕಡಿಮೆ ಮಾಡುವುದು ಆಗಿದೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಆರೋಗ್ಯ
Benefits Of Ajwain: ಅಜವಾನವೆಂಬ ಘಾಟುಮದ್ದಿನ ಬಗ್ಗೆ ನಿಮಗೆ ಗೊತ್ತಿದೆಯೆ?
ಇದು ಭಾರತೀಯ ಅಡುಗೆ ಮನೆಗಳ ಸಂಗಾತಿ ಮಾತ್ರವೇ ಅಲ್ಲ, ಪಶ್ಚಿಮ ಏಷ್ಯಾ ಸಂಸ್ಕೃತಿಗಳಲ್ಲೂ ಸೂಪಶಾಸ್ತ್ರದ ಸಂಗಾತಿ. ಹೊಟ್ಟೆ ಬಿರಿಯುವಂಥ ಊಟ ಮಾಡಿದಾಗ, ಅಜವಾನದ (Benefits Of Ajwain) ಚಹಾ ಅಥವಾ ಕಷಾಯ ಕುಡಿಯುವುದರಿಂದ ಜೀರ್ಣ ಸರಾಗವಾಗಿ ಹೊಟ್ಟೆ ಭಾರ ಕಡಿಮೆಯಾಗುತ್ತದೆ. ಔಷಧೀಯ ಗುಣಗಳಿಗಾಗಿ ಇದರ ಬಳಕೆ ಅಪಾರ.
ಓಂಕಾಳು, ಅಜವಾನ (Benefits Of Ajwain) ಎಂದೆಲ್ಲಾ ಕರೆಸಿಕೊಳ್ಳುವ ಈ ಸಣ್ಣ ಬೀಜಗಳ ಬಳಕೆ ಹಲವು ಶತಮಾನಗಳಷ್ಟು ಹಳೆಯದ್ದು. ಒಗ್ಗರಣೆಗಳ ಘಮ ಹೆಚ್ಚಿಸುವ, ಚಕ್ಕುಲಿ, ಪಕೋಡಾದಂಥ ಕುರುಕಲು ತಿಂಡಿಗಳ ರುಚಿಗಟ್ಟಿಸುವ ಅಜವಾನ ಹಲವಾರು ರೀತಿಯಲ್ಲಿ ಬಳಕೆಯಲ್ಲಿದೆ. ಅದರಲ್ಲೂ ಔಷಧೀಯ ಗುಣಗಳಿಗಾಗಿ ಇದರ ಬಳಕೆ ಅಪಾರ. ಹಸಿವು ಹೆಚ್ಚಿಸುವ ಸರಳ ಕೆಲಸದಿಂದ ಹಿಡಿದು, ತೂಕ ಇಳಿಸುವ ಘನಂದಾರಿ ಕೆಲಸದವರೆಗೆ ಇದರ ಉಪಯೋಗ ಬಹಳಷ್ಟಿದೆ. ಇಲ್ಲಿದೆ ಈ ಪುಟ್ಟ ಬೀಜಗಳ ಮಾಹಿತಿ.
ಮೂಗರಳಿಸುವಂಥ ಘಮ ಇದ್ದರೂ, ರುಚಿಯಲ್ಲಿದು ಸ್ವಲ್ಪ ಕಟು, ಘಾಟು ಮತ್ತು ಖಾರ. ಇದೇ ಕಾರಣಕ್ಕಾಗಿ ಪರಾಟೆಗಳಿಂದ ತೊಡಗಿ ಉಪ್ಪಿನಕಾಯಿಗಳವರೆಗೆ ಹಲವು ರೀತಿಯ ಅಡುಗೆಗಳಲ್ಲಿ ಬಳಕೆಯಲ್ಲಿದೆ. ಇದು ಭಾರತೀಯ ಅಡುಗೆ ಮನೆಗಳ ಸಂಗಾತಿ ಮಾತ್ರವೇ ಅಲ್ಲ, ಪಶ್ಚಿಮ ಏಷ್ಯಾ ಸಂಸ್ಕೃತಿಗಳಲ್ಲೂ ಸೂಪಶಾಸ್ತ್ರದ ಸಂಗಾತಿ. ಕರಿಯುವಂಥ ಮತ್ತು ಖಾರದ ಅಡುಗೆಗಳಲ್ಲಿ ಇದರ ಘಮ ಪ್ರಿಯವೆನಿಸುತ್ತವೆ. ಹೊಟ್ಟೆ ಬಿರಿಯುವಂಥ ಊಟ ಮಾಡಿದಾಗ, ಅಜವಾನದ (ajwain) ಚಹಾ ಅಥವಾ ಕಷಾಯ ಕುಡಿಯುವುದರಿಂದ ಜೀರ್ಣ ಸರಾಗವಾಗಿ ಹೊಟ್ಟೆ ಭಾರ ಕಡಿಮೆಯಾಗುತ್ತದೆ.
