ಕಲಬುರಗಿ: ಕಲಬುರಗಿಯಲ್ಲಿ ಜೂನ್ 24ರಂದು ಹತ್ಯೆಗೀಡಾದ ದಯಾನಂದ ಶಿವಶರಣಪ್ಪ ಎಂಬ ಯುವಕನ ಹಂತಕರನ್ನು ಪೊಲೀಸರು ಬಂದಿಸಿದ್ದು, ಇಡೀ ಪ್ರಕರಣ ಅಕ್ರಮ ಸಂಬಂಧದ ಸುತ್ತ ಹೆಣೆದುಕೊಂಡಿದೆ ಎಂಬುದು ತಿಳಿದುಬಂದಿದೆ. ಫೇಸ್‌ಬುಕ್ ಸ್ನೇಹಿತನಿಂದ ಸುಪಾರಿ ಪಡೆದ ಮಹಿಳೆ ಮತ್ತೊಬ್ಬ ಫೇಸ್‌ಬುಕ್ ಸ್ನೇಹಿತನನ್ನು ಹತ್ಯೆ ಮಾಡಿದ್ದು, ನಿರ್ದೆಯೆಯಿಂದ ಕೊಲ್ಲುವುದನ್ನು ವಿಡಿಯೋ ಸಹಿತ ಮಾಡಿದ್ದಾಳೆ.
ಕಲಬುರಗಿಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದ ಸುಪಾರಿ ಹತ್ಯೆ (Supari Killing) ಪ್ರಕರಣದಲ್ಲಿ ಇದೀಗ ಹೆಚ್ಚಿನ ಮಾಹಿತಿ ಸಿಕ್ಕಿದೆ. ಈ ಪ್ರಕರಣವನ್ನು ಭೇದಿಸಿದ ಪೊಲೀಸರು ಕೊಲೆಯ ಹಿಂದಿನ ರೋಚಕ ಕಥೆಯನ್ನು ತೆರೆದಿಟ್ಟಿದ್ದಾರೆ.
ಕೊಲೆಯ ಹಿಂದಿರುವ ಕಥೆ!
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಶಕ್ರವಾಡಿ ಗ್ರಾಮದ ನಿವಾಸಿಗಳಾದ ಅನಿಲ್ ಹಾಗೂ ದಯಾನಂದ ಅಕ್ಕಪಕ್ಕದ ಮನೆಯವರು. ಅಷ್ಟೇ ಅಲ್ಲ, ಸಹೋದರ ಸಂಬಂಧಿಗಳೂ ಹೌದು. ದುಬೈನಲ್ಲಿ ಪೆಂಟಿಂಗ್ ಕೆಲಸ ಮಾಡಿಕೊಂಡಿದ್ದ ದಯಾನಂದ(26) ಕಳೆದ ನಾಲ್ಕು ತಿಂಗಳಿಂದ ಕುಟುಂಬಸ್ಥರೊಂದಿಗೆ ಶಕ್ರವಾಡಿಯಲ್ಲಿ ವಾಸವಾಗಿದ್ದ.
ಅನಿಲ್ ಸೇನೆಯಲ್ಲಿದ್ದಾನೆ. ಊರಿನಲ್ಲಿದ್ದ ತನ್ನ ಪತ್ನಿಯೊಡನೆ ದಯಾನಂದ ಅನೈತಿಕ ಸಂಬಂಧ ಹೊಂದಿದ್ದ ಎಂಬ ಶಂಕೆ ಸುನಿಲ್‌ಗೆ ಮೂಡಿತ್ತು. ದಯಾನಂದನ ಮೇಲೆ ಅತೀವ ಕೋಪ ಇತ್ತು. ದಯಾನಂದನೇ ತನ್ನ ಸಾಂಸಾರಿಕ ಜೀವನವನ್ನು ಹಾಳು ಮಾಡುತ್ತಿದ್ದಾನೆ ಎಂಬ ಸಿಟ್ಟಿನಿಂದ, ಆತನನ್ನು ಕೊಲೆ ಮಾಡಬೇಕೆಂಬ ತೀರ್ಮಾನಕ್ಕೆ ಬಂದಿದ್ದಾನೆ.
