Site icon Vistara News

Acid Attack | ಯುವತಿ ಆರೋಗ್ಯದಲ್ಲಿ ಚೇತರಿಕೆ; ಇನ್ನೂ ಪತ್ತೆಯಾಗದ ಆರೋಪಿ

acid attack

ಬೆಂಗಳೂರು: ಸುಂಕದಕಟ್ಟೆ ಕಾಮಾಕ್ಷಿ ಪಾಳ್ಯದಲ್ಲಿ ಯುವತಿಯ ಮೇಲೆ ಆ್ಯಸಿಡ್‌ ದಾಳಿ ನಡೆದು ಹದಿನಾರು ದಿನ ಕಳೆದರೂ ಆರೋಪಿ ನಾಗೇಶ್‌ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಸುಮಾರು 40ಕ್ಕೂ ಹೆಚ್ಚು ಪೊಲೀಸರು ಆತನ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ನಡುವೆ, ದಾಳಿಗೊಳಗಾದ ಯುವತಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಕೆ ಕಾಣುತ್ತಿದ್ದಾಳೆ.

ಆರೋಪಿ ಇನ್ನೂ ಸಿಕ್ಕಿಲ್ಲ. ಆದರೂ, ಆತನ ಮೇಲಿನ ಆರೋಪ ಸಾಬೀತಾದರೆ ಯಾವ ಶಿಕ್ಷೆ ವಿಧಿಸಲು ಅವಕಾಶವಿದೆ ಎಂಬ ಬಗ್ಗೆ ಪೊಲೀಸರಲ್ಲಿ ಚರ್ಚೆ ಆರಂಭಗೊಂಡಿದೆ. ಪೊಲೀಸರು ಎಫ್‌ಐಆರ್‌ನಲ್ಲಿ ಸೆಕ್ಷನ್‌ 307 ದಾಖಲಿಸಿಕೊಂಡಿದ್ದರು. 307 ಸೆಕ್ಷನ್‌ ಹಾಕಿದ್ದರಿಂದ ಆರೋಪಿಗೆ ಜಾಮೀನು ಸಿಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿತ್ತು. ಆರೋಪಿಯು ತನಗೆ ಯುವತಿಯನ್ನು ಕೊಲೆ ಮಾಡೋ ಉದ್ದೇಶವಿರಲಿಲ್ಲ ಮತ್ತು ಕೊಲೆ ಯತ್ನವನ್ನೂ ಮಾಡಿಲ್ಲ. ಆಕೆಯ ಸೌಂದರ್ಯ ಹಾಳು ಮಾಡೋ ಉದ್ದೇಶದಿಂದ ಆ್ಯಸಿಡ್ ದಾಳಿ ನಡೆಸಿದ್ದೆ ಎಂದು ಹೇಳಿದರೆ ಅದು ಗಂಭೀರ ಪ್ರಕರಣವೆಂದು ದಾಖಲಾಗದಿರುವ ಸಾಧ್ಯತೆ ಇದೆ. ಹೀಗಾಗಿ ಮತ್ತಷ್ಟು ಕಠಿಣ ಸೆಕ್ಷನ್‌ ಅಡಿಯಲ್ಲಿ ಆರೋಪ ಹೊರಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಇತ್ತ ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಯ ಆರೋಗ್ಯದಲ್ಲಿ ಚೇತರಿಕೆ ಆಗುತ್ತಿದೆ. ಐಸಿಯುನಿಂದ ಸಾಮಾನ್ಯ ವಾರ್ಡ್‌ಗೆ ಯುವತಿಯನ್ನು ಸ್ಥಳಾಂತರ ಮಾಡಿದ್ದಾರೆ. ಕಳೆದ 15 ದಿನಗಳಿಂದ ಐಸಿಯುನಲ್ಲಿ ಯುವತಿ ಚಿಕಿತ್ಸೆ ಪಡೆಯುತ್ತಿದ್ದಳು. ಯುವತಿಗೆ ಸೋಂಕು ಆಗದಂತೆ ವೈದ್ಯರ ತಂಡ ನಿಗಾ ಕೂಡ ವಹಿಸಿತ್ತು. ಡ್ರೈ ಫ್ರೂಟ್ಸ್ ಪುಡಿ ಮಾಡಿ ಮೃದು ಆಹಾರದ ಜತೆ ಬೆರೆಸಿ ತಿನ್ನಿಸುವಂತೆ ವೈದ್ಯರು ಸಲಹೆ ನೀಡಿದ್ದರು. ಇನ್ನು 10% ಮಾತ್ರ ಸ್ಕಿನ್ ಪ್ಲಾಂಟೇಷನ್ ಸರ್ಜರಿ ಬಾಕಿ ಇದ್ದು, ಸ್ವಲ್ಪ ಚೇತರಿಸಿಕೊಂಡ ಬಳಿಕ ಉಳಿದ ಸರ್ಜರಿ ಮಾಡಲಿರುವುದಾಗಿ ವೈದ್ಯರು ಹೇಳಿದ್ದಾರೆ. ಯುವತಿಯ ಆರೋಗ್ಯ ಚೇತರಿಕೆ ಕಂಡುಬಂದಿರುವುದಕ್ಕೆ ಕುಟುಂಬ ತುಸು ನೆಮ್ಮದಿ ಕಂಡಿದೆ.