ಉತ್ಕರ್ಷಣ ನಿರೋಧಕ
ಪ್ರಬಲ ಉತ್ಕರ್ಷಣ ನಿರೋಧಕವಾಗಿ ಇದು ಬಳಕೆಯಲ್ಲಿದ್ದು ಉರಿಯೂತ ನಿವಾರಿಸುವಲ್ಲಿ- ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಇದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ಫಂಗಸ್, ಬ್ಯಾಕ್ಟೀರಿಯಗಳೊಂದಿಗೆ ಹೋರಾಡುತ್ತದೆ. ಹಾಗೆಂದೇ ಜ್ವರ ಬಂದಾಗ ಓಂಕಾಳಿನ (carom seeds) ಬಳಕೆ ಪರಂಪರಾಗತ ಔಷಧ ಪದ್ಧತಿಯಲ್ಲಿದೆ. ಮುಟ್ಟಿನ ಹೊಟ್ಟೆನೋವಿನ ಉಪಶಮನಕ್ಕೂ ಇದು ಪರಿಣಾಮಕಾರಿ ಮದ್ದು.
ಜೀರ್ಣಕಾರಿ
ಅಜವಾನಕ್ಕೆ ದೇಹವನ್ನು ಡಿಟಾಕ್ಸ್ ಮಾಡುವ ಸಾಮರ್ಥ್ಯವಿದೆ. ಹಸಿವನ್ನು ಹೆಚ್ಚಿಸುವುದೇ ಅಲ್ಲದೆ, ಪಚನಕ್ರಿಯೆಯನ್ನು ಚುರುಕು ಮಾಡಬಲ್ಲದು. ಹೊಟ್ಟೆಯುಬ್ಬರ, ವಾಯುಬಾಧೆ, ಆಸಿಡಿಟಿ, ಅಜೀರ್ಣದಿಂದ ಉಂಟಾಗುವ ಹೊಟ್ಟೆನೋವಿಗೆ ಇದು ಶೀಘ್ರ ಉಪಶಮನ ನೀಡುತ್ತದೆ. ತೀವ್ರ ಆಸಿಡಿಟಿಯಿಂದ ಕರುಳಿನಲ್ಲಿ ಹುಣ್ಣಾದರೆ, ಆ ನೋವು ತಡೆಯಲು ಇದು ಉಪಯುಕ್ತ. ಡಯರಿಯಾ, ಕಿಬ್ಬೊಟ್ಟೆ ನೋವಿನ ಶಮನಕ್ಕೆ ಓಂಕಾಳಿನ ಕಷಾಯ ಬಳಕೆಯಲ್ಲಿದೆ. ಪುಟ್ಟ ಮಕ್ಕಳಿಗೆ ಅಜೀರ್ಣದಿಂದ ಹೊಟ್ಟೆ ನೋವು ಬಂದರೆ, ಓಂಕಾಳನ್ನು ಸೇವಿಸಲು ನೀಡುವ ಕ್ರಮವಿಲ್ಲ. ಬದಲಿಗೆ, ಅಜವಾನದ ಎಣ್ಣೆಯನ್ನು ಹೊಕ್ಕುಳಿನ ಸುತ್ತಮುತ್ತ ಹಚ್ಚಲಾಗುತ್ತದೆ. ಇದರಿಂದ ಜೀರ್ಣಾಂಗಗಳು ಚುರುಕಾಗುತ್ತವೆ.
ತೂಕ ಇಳಿಕೆ
ಜೀರ್ಣಾಂಗಗಳ ತೊಂದರೆಯನ್ನು ಕಡಿಮೆ ಮಾಡಿ, ದೇಹದ ಚಯಾಪಚಯವನ್ನೂ ಹೆಚ್ಚಿಸುವ ಈ ಮಸಾಲೆ ಬೀಜಗಳು, ತೂಕ ಇಳಿಕೆಗೂ ಬಳಕೆಯಾಗುತ್ತವೆ. ಇದರಲ್ಲಿರುವ ಥೈಮೋಲ್ (thymol) ಎಂಬ ಅಂಶವು ಚಯಾಪಚಯ ಚುರುಕಾಗಿಸಿ, ಕೊಬ್ಬನ್ನೂ ವಿಘಟಿಸುತ್ತದೆ. ಇದಕ್ಕಾಗಿ ಖಾಲಿ ಹೊಟ್ಟೆಯಲ್ಲಿ ಅಜವಾನದ ನೀರು ಕುಡಿಯುವ ಪದ್ಧತಿ ಚಾಲ್ತಿಯಲ್ಲಿದೆ. ದೇಹದಲ್ಲಿ ಶೇಖರವಾಗಿರುವ ಕೊಬ್ಬು ಕರಗಿಸಿ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ ಕಡಿಮೆ ಮಾಡಲು ಸಹ ಇದು ನೆರವು ನೀಡುತ್ತದೆ.
ಬಾಣಂತಿಯರಿಗೆ ಮದ್ದು
ಪರಂಪರೆಯ ಔಷಧಿಗಳಲ್ಲಿ, ಹೆರಿಗೆಯ ನಂತರ ಹೊಟ್ಟೆಯ ಭಾಗಕ್ಕೆ ಬಲ ತುಂಬುವ ಉದ್ದೇಶದಿಂದ ಬೆಲ್ಲ ಮತ್ತು ತುಪ್ಪದ ಜೊತೆಗೆ ಅಜವಾನದ ಪುಡಿಯನ್ನು ಸೇರಿಸಿ ನೀಡಲಾಗುತ್ತದೆ. ಅನಗತ್ಯ ಕೊಬ್ಬು ನಿವಾರಣೆಗೂ ಇದು ನೆರವಾಗುತ್ತದೆ. ಗರ್ಭಾಶಯದ ಸಂಕುಚನ-ವಿಕಸನವನ್ನು ಸರಾಗಗೊಳಿಸಿ ಮುಟ್ಟಿನ ಹೊಟ್ಟೆ ನೋವು ಸಹ ಕಡಿಮೆ ಮಾಡುತ್ತದೆ
ಯಾರಿಗೆ ಬೇಡ?
