Site icon Vistara News

Dasara 2022 | ಈ ಬಾರಿ ಅದ್ಧೂರಿ ದಸರಾ ಸಾಧ್ಯತೆ, ಉದ್ಘಾಟಕರ ಹೆಸರು ಇಂದೇ ಫೈನಲ್‌?

Dasara 2022

ಬೆಂಗಳೂರು: ನಾಡಹಬ್ಬ ಮೈಸೂರು ದಸರಾ (Dasara 2022) ಆಚರಣೆ ಸಂಬಂಧಿಸಿ ಮಂಗಳವಾರ(ಜುಲೈ 19) ಸಿಎಂ ಬಸವರಾಜ ಬೊಮ್ಮಾಯಿ‌ ನೇತೃತ್ವದಲ್ಲಿ ಮೈಸೂರು ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ವಿಧಾನಸೌಧಯಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಬಾರಿ ಅದ್ಧೂರಿಯಿಂದ ನಾಡಹಬ್ಬ ಅಚರಿಸಲು ಸರ್ಕಾರ ಉದ್ದೇಶಿಸಿದೆ ಎನ್ನಲಾಗಿದ್ದು, ದಸರಾ ಉದ್ಘಾಟಕರ ಹೆಸರನ್ನು ಅಂತಿಮಗೊಳಿಸುವ ಕುರಿತೂ ಚರ್ಚೆ ನಡೆಯಲಿದೆ.

ರಾಜ್ಯದ ನಾಡಹಬ್ಬ ಸಮೀಪಿಸುತ್ತಿದ್ದು, ಈಗಿನಿಂದಲೇ ಸಿದ್ಧತೆ ನಡೆಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ 4 ಗಂಟೆಗೆ ಈ ಸಭೆ ನಡೆಯಲಿದೆ.

2020 ಹಾಗೂ 2021ರಲ್ಲಿ ಸಾಂಕ್ರಾಮಿಕ ಕಾಯಿಲೆ ಕೋವಿಡ್ ಪ್ರಕರಣಗಳಿದ್ದ ಕಾರಣದಿಂದ ದಸರಾ ಹಬ್ಬವನ್ನು ವೈಭವದಿಂದ ಆಚರಿಸಿರಲಿಲ್ಲ. ಕಳೆದೆರಡು ವರ್ಷಗಳಿಂದ ದಸರಾ ಹಬ್ಬದ ವೈಭವವನ್ನು ಕಾಣದ ಜನರು ಈ ಬಾರಿ ಕಾತರದಿಂದ ಕಾಯುತ್ತಿದ್ದಾರೆ. ಆದರೆ, ತಜ್ಞರು ಕೊರೊನಾ ನಾಲ್ಕನೇ ಅಲೆಯ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದು ಮುಂಜಾಗ್ರತೆ ವಹಿಸುವಂತೆ ಎಚ್ಚರಿಸಿರುವುದಾಗಿ ತಿಳಿದುಬಂದಿದೆ. ಹೀಗಾಗಿ ಈ ಬಾರಿ ದಸರಾ ಹಬ್ಬವು ವಿಜೃಂಭಣೆಯಿಂದ ನಡೆಯಲಿದೆಯೇ? ಅದ್ಧೂರಿಯಾಗಿ ಆಚರಿಸುವುದಾದರೆ ಇದರ ರೂಪುರೇಷೆ ಹೇಗಿರಬೇಕು ಎನ್ನುವುದೂ ಸೇರಿದಂತೆ ಎಲ್ಲ ಸಾಧಕ-ಬಾಧಕಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎನ್ನಲಾಗಿದೆ.

ಸಭೆಯಲ್ಲಿ ಯಾರೆಲ್ಲ ಉಪಸ್ಥಿತರಿರುತ್ತಾರೆ?

ಈ ಬಾರಿಯ ದಸರಾ ಹಬ್ಬದ ಉದ್ಘಾಟನಾ ಕಾರ್ಯಕ್ರಮದ ಸ್ವರೂಪ ಹೇಗಿರಬೇಕು? ಯಾರಿಂದ ಉದ್ಘಾಟಿಸಬೇಕು ಎಂಬುದು ಈ ಸಭೆಯಲ್ಲಿ ನಿರ್ಣಯವಾಗುವ ನಿರೀಕ್ಷೆಯೂ ಇದೆ. ಈ ಮಹತ್ವದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಮೈಸೂರಿನ‌ ಶಾಸಕರು, ಜನಪ್ರತಿನಿಧಿಗಳು ಹಾಗೂ ಮೈಸೂರು ಜಿಲ್ಲಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ಸಂಸತ್‌ ಅಧಿವೇಶನ ಇರುವುದರಿಂದ ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಈ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇಲ್ಲ ಎಂದು ತಿಳಿದುಬಂದಿದೆ.

ಅದ್ಧೂರಿ ಆಚರಣೆಗೆ ಕಾದಿರುವ ಜನತೆ:

ಕಳೆದೆರಡು ವರ್ಷ ಸರಳ ದಸರಾದಿಂದ ನಾಡಹಬ್ಬದ ಸೊಬಗು ಕ್ಷೀಣಿಸಿತ್ತು. ಈಗ ಕರೊನಾ ಅಬ್ಬರ ಕಡಿಮೆಯಾಗಿದೆ. ಉತ್ತಮವಾಗಿ ಮಳೆಯಾಗಿದ್ದು, ನಾಡಿನ ಜಲಾಶಯಗಳು ಭರ್ತಿಯಾಗಿವೆ. ಜತೆಗೆ ಸಾರ್ವತ್ರಿಕ ಚುನಾವಣೆಯೂ ಹತ್ತಿರವಾಗುತ್ತಿದೆ. ಈ ಎಲ್ಲ ಕಾರಣಗಳನ್ನೂ ಗಮನದಲ್ಲಿಟ್ಟುಕೊಂಡು ರಾಜ್ಯದ ಜನತೆ ಅದ್ಧೂರಿ ದಸರಾ ಆಚರಿಸಲು ಉತ್ಸುಕರಾಗಿದ್ದಾರೆ.

ಈಗಾಗಲೇ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ಆಯ್ಕೆ ಪ್ರಕ್ರಿಯೆ ಪೂರೈಸಿರುವ ಅರಣ್ಯ ಇಲಾಖೆ 20 ಆನೆಗಳ ಪಟ್ಟಿ ಸಿದ್ಧಪಡಿಸಿದ್ದು, 14-15 ಆನೆಗಳನ್ನು ಕಾಡಿನಿಂದ ನಾಡಿಗೆ ಕರೆತರಲು ಚಿಂತನೆ ನಡೆಸಿದೆ. ಕಳೆದೆರಡು ಬಾರಿ ಅಂಬಾರಿ ಹೊತ್ತಿರುವ ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಈ ಬಾರಿಯೂ ಅಂಬಾರಿ ಗಜಪಡೆಯ ನಾಯಕತ್ವ ವಹಿಸುವ ಸಾಧ್ಯತೆ ಇದೆ.

ಇದನ್ನೂ ಓದಿ | Dasara 2022 | ಈ ಬಾರಿ ಅದ್ದೂರಿಯಾಗಿ ನಡೆಯಲಿದೆ ವಿಶ್ವ ವಿಖ್ಯಾತ ಮೈಸೂರು ದಸರಾ

Exit mobile version