ಕಾರವಾರ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಹೆಂಡತಿ ಹಾಗೂ ಹೆತ್ತ ಮಗನನನ್ನು ಕೊಂದು ತಾನೂ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಪ್ರಕರಣ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಂಗಣೆ ಗ್ರಾಮದಲ್ಲಿ ನಡೆದಿದೆ. ತಾಕಿ ಮರಾಠಿ (35) ಹಾಗೂ ಲಕ್ಷ್ಮಣ ಮರಾಠಿ (12) ಕೊಲೆಯಾದ ದುರ್ದೈವಿಗಳಾಗಿದ್ದಾರೆ. ರಾಮ ಮರಾಠಿ ಇವರನ್ನು ಕೊಂದು ನೇಣಿಗೆ ಶರಣಾಗಿದ್ದಾನೆ.
ಗುರುವಾರ (ಜು.7) ರಾತ್ರಿ ಕುಡಿದ ಮತ್ತಿನಲ್ಲಿ ಮನೆಗೆ ಬಂದಿದ್ದ ರಾಮ ಮರಾಠಿಯು ಮಲಗಿದ್ದ ಹೆಂಡತಿ ಮೇಲೆ ಏಕಾಏಕಿ ಮಚ್ಚು ಬೀಸಿದ್ದಾನೆ. ಹೀಗಾಗಿ ತಾಕಿ ಅಲ್ಲೇ ಮೃತಪಟ್ಟಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಇಬ್ಬರು ಮಕ್ಕಳು ಸಹ ಹೆತ್ತ ತಂದೆಯೇ ತಾಯಿಯನ್ನು ಕೊಲೆ ಮಾಡಿದ ದೃಶ್ಯವನ್ನು ನೋಡಿದ್ದಾರೆ. ಇದನ್ನು ಕಂಡ ರಾಮ ಮರಾಠಿ ಒಬ್ಬ ಮಗನನ್ನು ಅಟ್ಟಾಡಿಸಿಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಇದನ್ನು ಕಂಡು ಹೆದರಿದ ಮತ್ತೊಬ್ಬ ಮಗ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ.
ಮಗನನ್ನು ಕೊಂದ ಬಳಿಕ ಮನೆಗೆ ಬಂದ ರಾಮ ಮರಾಠಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಮಟಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ| ಹರ್ಷ ಕೊಲೆ | ಆರೋಪಿಗಳಿಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ, ಸಹೋದರಿ ಹೇಳಿದ್ದೇನು?