ಗರ್ಭಿಣಿಯರಿಗೆ ಅಜವಾನದ ಬಳಕೆ ಮಾಡುವ ಕ್ರಮವಿಲ್ಲ. ಗರ್ಭಾಶಯನ ಸಂಚಲನಕ್ಕೆ ಇದು ಮೂಲವಾಗಬಹುದೆಂಬ ಕಾರಣ ಇದರ ಹಿಂದಿದೆ. ಪುಟ್ಟ ಮಕ್ಕಳಿಗೂ ಈ ಕಟು ರುಚಿಯ ಬೀಜಗಳನ್ನು ನೀಡುವುದಿಲ್ಲ. ಅಗತ್ಯವಿದ್ದರೆ ಅದರ ಎಣ್ಣೆಯನ್ನು ಲೇಪಕ್ಕೆ ಬಳಸುತ್ತಾರೆ. ರಕ್ತದೊತ್ತಡದ ಔಷಧಿ ಮೇಲಿರುವವರು ನಿಯಮಿತವಾಗಿ ಅಜವಾನ ಸೇವಿಸುವುದು ಸಲ್ಲದು. ಅಲರ್ಜಿಗಳಿದ್ದವರು ಈ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ.
ಇದನ್ನೂ ಓದಿ: Improve Oral Health: ಹಣ್ಣುಗಳ ಸೇವನೆಯಿಂದ ಬಾಯಿಯ ಆರೋಗ್ಯ ಸುಧಾರಿಸುತ್ತದೆಯೆ?
Relationship
Parenting Tips: ನಿಮ್ಮ ಮಕ್ಕಳು ಅಡ್ಡ ಬೆಳೆಯದೆ, ಉದ್ದ ಬೆಳೆಯಬೇಕೆಂದರೆ ಈ ಆಹಾರವನ್ನೇ ನೀಡಿ!
ಮಕ್ಕಳು ಉದ್ದ ಬೆಳೆಯುವಂತೆ ಮಾಡುವುದೇನೂ ಬ್ರಹ್ಮವಿದ್ಯೆ ಅಂದುಕೊಳ್ಳಬೇಡಿ. ಮಕ್ಕಳ ದೇಹಕ್ಕೆ ಈ ಕೆಳಗಿನ ಆಹಾರಗಳನ್ನು ನಿಯಮಿತವಾಗಿ ಕೊಡುತ್ತಿದ್ದೇವಾ ಎಂದು ಒಮ್ಮೆ ಯೋಚಿಸಿದರೆ (Parenting tips) ಸಾಕು, ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಲ್ಲೇ ಸಿದ್ಧ!
ಮಕ್ಕಳು ಬೆಳೆಯುವ ವಯಸ್ಸಿನಲ್ಲಿ ಚೆನ್ನಾಗಿ ತಿನ್ನಬೇಕು ಎಂಬ ಹಿರಿಯರ ಮಾತನ್ನು ನೀವು ಕೇಳಿರಬಹುದು. ಹೆಚ್ಚಾಗಿ, ಮನೆಯಲ್ಲಿರುವ ಹಿರಿಯರು, ಮಕ್ಕಳಿಗೆ ಆರೋಗ್ಯಪೂರ್ಣವಾದ ಆಹಾರವನ್ನು (Healthy food) ನೀಡುವುದನ್ನು ಪ್ರೋತ್ಸಾಹಿಸುತ್ತಲೇ ಇರುತ್ತಾರೆ. ಕೆಲವು ಪರಂಪರಾಗತ ತಿಂಡಿಗಳು, ಹಳೆಯ ತಿನಿಸುಗಳು, ಧಾನ್ಯ ಬೇಳೆಕಾಳುಗಳು ಹಾಗೂ ತರಕಾರಿಗಳಿಂದ ಸಮೃದ್ಧವಾದ ಆಹಾರ ಇತ್ಯಾದಿಗಳು ಮಕ್ಕಳ ನಿತ್ಯಾಹಾರವಾಗಿರಲಿ (children food) ಎಂದು ಮನೆಯಲ್ಲಿರುವ ಹಿರಿಯರು ಹೆಚ್ಚು ದೇಸೀ ತಿನಿಸುಗಳು, ಪೋಷಕಾಂಶಯುಕ್ತ ಬೆಳಗಿನ ಉಪಹಾರಗಳು ಇತ್ಯಾದಿಗಳತ್ತ ಗಮನ ನೀಡುತ್ತಾರೆ. ಆದರೆ ಇತ್ತೀಚೆಗಿನ ಧಾವಂತದ ಬದುಕಿನಲ್ಲಿ ಮಕ್ಕಳ ಕಣ್ಣಿಗೆ ಮಾರುಕಟ್ಟೆಯಲ್ಲೂ ಥರಹೇವಾರಿ, ಬಣ್ಣಬಣ್ಣದ ಆಕರ್ಷಕ, ರುಚಿಕಟ್ಟಾದ ಆಹಾರಗಳು ಸಿಗುವುದರಿಂದ ಮಕ್ಕಳೂ ಕೂಡಾ ಅವುಗಳ ದಾಸರಾಗುತ್ತಿದ್ದಾರೆ. ಇದರಿಂದ ಮಕ್ಕಳು ಎಳವೆಯಲ್ಲಿಯೇ ಹಲವಾರು ಆರೋಗ್ಯ ಸಮಸ್ಯೆಗಳನ್ನೂ (Health problems) ಎದುರಿಸುತ್ತಿದ್ದಾರೆ. ಬೊಜ್ಜು (Cholesterol) ಹೆಚ್ಚಾಗುತ್ತಿದೆ. ಮಧುಮೇಹ (Diabetes) ಸಾಮಾನ್ಯವಾಗುತ್ತಿದೆ. ನಮ್ಮ ಮಕ್ಕಳು ಉದ್ದ ಬೆಳೆಯದೆ ಅಡ್ಡ ಬೆಳೆಯುತ್ತಿದ್ದಾರಲ್ಲಾ ಎಂಬ ಕೊರಗೂ ಕೂಡಾ ಪೋಷಕರದು. ಹಾಗಾದರೆ ಮಕ್ಕಳು ಉದ್ದ ಬೆಳೆಯುವಂತೆ ಮಾಡುವುದೇನೂ ಬ್ರಹ್ಮವಿದ್ಯೆ ಅಂದುಕೊಳ್ಳಬೇಡಿ. ಮಕ್ಕಳ ದೇಹಕ್ಕೆ ಈ ಕೆಳಗಿನ ಆಹಾರಗಳನ್ನು ನಿಯಮಿತವಾಗಿ ಕೊಡುತ್ತಿದ್ದೇವಾ ಎಂದು ಒಮ್ಮೆ ಯೋಚಿಸಿದರೆ (Parenting tips) ಸಾಕು, ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಲ್ಲೇ ಸಿದ್ಧ!
1. ಡೈರಿ ಉತ್ಪನ್ನಗಳು: ಹಾಲು, ಮೊಸರು, ಚೀಸ್ ಮತ್ತಿತರ ಡೈರಿ ಉತ್ಪನ್ನಗಳಲ್ಲಿ ಕ್ಯಾಲ್ಶಿಯಂ ಹೇರಳವಾಗಿರುವುದರಿಂದ ಮಕ್ಕಳಿಗೆ ಅತ್ಯಂತ ಅಗತ್ಯ. ಬೆಳೆಯುವ ವಯಸ್ಸಿನಲ್ಲಿ ಮಕ್ಕಳಿಗೆ ಕ್ಯಾಲ್ಶಿಯಂನ ಅಗತ್ಯ ಅತ್ಯಂತ ಹೆಚ್ಚಿರುವುದರಿಂದ ಅವರ ಎಲುಬು ಗಟ್ಟಿಯಾಗಿ, ಶಕ್ತಿಶಾಲಿಯಾಗಿ ಬೆಳವಣಿಗೆ ಹೊಂದಲು ಪೋಷಕಾಂಶಗಳು ಬೇಕೇಬೇಕು. ಹುಟ್ಟಿದ ಮಕ್ಕಳಿಂದ ಹಿಡಿದು ಹದಿಹರೆಯ ಮುಗಿಯುವವರೆಗೂ ಮೂಳೆಗಳ ಬೆಳವಣಿಗೆ ಬಹಳ ಪ್ರಮುಖವಾಗಿ ಆಗುವುದರಿಂದ ಇಂತಹ ಸಂದರ್ಭ ಕ್ಯಾಲ್ಶಿಯಂ ಮಕ್ಕಳಿಗೆ ಸಿಗುವುದು ಅತ್ಯಂತ ಅಗತ್ಯ ಕೂಡಾ.
2. ಮೊಟ್ಟೆ: ಮೊಟ್ಟೆಯಲ್ಲಿ ಅತ್ಯಂತ ಸಮೃದ್ಧವಾಗಿ ಪ್ರೊಟೀನ್, ಅಮೈನೋ ಆಸಿಡ್ ಇರುವುದರಿಂದ ಇವು ಮಕ್ಕಳ ಪ್ರತಿಯೊಂದು ಅಂಗಾಂಶದ ಬೆಳವಣಿಗೆಯಲ್ಲೂ ಮಹತ್ವದ ಪಾತ್ರ ವಹಿಸುತ್ತವೆ. ಅಂಗಾಂಶದ ಬೆಳವಣಿಗೆ, ರಿಪೇರಿ ಇತ್ಯಾದಿಗಳ ಕೆಲಸವೂ ಪ್ರೊಟೀನ್‌ನಿಂದಲೇ ಆಗುತ್ತದೆ. ಮಕ್ಕಳಿಗೆ ಪ್ರೊಟೀನ್ ಮೊಟ್ಟೆಯಿಂದ ಅತ್ಯಂತ ಹೆಚ್ಚು ಸಿಗುತ್ತದೆ. ಮೊಟ್ಟೆ ತಿನ್ನದ ಮಂದಿ ಮೊಟ್ಟೆಗೆ ಪರ್ಯಾಯ ಮೂಲಗಳನ್ನು ಹುಡುಕಿಕೊಳ್ಳಬೇಕು.