ಕೊಲೆಗೆ ಸುಪಾರಿ ಕೊಡಬೇಕು ಎಂದುಕೊಂಡು ಅನೇಕ ಕಡೆ ಪ್ರಯತ್ನ ಮಾಡಿದ್ದಾನೆ. ಆದರೆ, ಸುಪಾರಿಯನ್ನು ಒಪ್ಪಿಕೊಳ್ಳಲು ಯಾವ ರೌಡಿಗಳೂ ಮುಂದೆ ಬಂದಿಲ್ಲ. ಇದೇ ಸಮಯದಲ್ಲಿ ಫೇಸ್‌ಬುಕ್ ಮೂಲಕ ಅನಿಲ್‌ಗೆ ಅಂಬಿಕಾ ಎಂಬ ಮಹಿಳೆಯ ಪರಿಚಯವಾಗಿತ್ತು. ಅಂಬಿಕಾ ಬಳಿ ವಿಷಯವನ್ನು ಅನಿಲ್ ಹೇಳಿಕೊಂಡಿದ್ದ. ತಾನೇ ಕೊಲೆ ಮಾಡಿಸುತ್ತೇನೆ, ಅದೆಷ್ಟು ಹಣ ಕೊಡುತ್ತೀಯ ಎಂದು ಅಂಬಿಕ ಕೇಳಿದ್ದಳು. ಯಾರಾದರೇನು? ತನಗೆ ಕೆಲಸ ಆದರೆ ಆಯಿತು ಎಂದುಕೊಂಡ ಅನಿಲ್ ಸುಪಾರಿ ಕೊಡಲು ಒಪ್ಪಿಕೊಂಡ. ಕೂಡಲೇ ಸುಪಾರಿಯನ್ನು ಸ್ವೀಕರಿಸಿದ ಅಂಬಿಕಾ, ಕೆಲಸ ಮಾಡಿ ಮುಗಿಸಲು 3 ಲಕ್ಷ ರೂ. ಡೀಲ್ ಕುದುರಿಸಿಕೊಳ್ಳುತ್ತಾಳೆ.
ಕೊಲೆಗೆ ಮುನ್ನ ಫೇಸ್‌ಬುಕ್ ಗಾಳ
ದಯಾನಂದನನ್ನು ಹೇಗೆ ಕೊಲೆ ಮಾಡುವುದು ಎಂದು ಯೋಚಿಸುತ್ತಿದ್ದ ಅಂಬಿಕಾ ನೆರವಿಗೆ ಬಂದಿದ್ದು ಅದೇ ಫೇಸ್‌ಬುಕ್. ದಯಾನಂದನಿಗೆ ರಿಕ್ವೆಸ್ಟ್ ಕಳಿಸಿ ಫ್ರೆಂಡ್ ಮಾಡಿಕೊಂಡಳು. ದಯಾನಂದನ ಜತೆ ಚಾಟ್ ಮಾಡುತ್ತ, ಮಾಡುತ್ತ ಪ್ರೀತಿಯ ನಾಟಕ ಆಡಿದಳು. ಇಬ್ಬರೂ ಡೇಟ್ ಮಾಡೋಣ ಎಂದು ಒಂದು ದಿನ ವಾಜಪೇಯಿ ಬಡಾವಣೆಗೆ ಕರೆಸಿಕೊಂಡಳು. ದಯಾನಂದ ಕೂಡ ಇದನ್ನು ನಂಬಿ ಹೋಗಿದ್ದ. ಭೇಟಿಯಾದ ಬಳಿಕ ದಯಾನಂದನನ್ನು ಅಂಬಿಕಾ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಅದಾಗಲೇ ಕಾದುಕೊಂಡು ಕುಳಿತಿದ್ದ ಅಂಬಿಕಾ ಕಡೆಯ ನಾಲ್ವರು ದಯಾನಂದನಿಗೆ ಚಾಕುವಿನಿಂದ ಚುಚ್ಚಿದ್ದಾರೆ. ಕೆಲ ಹೊತ್ತು ತಪ್ಪಿಸಿಕೊಳ್ಳಲು ಯತ್ನಿಸಿ, ನಂತರ ಬಿಟ್ಟುಬಿಡುವಂತೆ ದಯಾನಂದ ಅಂಗಲಾಚಿದ್ದಾನೆ. ಆದರೂ ಬಿಡದ ಆಸಾಮಿಗಳು ಮನಬಂದಂತೆ ಇರಿದಿದ್ದಾರೆ. ವಿಪರೀತ ರಕ್ತಸ್ರಾವವಾಗಿ ದಯಾನಂದ ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ಸಾಕ್ಷಿಗಾಗಿ ವಿಡಿಯೋ
ಅನಿಲ್‌ಗೆ ಸಾಕ್ಷಿ ತೋರಿಸಿ ಸುಪಾರಿ ಹಣ ಪಡೆಯಬೇಕಿತ್ತು ಎಂಬ ಕಾರಣಕ್ಕೆ ಕೊಲೆ ನಡೆದ ಎಲ್ಲ ಸನ್ನಿವೇಶವನ್ನೂ ಅಂಬಿಕಾ ವಿಡಿಯೋ ಮಾಡಿದ್ದಾಳೆ. ಕ್ಯಾಮೆರಾ ಹೀಂದೆ ನಿಂತು ತನ್ನ ಕಡೆಯವರಿಗೆ ನಿರ್ದೇಶನ ನೀಡುತ್ತಿದ್ದಾಳೆ.
