Site icon Vistara News

ಕೋಟಿ ಕಂಠ ಗಾಯನ | ಒಂದೂವರೆ ಕೋಟಿ ಜನರ ಗಾಯನ, ಗಿನ್ನೆಸ್‌ ದಾಖಲೆಯ ಪ್ರಯತ್ನ

koti kantha gayana 2

ಬೆಂಗಳೂರು: ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಕೋಟಿ ಕಂಠ ಗಾಯನ” ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ೧.೫೦ ಕೋಟಿ ಜನರು ಕನ್ನಡದ ಹಾಡಿಗೆ ಧ್ವನಿಯಾಗಿದ್ದಾರೆ. ಇದೇ ವೇಳೆ, ಕಾರ್ಯಕ್ರಮ ಗಿನ್ನೆಸ್‌ ದಾಖಲೆಯಾಗುವ ಸಾಧ್ಯತೆಯಿದೆ.

೫೦ ದೇಶ, ೨೯ ರಾಜ್ಯಗಳು ಸೇರಿದಂತೆ ವಿಶ್ವದ ಉದ್ದಗಲದಿಂದ ಸ್ಪಂದನೆ ವ್ಯಕ್ತವಾಗಿದ್ದು ಕಂಠೀರವ ಸ್ಟೇಡಿಯಂನಲ್ಲಿ ಸುಮಾರು ೫೦ ಸಾವಿರ ನಾಗರಿಕರು, ವಿದ್ಯಾರ್ಥಿಗಳು, ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವ ಸುನಿಲ್ ಕುಮಾರ್, ಆರ್.ಅಶೋಕ, ಕೇಂದ್ರದ ಮಾಜಿ ಸಚಿವ ಸದಾನಂದ ಗೌಡ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕನ್ನಡ ನಾಡು, ಶ್ರೇಷ್ಠವಾಗಿರುವ ನಾಡು. ನಿಸರ್ಗದತ್ತ ಸಂಪತ್ತು, 10 ಪರಿಸರ ವಲಯಗಳನ್ನು ಹೊಂದಿರುವ ಅತ್ಯಂತ ಪ್ರಗತಿಪರ ರಾಜ್ಯಗಳಲ್ಲಿ ಒಂದಾಗಿದೆ. ಕರ್ನಾಟಕವನ್ನು ಇನ್ನಷ್ಟು ಶಕ್ತಿಶಾಲಿಯನ್ನಾಗಿಸಿ, ಕನ್ನಡಿಗರಿಗೆ ಆರ್ಥಿಕ, ಸಾಮಾಜಿಕ ಭದ್ರತೆಯನ್ನು ನೀಡಿ ನಂಬರ್‌ 1 ರಾಜ್ಯವನ್ನಾಗಿಸುವ ಛಲ ತೊಟ್ಟಿದ್ದೇವೆ ಎಂದರು.

ನೆಲ, ಜಲ, ಆಕಾಶದಲ್ಲೂ ಗೀತ ಗಾಯನ ನಡೆದಿದ್ದು, ಬೆಂಗಳೂರಿನಿಂದ ಗ್ವಾಲಿಯರ್‌ಗೆ ತೆರಳುವ ಸ್ಪೈಸ್ ಜೆಟ್ ವಿಮಾನದಲ್ಲಿ, ಮಲ್ಪೆ ಬೀಚ್, ಕೇಂದ್ರ ಕಾರಾಗೃಹಗಳು, ಮೈಸೂರು ಅರಮನೆ ಮುಂಭಾಗ ಸೇರಿದಂತೆ ಹತ್ತು ಸಾವಿರ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು. ೩೦ ಸಾವಿರಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಭಾಗಿಯಾಗಿದ್ದವು.

ಈ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ “ಜಯ ಭಾರತ ಜನನಿಯ ತನುಜಾತೆ” , ಹುಯಿಲಗೊಳ ನಾರಾಯಣರಾವ್ ವಿರಚಿತ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು,  ಡಾ.ಚನ್ನವೀರ ಕಣವಿ ಅವರ “ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ “, ಕುವೆಂಪು ಅವರ “ಬಾರಿಸು ಕನ್ನಡ ಡಿಂಡಿಮವಾ “ಡಾ. ಡಿ.ಎಸ್. ಕರ್ಕಿಯವರ “ಹಚ್ಚೇವು ಕನ್ನಡದ ದೀಪ “ ಹಾಗೂ ಡಾ. ಹಂಸಲೇಖ ಅವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು “ ಎಂಬ ಆರು ಗೀತೆಗಳನ್ನು ಕೋಟಿ ಕಂಠಗಳಲ್ಲಿ ಹಾಡಲಾಗಿತ್ತು. ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಭಾಗವಹಿಸಿದ್ದರು.

ಬಾರದ ಚಿತ್ರರಂಗ
ಇಷ್ಟೆಲ್ಲ ಅದ್ದೂರಿಯಾಗಿ ರಾಜ್ಯಾದ್ಯಂತ ಕಾರ್ಯಕ್ರಮ ನಡೆದರೂ ಕನ್ನಡ ಚಲನಚಿತ್ರ ರಂಗ ಮಾತ್ರ ಇಂದೂ ಭಾಗಿಯಾಗಿರಲಿಲ್ಲ. ಈ ಬಗ್ಗೆ ಸರ್ಕಾರದಿಂದ ವ್ಯಾಪಕ ಬೇಸರ ವ್ಯಕ್ತವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌, ಕನ್ನಡದ ಈ ಗೀತ ಗಾಯನಕ್ಕೆ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ. ಒಂದುವರೆ ಕೋಟಿ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿದಿದ್ದಾರೆ. ಕೋಟಿ ಕಂಠ ಗಾಯನದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಧನ್ಯವಾದ ಸಮರ್ಪಿಸುತ್ತೇನೆ ಎಂದಿದ್ದಾರೆ.

ಗಿನ್ನಿಸ್ ದಾಖಲೆಯತ್ತ ಗಾಯನ
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕೋಟಿ ಕಂಠ ಗಾಯನ ಕಾರ್ಯಕ್ರಮ ಗಿನ್ನೆಸ್ ದಾಖಲೆಯತ್ತ ಸಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಗಿನ್ನಿಸ್ ಪ್ರಶಸ್ತಿ ಸಮಿತಿಯ ಸದಸ್ಯರು ಕಾರ್ಯಕ್ರಮಕ್ಕೆ ಆಗಮಿಸಿ ವೀಕ್ಷಣೆ ನಡೆಸಿದರು.

ಇದನ್ನೂ ಓದಿ | ಬಿಜೆಪಿಯ OBC ನಾಯಕನಾಗಿ ವಿ. ಸುನಿಲ್‌ ಕುಮಾರ್‌: ಕಲಬುರ್ಗಿ ಸಮಾವೇಶದಿಂದ ಪ್ರಯತ್ನ ಆರಂಭ

Exit mobile version