3. ಮಾಂಸ: ಚಿಕನ್, ಟರ್ಕಿ ಮತ್ತಿತರ ಮಾಂಸಗಳಿಂದಲೂ ಪ್ರೊಟೀನ್, ಝಿಂಕ್ ಮತ್ತಿತರ ಪೋಷಕಾಂಶಗಳು ಲಭ್ಯವಾಗುವುದರಿಂದ ಇದು ಎಲುಬಿನ ಬೆಳವಣಿಗೆಯಲ್ಲಿಯೂ ಸಹಾಯ ಮಾಡುತ್ತವೆ.
4. ಮೀನು: ಸಾಲ್ಮನ್, ಮಕೆರೆಲ್ ಮತ್ತಿತರ ಮೀನುಗಳಲ್ಲಿ ಒಮೆಗಾ ೩ ಫ್ಯಾಟಿ ಆಸಿಡ್‌ಗಳು ಹೇರಳವಾಗಿರುವುದರಿಂದ ಬೆಳವಣಿಗೆಗೆ ಪೂರಕವಾಗಿದೆ.
5. ದ್ವಿದಳ ಧಾನ್ಯಗಳು ಹಾಗೂ ಬೇಳೆಕಾಳುಗಳು: ದ್ವಿದಳ ಧಾನ್ಯಗಳಲ್ಲಿಯೂ, ಬೇಳೆ ಕಾಳುಗಳಲ್ಲಿಯೂ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿರುವ ಪ್ರೊಟೀನ್, ಕಬ್ಬಿಣಾಂಶ, ಝಿಂಕ್ ಕೂಡಾ ಇದೆ. ಇವು ಸಂಪೂರ್ಣ ಆರೋಗ್ಯಕ್ಕೆ ಅತ್ಯಂತ ಅವಶ್ಯಕ ಕೂಡಾ.
6. ಹಸಿರು ಸೊಪ್ಪು ತರಕಾರಿಗಳು: ಬಸಳೆ, ಪಾಲಕ್ ಸೇರಿದಂತೆ ಹಸಿರು ಸೊಪ್ಪು ತರಕಾರಿಗಳಲ್ಲಿ ಸಾಕಷ್ಟು ವಿಟಮಿನ್, ಖನಿಜಾಂಶ ಹಾಗೂ ಆಂಟಿ ಆಕ್ಸಿಡೆಂಟ್‌ಗಳೂ ಇರುವುದರಿಂದ ಮಕ್ಕಳ ಒಟ್ಟು ಆರೋಗ್ಯಕ್ಕೆ ಇದು ಪೂರಕವಾಗಿದೆ.
7. ಬೀಜಗಳು: ಬಾದಾಮಿ, ವಾಲ್‌ನಟ್, ಪಿಸ್ತಾ, ಕುಂಬಳಕಾಯಿ ಬೀಜ, ಸೌತೇಕಾಯಿ ಬೀಜ, ಚಿಯಾ ಬೀಜ, ಅಗಸೆ ಬೀಜ ಸೇರಿದಂತೆ ಎಲ್ಲ ಬಗೆಯ ಬೀಜಗಳಲ್ಲೂ ಮೆಗ್ನೀಶಿಯಂ ಸೇರಿದಂತೆ ಎಲ್ಲ ಬಗೆಯ ಪೋಷಕಾಂಶಗಳೂ ಇರುವುದರಿಂದ ಬೆಳವಣಿಗೆಗೆ ಇವು ಸಹಾಯ ಮಾಡುತ್ತವೆ.
8. ಹಣ್ಣುಗಳು: ಕಿತ್ತಳೆ, ಸ್ಟ್ರಾಬೆರ್ರಿ, ಕಿವಿ ಮತ್ತಿತರ ಹಣ್ಣುಗಳಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಮಕ್ಕಳಲ್ಲಿ ರೋಗನಿರೋಧಕತೆ ಹೆಚ್ಚಿಸಿ, ಆರೋಗ್ಯವಂತರನ್ನಾಗಿ ಮಾಡುವ ಮೂಲಕ ಬೆಳವಣಿಗೆಯನ್ನು ಪ್ರೇರೇಪಿಸುತ್ತದೆ.
ಇದನ್ನೂ ಓದಿ: Parenting Tips: ನಿಮ್ಮ ಮಕ್ಕಳು ಶಾಲೆಯಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗಬೇಕೇ? ಇಲ್ಲಿವೆ ನವಸೂತ್ರಗಳು!
ಆರೋಗ್ಯ
World Lung Day: ಶ್ವಾಸಕೋಶದ ಸಮಸ್ಯೆ ಉಂಟಾಗದಿರಲು ಹೀಗೆ ಮಾಡಿ
ದೇಹದ ಉಳಿದೆಲ್ಲ ಅಂಗಗಳಿಗೆ ಅನ್ವಯಿಸುವ ಬಹಳಷ್ಟು ನಿಯಮಗಳು ನಮ್ಮ ಪುಪ್ಪುಸಗಳಿಗೂ ಅನ್ವಯಿಸುತ್ತವೆ. ಸಮತೋಲಿತವಾದ ಆಹಾರ ಶ್ವಾಸಕೋಶಗಳ (World Lung Day) ದೀರ್ಘ ಬಾಳಿಕೆಗೆ ನಾಂದಿ ಹಾಡಬಲ್ಲದು. ಒತ್ತಡ ನಿವಾರಣೆಯ ಪ್ರಮುಖ ತಂತ್ರವಾದ ಪ್ರಾಣಾಯಾಮವು ಶ್ವಾಸಕೋಶಗಳಿಗೆ ಶಕ್ತಿ ತುಂಬಬಲ್ಲದು. ನಿಯಮಿತ ವ್ಯಾಯಾಮ ಬಹಳಷ್ಟು ಮಾಡಬಲ್ಲದು.
