Site icon Vistara News

ಕಾಂಗ್ರೆಸ್‌ಗೆ ಎರಡು ಸಂಕಷ್ಟ: 40% ಪೋಸ್ಟರ್‌ನಲ್ಲಿ ಸಿನಿಮಾ ನಟನ ಫೋಟೊ, ಸಿಎಂ ಕಡೆಯಿಂದ ಲಿಂಗಾಯತ ಕಾರ್ಡ್‌

congress poster

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಅಭಿಯಾನ ನಡೆಸುತ್ತಿರುವ ಕಾಂಗ್ರೆಸ್‌ಗೆ ಇದೀಗ ಎರಡು ಕಡೆಯಿಂದ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಸ್ವತಃ ಸಿಎಂ ಬೊಮ್ಮಾಯಿ ಅವರ ವಿರುದ್ಧ ಅಭಿಯಾನ ನಡೆಸುತ್ತಿರುವ ಕಾಂಗ್ರೆಸ್‌ಗೆ ಜಾತಿ ಕಾರ್ಡ್‌ ಉರುಳಾಗುವ ಸಾಧ್ಯತೆಯಿದ್ದು, ಇನ್ನೊಂದೆಡೆ ಸಿನಿಮಾ ನಟನ ಚಿತ್ರವನ್ನು ಅನುಮತಿಯಿಲ್ಲದೆ ಬಳಸಿದ್ದಕ್ಕೆ ಕಾನೂನು ಕ್ರಮ ಎದುರಿಸುವ ಹಂತದಲ್ಲಿದೆ.

40% ಸರ್ಕಾರ ಎಂದು ಕಾಂಗ್ರೆಸ್‌ನಿಂದ ಎಲ್ಲ ಕಡೆ ಪೋಸ್ಟರ್‌ ಅಭಿಯಾನ ನಡೆಸಲಾಗುತ್ತಿದೆ. ಇದರಲ್ಲಿ 40% ಸರ್ಕಾರ ಹಾಗೂ ಪೇ ಸಿಎಂ ಪೋಸ್ಟರ್‌ಗಳ ಬಳಕೆ ಹೆಚ್ಚಾಗಿದೆ. ಈ ಪೋಸ್ಟರ್‌ನಲ್ಲಿ, ರಾಜ್ಯ ಸರ್ಕಾರದ ವಿರುದ್ಧ ನಿಮ್ಮ ಧ್ವನಿ ಎತ್ತಿ ಎಂದು ಒಬ್ಬ ಯುವಕನ ಫೋಟೊ ಬಳಸಲಾಗಿದೆ. ಆದರೆ ಈ ಫೋಟೊವನ್ನು ಅನುಮತಿಯಿಲ್ಲದೆ ಬಳಸಲಾಗಿದೆ.

ಈ ಕುರಿತು ನೆಟ್‌ಫ್ಲಿಕ್ಸ್‌ನಲ್ಲಿ ನಿರ್ಮಾಪಕ ಹಾಗೂ ಚಿತ್ರನಟ ಅಖಿಲ್‌ ಅಯ್ಯರ್‌ ಟ್ವೀಟ್‌ ಮಾಡಿದ್ದಾರೆ. 40% ಸರ್ಕಾರ ಅಭಿಯಾನಕ್ಕೆ ನನ್ನ ಭಾವಚಿತ್ರವನ್ನು ಅನಧಿಕೃತವಾಗಿ ಬಳಕೆ ಮಾಡಲಾಗುತ್ತಿದೆ. ಕಾಂಗ್ರೆಸ್‌ನ ಈ ಅಭಿಯಾನಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಅವರು ನನ್ನಿಂದ ಅನುಮತಿಯನ್ನೂ ಪಡೆದಿಲ್ಲ. ಇದರ ವಿರುದ್ಧ ನಾನು ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ. ಈ ವಿಚಾರವನ್ನು ಗಮನಿಸುವಂತೆ ರಾಹುಲ್‌ ಗಾಂಧಿ, ಸಿದ್ದರಾಮಯ್ಯ ಅವರಿಗೆ ಮನವಿಯನ್ನೂ ಮಾಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಈ ಕುರಿತು ಪ್ರತಿಕ್ರಿಯಿಸಿ, ಸೂರ್ಯನ ಕೆಳಗಿರುವ ಎಲ್ಲ ವಿಚಾರಗಳಲ್ಲೂ ಹಗರಣ ಮಾಡುವುದರಲ್ಲಿ ಕಾಂಗ್ರೆಸ್‌ ಅನ್ನು ನಂಬಬಹುದು. ಜನರಿಗೆ ನಿಗದಿಯಾಗಿದ್ದ 85% ಅನುದಾನವನ್ನು ಕಬಳಿಸಿದ್ದು ಇದೇ ಕಾಂಗ್ರೆಸ್‌ ಎಂದಿದ್ದಾರೆ.