ಸಿಕ್ಕಿದ್ದು ಹೇಗೆ?
ನಿರ್ಜನ ಪ್ರದೇಶದಲ್ಲಿ ಸಿಕ್ಕ ಹೆಣವನ್ನು ಕಂಡ ಪೊಲೀಸರು ತಂಡವನ್ನು ರಚಿಸಿ ತನಿಖೆ ಆರಂಭಿಸಿದರು. ಸುತ್ತ ಮುತ್ತ ಇದ್ದ ಕುರುಹುಗಳನ್ನು ಆಧರಿಸಿ ತನಿಖೆ ನಡೆಸಿದಾಗ, ದಯಾನಂದನನ್ನು ಕೊಂದ ನಾಲ್ವರಲ್ಲಿ ಇಬ್ಬರು ಸಿಕ್ಕಿದ್ದಾರೆ. ಈ ಇಬ್ಬರ ಆಧಾರದಲ್ಲಿ ಮತ್ತೂ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಕೃಷ್ಣ, ಸುರೇಶ್ ಜಾಧವ್, ನೀಲಕಂಠ, ಸಂತೋಷ್ ಒಟ್ಟಿಗೆ ಅಂಬಿಕಾ ಕಡೆಗೆ ಬೆರಳು ತೋರಿಸಿದ್ದಾರೆ. ಕೊನೆಗೆ ಆಕೆಯನ್ನೂ ಬಂಧಿಸಿದ್ದಾರೆ.
ಅಂಬಿಕಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಾನು ಸುಪಾರಿ ಪಡೆದು ಐವರಿಗೆ ಸಬ್ ಕಾಂಟ್ರಾಕ್ಟ್ ಕೊಟ್ಟಿದ್ದನ್ನು ಅಂಬಿಕಾ ಬಾಯಿಬಿಟ್ಟಿದ್ದಾಳೆ. ಅವಳ ಫೋನ್ ತೆಗೆದುಕೊಂಡು ನೋಡಿದ ಪೊಲೀಸರಿಗೆ ಅನಿಲ್ ಜತೆಗಿನ ಸಂಪರ್ಕ ತಿಳಿದುಬಂದಿದೆ. ಹಾಗೆಯೇ, ಕೊಲೆ ಮಾಡುವ ವಿಡಿಯೋ ಸಹ ಸಿಕ್ಕಿದೆ. ಅನಿಲ್ ಒಬ್ಬನೇ ಅಲ್ಲ, ಆತನ ಸಹೋದರನ ಪಾತ್ರವೂ ಇದರಲ್ಲಿ ಎನ್ನುವುದು ಪೊಲೀಸರಿಗೆ ತಿಳಿದುಬಂದಿದೆ. ಅನಿಲ್ ಹಾಗೂ ಮಂಜುನಾಥ್‌ನನ್ನು ಬಂಧಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಕಲಬುರಗಿ ಡಿಸಿಪಿ ಅಡ್ಡೂರು ಶ್ರೀನಿವಾಸಲು, ವಾಜಪೇಯಿ ಬಡಾವಣೆಯಲ್ಲಿ ನಡೆದ ದಯಾನಂದ್ ಕೊಲೆ ಪ್ರಕರಣ ಸಂಬಂಧ ಐವರನ್ನು ಬಂಧಿಸಿದ್ದೆವು. ನಂತರ ಮತ್ತಿಬ್ಬರನ್ನು ಬಂಧಿಸಿದ್ದೇವೆ. ಅನಿಲ್ ಹಾಗೂ ಮಂಜುನಾಥ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅನಿಲ್ ಹಾಗೂ ದಯಾನಂದ ಅಕ್ಕಪಕ್ಕದ ಮನೆಯವರು. ಬೇರೆಬೇರೆ ವಿಚಾರದಲ್ಲಿ ಇಬ್ಬರ ನಡುವೆ ವೈಮನಸ್ಯ ಇತ್ತು. ಅನಿಲ್ ಮತ್ತು ಮಂಜುನಾಥ್ ಇಬ್ಬರೂ ಸೇರಿ ಅಂಬಿಕಾ ಮೂಲಕ ಕೊಲೆ ಮಾಡಲು ಯೋಜನೆ ಮಾಡಿದ್ದಾರೆ. ಪ್ರಕರಣದಲ್ಲಿ ಇನ್ನಷ್ಟು ವಿಚಾರಗಳನ್ನು ಹೊರತೆಗೆಯುವ ಪ್ರಯತ್ನ ನಡೆದಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕಲಬುರಗಿ ಬಸ್-ಟೆಂಪೊ ಅಪಘಾತ: ಮೃತರ ಸಂಖ್ಯೆ ಏಳಕ್ಕೆ ಏರಿಕೆ