ಇವು ಜಟಿಲ ಪ್ರಶ್ನೆಗಳು- ಉಸಿರಾಡುವ ಗಾಳಿ ಇಷ್ಟೊಂದು ಕಲುಷಿತವಾಗಿರುವಾಗ ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಸೋಂಕುಗಳು ನೇರವಾಗಿ ಶ್ವಾಸಕೋಶಕ್ಕೇ ದಾಳಿ ಇಡುವಾಗ, ಅದನ್ನು ಜೋಪಾನ ಮಾಡುವುದು ಸಾಧ್ಯವೇ? ಪುಪ್ಪುಸಗಳ ಅನಾರೋಗ್ಯ ಎಂಬುದು ಅತ್ಯಂತ ಸಾಮಾನ್ಯ ವಿಷಯ ಎನಿಸಿರುವ ದಿನಗಳಲ್ಲಿ, ಅವುಗಳ ದೀರ್ಘ ಬಾಳಿಕೆಗೆ ಏನು ಮಾಡಬೇಕು? ಸೆಪ್ಟೆಂಬರ್ 25ನೇ ದಿನ ವಿಶ್ವ ಶ್ವಾಸಕೋಶ ದಿನವನ್ನಾಗಿ (World Lung Day) ಆಚರಿಸುತ್ತಿರುವುದು, ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಮಹತ್ವವನ್ನು ಹೆಚ್ಚಿಸಿಕೊಂಡಿದೆ.
ಗಾಳಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯುವಲ್ಲಿ ಸಮುದಾಯದ ಇಚ್ಛಾಶಕ್ತಿ ಬೇಕು. ಏಕಾಂಗಿಯಾಗಿ ಹೋರಾಡಿ ಯಶಸ್ಸು ಪಡೆದವರಿಲ್ಲವೆಂದಲ್ಲ; ಆದರೆ ಅದು ಎಲ್ಲರಿಗೂ ಸಾಧ್ಯವೇ ಎಂಬುದೂ ಯೋಚಿಸುವ ವಿಚಾರ. ಈ ವಿಷಯದ ಹೊರತಾಗಿ, ಇನ್ನೇನನ್ನಾದರೂ ವೈಯಕ್ತಿವಾಗಿ ನಾವು ಮಾಡಬಹುದೇ? ಖಂಡಿತ, ದೇಹದ ಉಳಿದೆಲ್ಲಾ ಅಂಗಗಳಿಗೆ ಅನ್ವಯಿಸುವ ಬಹಳಷ್ಟು ನಿಯಮಗಳು ನಮ್ಮ ಪುಪ್ಪುಸಗಳಿಗೂ ಅನ್ವಯಿಸುತ್ತವೆ. ಸಮತೋಲಿತವಾದ ಆಹಾರ ಶ್ವಾಸಕೋಶಗಳ (World Lung Day) ದೀರ್ಘ ಬಾಳಿಕೆಗೆ ನಾಂದಿ ಹಾಡಬಲ್ಲದು. ಒತ್ತಡ ನಿವಾರಣೆಯ ಪ್ರಮುಖ ತಂತ್ರವಾದ ಪ್ರಾಣಾಯಾಮವು ಶ್ವಾಸಕೋಶಗಳಿಗೆ ಶಕ್ತಿ ತುಂಬಬಲ್ಲದು. ನಿಯಮಿತ ವ್ಯಾಯಾಮ ಬಹಳಷ್ಟು ಮಾಡಬಲ್ಲದು. ಇವುಗಳನ್ನೇ ವಿವರವಾಗಿ ನೋಡುವುದಾದರೆ-
ಬಿಸಿಯಾದ, ತಾಜಾ ಆಹಾರ ಸೇವಿಸಿ
ಅಡುಗೆ ಮಾಡುವುದಕ್ಕೆ ಸಮಯವೇ ಇಲ್ಲ ಎಂಬ ನೆವ ಇಟ್ಟುಕೊಂಡು ಸಿಕ್ಕಿದಲ್ಲಿ, ಸಿಕ್ಕಿದ್ದನ್ನು ತಿಂದುಕೊಂಡು ಕಾಲ ಹಾಕುವುದು ಖಂಡಿತಕ್ಕೂ ಆರೋಗ್ಯದ ಮೇಲೆ ಬರೆ ಹಾಕುತ್ತದೆ. ಅದರಲ್ಲೂ ತಂಗಳು ತಿನ್ನುವುದು, ಫ್ರಿಜ್‌ನಲ್ಲಿರುವ ಅತಿಯಾದ ತಣ್ಣನೆಯ ಆಹಾರ, ಹಲ್ಲು ಜುಂಮ್ಮೆನ್ನುವಂಥ ಜ್ಯೂಸ್, ಸೋಡಾಗಳು ಶ್ವಾಸಕೋಶಗಳ ಉರಿಯೂತವನ್ನು ಹೆಚ್ಚಿಸುತ್ತವೆ. ಹಾಗಾಗಿ ಇಡೀ ಧಾನ್ಯಗಳನ್ನು ಮತ್ತು ಬಿಸಿಯಾದ ಆಹಾರಗಳನ್ನು ತಾಜಾ ಇರುವಾಗಲೇ ಸೇವಿಸುವುದು ಒಳ್ಳೆಯದು