ಸಿಎಂ ಬೊಮ್ಮಾಯಿ ಪರವಾಗಿ ಜಾತಿ ಕಾರ್ಡ್‌

ಸಿಎಂ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಕಾಂಗ್ರೆಸ್‌ ಅಭಿಯಾನ ನಡೆಸುತ್ತಿರುವುದು ಇದೀಗ ಜಾತಿ ಬಣ್ಣಕ್ಕೆ ತಿರುಗಿದೆ. ಸಿಎಂ ವಿರುದ್ಧ ಪೇ ಸಿಎಂ ಅಭಿಯಾನ ನಡೆಸುತ್ತಿರುವ ಕಾಂಗ್ರೆಸ್‌, ಬೊಮ್ಮಾಯಿ ಅವರ ಫೋಟೊಗಳನ್ನೇ ಬಳಸಿ ಪ್ರಚಾರ ಮಾಡುತ್ತಿದೆ. ಇದಕ್ಕೆ ಪ್ರತಿಯಾಗಿ ಲಿಂಗಾಯತ ಕಾರ್ಡ್‌ ಪ್ರಯೋಗಕ್ಕೆ ಬಿಜೆಪಿ ಮುಂದಾಗಿದೆ.

ಸಿಎಂ ಬೊಮ್ಮಾಯಿ ಅವರ ತಂಡದಿಂದ ಏಳೆಂಟು ಪೋಸ್ಟರ್‌ಗಳನ್ನು ರೂಪಿಸಲಾಗಿದೆ. ಇದೆಲ್ಲದರಲ್ಲೂ ಮುಖ್ಯವಾಗಿ ಬಸವರಾಜ ಬೊಮ್ಮಾಯಿ ಅವರ ಫೋಟೊ ಹಾಗೂ ಬಸವೇಶ್ವರರ ಫೊಟೊ ಬಳಸಲಾಗಿದೆ. ಬಸವೇಶ್ವರರ ಫೊಟೊ ಕೆಳಗೆ, ಜೈ ವೀರಶೈವ ಲಿಂಗಾಯತ ಎಂದು ಬರೆಯಲಾಗಿದೆ. ʼಕೈ ನಾಯಕರೇ ಲಿಂಗಾಯತ ಸಿಎಂ ವಿಚಾರದಲ್ಲಿ ಮೀರುತ್ತಿದ್ದೀರಿ ಎಲ್ಲೆಯನ್ನ… ಮುಂದೆ ಖಂಡಿತ ತೆರುತ್ತೀರಿ ಬೆಲೆಯನ್ನʼ, ʼ ಸಿಎಂ ಮೇಲೆ ಮಾಡಿದರೆ ಸುಳ್ಳು ಆರೋಪ, ಕಾಂಗ್ರೆಸ್‌ಗೆ ರಾಜ್ಯದಲ್ಲಿ ಸಮಾರೋಪʼ ಎನ್ನುವಂತಹ ವಾಕ್ಯಗಳನ್ನು ಬರೆಯಲಾಗಿದೆ.

ಈ ಮೂಲಕ ಕಾಂಗ್ರೆಸ್‌ ಅಭಿಯಾನಕ್ಕೆ ಪ್ರತಿತಂತ್ರವನ್ನು ರೂಪಿಸಲಾಗಿದೆ. ಈ ಮೂಲಕ ಸಿಎಂ ವಿರುದ್ಧ ಆರೋಪ ಮಾಡುವವರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಲಾಗಿದೆ.

ಇದನ್ನೂ ಓದಿ | PayCM | ಪೇಸಿಎಂ ಅಭಿಯಾನ ರಾಜ್ಯ ಮಟ್ಟಕ್ಕೆ ವಿಸ್ತರಣೆ; ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ನೇತೃತ್ವದಲ್ಲಿ ಚಾಲನೆ?

Exit mobile version