ಇದನ್ನೂ ಓದಿ | ಆ್ಯಸಿಡ್‌ ದಾಳಿಗೆ ತುತ್ತಾದ ಯುವತಿಗೆ ಇಂದು ಮೊದಲ ಶಸ್ತ್ರ ಚಿಕಿತ್ಸೆ

ಘಟನೆಯ ಹಿನ್ನೆಲೆ :

ಏಪ್ರಿಲ್‌ 28ರ ಗುರುವಾರ ಬೆಳಗ್ಗೆ 8-30ರ ವೇಳೆಯಲ್ಲಿ ಯುವತಿಯನ್ನು ಆಕೆಯ ತಂದೆ, ಸುಂಕದಕಟ್ಟೆಯ ಮುತ್ತೂಟ್ ಮಿನಿ‌ ಫೈನಾನ್ಸ್ ಕಚೇರಿಗೆ ಡ್ರಾಪ್ ಮಾಡಿದರು. ಮೊದಲನೇ ಮಹಡಿಯಲ್ಲಿದ್ದ ಕಚೇರಿಗೆ ಮೆಟ್ಟಿಲು ಹತ್ತಿಕೊಂಡು ಹೋಗಬೇಕಿತ್ತು. ಕಚೇರಿಗೆ ಇನ್ನೂ ಯಾರೂ ಬಾರದೆ ಇದ್ದದ್ದರಿಂದ ಕಚೇರಿ ಬಾಗಿಲ ಹತ್ತಿರ ನಿಂತುಕೊಂಡಿದ್ದರು. ಈ ಸಮಯದಲ್ಲಿ ಆರೋಪಿ ನಾಗೇಶ್‌ ಹತ್ತಿರಕ್ಕೆ ಬಂದಿದ್ದಾನೆ. ಒಂದು ಕೈ ಕವರ್‌ನಲ್ಲಿ ಏನನ್ನೋ ಹಿಡಿದಿರುವುದಾಗಿ ಗಮನಿಸಿದ ಯುವತಿ ಕೆಳಗೆ ಓಡಲು ಪ್ರಯತ್ನಿಸಿದ ಕೂಡಲೆ ನಾಗೇಶ ಹಿಂಬಾಲಿಸಿಕೊಂಡು ಬಂದು ಆಸಿಡ್ ಅನ್ನು ಯುವತಿಯ ಮೈ ಮೇಲೆ ಹಾಕಿ ಓಡಿ ಹೋಗಿದ್ದ.ಎದೆ, ಕೈಗಳು , ಹಾಗು ಬೆನ್ನಿಗೆ ಆ್ಯಸಿಡ್‌ ಬಿದ್ದು ಗಾಯಗಳಾಗಿದ್ದು, ಯುವತಿ ಕೂಡಲೆ ತಂದೆಗೆ ಕರೆ ಮಾಡಿ ಸ್ಥಳಕ್ಕೆ ಬರಲು ತಿಳಿಸಿದ್ದಳು. ನಂತರ ಆ್ಯಂಬುಲೆನ್ಸ್‌ ಮೂಲಕ ಯುವತಿಯನ್ನು ಮೊದಲಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ, ನಂತರ ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಯಿತು.ನಾಗೇಶ ಸುಮಾರು ಏಳು ವರ್ಷಗಳ ಹಿಂದೆ ಯುವತಿಯ ದೊಡ್ಡಮ್ಮನ ಮನೆಯಲ್ಲಿ ಬಾಡಿಗೆಗೆ ಇದ್ದ. ತನ್ನನ್ನು ಪ್ರೀತಿ ಮಾಡುವಂತೆ ಹಿಂಸೆ ಮಾಡುತ್ತಿದ್ದ. ಪ್ರೀತಿ ಮಾಡುವುದಿಲ್ಲ ಎಂದು ತಿಳಿಸಿದಾಗ ಸುಮ್ಮನಾಗಿದ್ದ. ಆದರೆ ಮತ್ತೆ ಒಂದು ವಾರದಿಂದ ಹಿಂಬಾಲಿಸಿಕೊಂಡು ಬಂದು, ಪ್ರೀತಿ ಮಾಡುವಂತೆ ಬಲವಂತ ಮಾಡುತ್ತಿದ್ದ. ಇದಕ್ಕೂ ಒಪ್ಪದಿದ್ದಾಗ ಆ್ಯಸಿಡ್‌ ದಾಳಿ ಮಾಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ |ಯುವತಿ ಆ್ಯಸಿಡ್‌ ಪ್ರಕರಣ : ನಾಗೇಶನ ಮೇಲೆ ಅವನ ಕುಟುಂಬದವರ ಹಿಡಿ ಶಾಪ

Exit mobile version