ಸಾಂಬಾರ್ ಪದಾರ್ಥಗಳು
ಭಾರತೀಯ ಅಡುಗೆ ಮನೆಗಳಲ್ಲಿ ಬಳಕೆಯಾಗುವ ಬಹಳಷ್ಟು ಸಾಂಬಾರ್ ಪದಾರ್ಥಗಳು ರುಚಿಗೆ ಮಾತ್ರವೇ ಅಲ್ಲ, ಪಚನ ಕಾರ್ಯಕ್ಕೂ ಸೈ. ಅರಿಶಿನ, ಜೀರಿಗೆ, ಧನಿಯಾ, ಕಾಳು ಮೆಣಸು, ಶುಂಠಿ, ಚಕ್ಕೆ ಮುಂತಾದವು ಜೀರ್ಣಕ್ರಿಯೆಯನ್ನು ಚುರುಕು ಮಾಡುತ್ತವೆ. ಸರಿಯಾಗಿ ಜೀರ್ಣವಾಗದ ಆಹಾರಗಳು ಕಫಕ್ಕೂ ಕಾರಣವಾಗಬಹುದು. ಕೆಲವೊಮ್ಮೆ ಅಲರ್ಜಿಯಂಥ ಪ್ರತಿಕ್ರಿಯೆಗಳನ್ನೂ ದೇಹ ತೋರಿಸಬಹುದು. ಹಾಗಾಗಿ ಸಾಂಬಾರ ಪದಾರ್ಥಗಳನ್ನು ನಿಯಮಿತ ಮತ್ತು ಮಿತವಾಗಿ ಬಳಸಿ
ಹರ್ಬಲ್ ಚಹಾಗಳು ಅಥವಾ ಕಷಾಯಗಳು
ತುಳಸಿ, ಅತಿಮಧುರ, ಶುಂಠಿ, ನಿಂಬೆಹುಲ್ಲು, ಪುದೀನಾ ಮುಂತಾದ ಮೂಲಿಕೆಗಳ ಚಹಾ ಇಲ್ಲವೇ ಕಷಾಯಗಳು ಶ್ವಾಸಕೋಶಗಳ ಆರೋಗ್ಯಕ್ಕೆ ಹಿತಕಾರಿ. ಇವು ರೋಗ ನಿರೋಧಕ ಶಕ್ತಿಯನ್ನು ಚುರುಕು ಮಾಡುವುದೇ ಅಲ್ಲದೆ, ಗಂಟಲಿಗೆ ಆರಾಮ ನೀಡಿ, ಕಫ ಕರಗಿಸಲೂ ನೆರವು ನೀಡುತ್ತವೆ
ಆರೋಗ್ಯಕರ ಕೊಬ್ಬು
ಕೊಬ್ಬೆಲ್ಲ ಕೆಟ್ಟದ್ದು ಎಂದು ಭಾವಿಸಿದವರಿಗೆ ಇಲ್ಲೊಂದು ಕಿವಿ ಮಾತು- ಸಂಸ್ಕರಿತ ಕೊಬ್ಬುಗಳನ್ನು, ಕರಿದ ಆಹಾರಗಳನ್ನು ದೂರ ಇರಿಸಿದಷ್ಟೂ ಕ್ಷೇಮ. ಆದರೆ ಆರೋಗ್ಯಕರ ಕೊಬ್ಬುಗಳು ದೇಹಕ್ಕೆ ದೊರೆಯಲೇಬೇಕು. ತುಪ್ಪ, ಕೊಬ್ಬರಿ ಎಣ್ಣೆ, ಆಲಿವ್ ಎಣ್ಣೆ, ಅಗಸೆ ಎಣ್ಣೆ ಮುಂತಾದವು ಶರೀರಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಇದು ಶ್ವಾಸಕೋಶಗಳ ಸಾಮರ್ಥ್ಯ ಹೆಚ್ಚಳಕ್ಕೂ ಬೇಕಾದವು.
ಜೇನುತುಪ್ಪ
ಯಾವುದೇ ಸಂಸ್ಕರಣೆಗೆ ಒಳಗಾಗದ ನೈಸರ್ಗಿಕ ಜೇನುತುಪ್ಪ ಶ್ವಾಸಕೋಶ ಆರೋಗ್ಯಕ್ಕೆ ಬಹಳ ಒಳ್ಳೆಯದು. ಗಂಟಲಲ್ಲಿ ಕಿರಿಕಿರಿ, ನೆಗಡಿ, ಕೆಮ್ಮಿನಂಥ ಲಕ್ಷಣಗಳಿದ್ದರೆ, ಜೇನುತುಪ್ಪದೊಂದಿಗೆ ತುಳಸಿ ರಸ ಅಥವಾ ಶುಂಠಿ ರಸ ಮುಂತಾದ ಸರಳ ಮನೆಮದ್ದುಗಳು ಉಪಶಮನ ನೀಡುತ್ತವೆ.
ಸಂಸ್ಕರಿತ/ರಿಫೈನ್ಡ್ ಆಹಾರಗಳು ಬೇಡ
ಬಿಳಿ ಅಕ್ಕಿ, ರಿಫೈನ್ಡ್ ಎಣ್ಣೆ, ಬಿಳಿ ಬ್ರೆಡ್, ಬಿಳಿ ಪಾಸ್ತಾ, ಮೈದಾದಿಂದ ತಯಾರಾದ ಆಹಾರಗಳು- ಇಂಥವೆಲ್ಲವೂ ಸಂಸ್ಕರಿತ ಆಹಾರಗಳ ಪಟ್ಟಿಯಲ್ಲಿ ಬರುತ್ತವೆ. ಆಹಾರ ಸಂಸ್ಕಾರಗೊಂಡಷ್ಟೂ ದೇಹದಲ್ಲಿ ಉರಿಯೂತಕ್ಕೆ ಕಾರಣವಾಗುತ್ತವೆ. ಅದರಲ್ಲೂ ಶ್ವಾಸಕೋಶಗಳ ಉರಿಯೂತವೆಂದರೆ ಕೆಮ್ಮು, ಉಬ್ಬಸ, ಅಸ್ತಮಾದಂಥ ಲಕ್ಷಣಗಳು ಕಾಡತೊಡಗುತ್ತವೆ. ಹಾಗಾಗಿ ಉರಿಯೂತಕ್ಕೆ ಕಾರಣವಾಗುವ ಆಹಾರಗಳನ್ನು ದೂರ ಮಾಡಿ.
ನೀರು-ನಿದ್ದೆ ಬೇಕು
ದಿನಕ್ಕೆ ಎಂಟು ತಾಸುಗಳ ನಿದ್ದೆಯು ದೇಹದಲ್ಲಿ ಅಗತ್ಯ ದುರಸ್ತಿ ಕಾರ್ಯಗಳನ್ನು ಮಾಡಿಸಲು ನೆರವಾಗುತ್ತದೆ. ದಿನಕ್ಕೆಂಟು ಗ್ಲಾಸ್ ನೀರು ಕುಡಿಯುವುದು ದೇಹದ ಒಟ್ಟಾರೆ ಸ್ವಾಸ್ಥ್ಯಕ್ಕೆ ಅಗತ್ಯ.
ಇದನ್ನೂ ಓದಿ: Health Tips: ಶೀತ, ನೆಗಡಿಯಾದಾಗ ಈ ಎಲ್ಲ ಹಣ್ಣುಗಳಿಂದ ದೂರವಿರುವುದು ಒಳ್ಳೆಯದು!
-
ಪ್ರಮುಖ ಸುದ್ದಿ22 hours ago
Iraq Fire Accident: ಮದುವೆ ಮನೆಯಲ್ಲಿ ಅಗ್ನಿ ದುರಂತ; ಮದುಮಕ್ಕಳು ಸೇರಿ 114 ಜನರ ಸಾವು!
-
ಪ್ರಮುಖ ಸುದ್ದಿ12 hours ago
German Shepherd: ಸೀಕ್ರೆಟ್ ಸರ್ವಿಸ್ ಏಜೆಂಟ್ನಿಗೆ ಕಚ್ಚಿದ ಅಮೆರಿಕ ಅಧ್ಯಕ್ಷ ಬೈಡನ್ ಅವರ ‘ಕಮಾಂಡರ್’!
-
ವಿದೇಶ13 hours ago
Most expensive wedding: ಜಗತ್ತಿನ ದುಬಾರಿ ವಿವಾಹ ಯಾವುದು ಗೊತ್ತೆ? ಖರ್ಚಾಗಿದ್ದು ಇಷ್ಟು ಕೋಟಿ ರೂ.
-
ಸುವಚನ54 mins ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕ್ರೈಂ17 hours ago
ಲೈಂಗಿಕ ದೌರ್ಜನ್ಯ; ರಕ್ತಸಿಕ್ತ ಬಾಲಕಿ ಮನೆಮನೆಗೆ ತೆರಳಿ ಗೋಳಾಡಿದರೂ ಸಹಾಯ ಮಾಡದ ನಿರ್ದಯಿಗಳು!
-
ಕರ್ನಾಟಕ13 hours ago
Car Accident: ಮರಕ್ಕೆ ಕಾರು ಡಿಕ್ಕಿ ಹೊಡೆದು ಚಾಲಕ ಸಾವು
-
ದೇಶ14 hours ago
Venus Mission: ಇಸ್ರೋಗೆ ‘ಶುಕ್ರ’ದೆಸೆ; ಚಂದ್ರ, ಸೂರ್ಯನ ಬಳಿಕ ಶುಕ್ರನತ್ತ ಚಿತ್ತ; ಉಡಾವಣೆ ಯಾವಾಗ?
-
ಕ್ರಿಕೆಟ್12 hours ago
IND vs AUS: ಅಂತಿಮ ಪಂದ್ಯದಲ್ಲಿ ತಿರುಗಿ ಬಿದ್ದ ಆಸೀಸ್; ಭಾರತಕ್ಕೆ ಬೃಹತ್ ಮೊತ್ತದ ಗುರಿ