ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ (Actor Darshan) ಸೇರಿ ನಾಲ್ವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹನ್ನೆರಡು ದಿನಗಳ ಪೊಲೀಸ್ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ನಟ ದರ್ಶನ್, ವಿನಯ್, ಪ್ರದೋಶ್ ಮತ್ತು ಧನರಾಜ್‌ನನ್ನು 24ನೇ ಎಸಿಎಂಎಂ ಕೋರ್ಟ್‌ಗೆ ಪೊಲೀಸರು ಹಾಜರುಪಡಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ್ದಾರೆ. ಇದರಿಂದ 13 ವರ್ಷಗಳ ನಂತರ ನಟ ದರ್ಶನ್ ಮತ್ತೆ ಜೈಲು ಸೇರುವಂತಾಗಿದೆ.
ರಾಜ್ಯ ಸರ್ಕಾರದ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದರು. ವಿಚಾರಣೆ ವೇಳೆ ನಿಮಗೆ ಕಸ್ಟಡಿಯಲ್ಲಿ ಏನಾದರೂ ತೊಂದರೆ ಆಯ್ತಾ ಎಂದು ಆರೋಪಿಗಳನ್ನು ಜಡ್ಜ್ ಪ್ರಶ್ನಿಸಿದರು. ಇಲ್ಲ ಸ್ವಾಮಿ, ಯಾವುದೇ ತೊಂದರೆ ಆಗಿಲ್ಲ ಎಂದು ಆರೋಪಿಗಳು ಉತ್ತರಿಸಿದರು. ನಂತರ ರಿಮ್ಯಾಂಡ್ ಅರ್ಜಿಯನ್ನು ಎಸ್‌ಪಿಪಿ ಪ್ರಸನ್ನ ಕುಮಾರ್ ನೀಡಿದರು. ಈ ಹಿಂದೆ ರಂಗನಾಥ್ ರೆಡ್ಡಿ ದರ್ಶನ್ ಪರ ವಕೀಲರಾಗಿದ್ದರು, ಈಗ ಪ್ರವೀಣ್ ತಿಮ್ಮಯ್ಯ ಹೊಸದಾಗಿ ವಕಾಲತ್ತು ವಹಿಸಿದ್ದರು.
ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರೋದಕ್ಕೆ ಸೂಕ್ತ ಸಾಕ್ಷ್ಯಗಳಿವೆ. ಈ ನಾಲ್ಕು ಮಂದಿ ರೇಣುಕಾಸ್ವಾಮಿ ಕೊಲೆಯಲ್ಲಿ ಭಾಗಿಯಾಗಿದ್ದಾರೆ. ಇವರಿಗೆ ನೆಲದ ಕಾನೂನಿನ ಮೇಲೆ ಕಿಂಚಿತ್ತು ಗೌರವ ಇಲ್ಲ. ಎ1 ಪ್ರಚೋದನೆಗೆ ದರ್ಶನ್ ಮತ್ತು ಟೀಂ ಒಳಗಾಗಿ ಕೃತ್ಯ ಮಾಡಿದೆ. ಎಲ್ಲರಿಗೂ ಕೊಲ್ಲುವ ಸಮಾನ ಉದ್ದೇಶವೂ ಕಂಡು ಬಂದಿದೆ. ಅದಕ್ಕಾಗಿ ಲಕ್ಷಾಂತರ ರೂಪಾಯಿನ್ನು ಬಳಕೆ ಮಾಡಿದ್ದಾರೆ ಎಂದು ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ. ವಾದ-ಪ್ರತಿವಾದ ಆಲಿಸಿದ ಬಳಿಕ ಆರೋಪಿಗಳನ್ನು ಜುಲೈ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಜಡ್ಜ್ ಆದೇಶ ನೀಡಿದರು.
ಕೊಲೆ ಕೇಸ್ ಸಂಬಂಧ ಜೂನ್ 11ರಂದು ದರ್ಶನ್ ಬಂಧನವಾಗಿತ್ತು. ಮೂರು ಬಾರಿ ದರ್ಶನ್‌ರನ್ನು ಪೊಲೀಸ್ ಕಸ್ಟಡಿಗೆ (12 ದಿನ) ಪಡೆಯಲಾಗಿತ್ತು. ಇದೀಗ ಜುಲೈ 4ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದ ಹಿನ್ನೆಲೆಯಲ್ಲಿ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ. ಇನ್ನುಳಿದ ಆರೋಪಿಗಳು ಈಗಾಗಲೇ ಜೈಲಿನಲ್ಲಿದ್ದಾರೆ.
2011ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ನಟ ದರ್ಶನ್ ಜೈಲು ಸೇರಿದ್ದರು. ಇದೀಗ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನವಾಗಿದ್ದರಿಂದ ಎರಡನೇ ಬಾರಿಗೆ ನಟ ಜೈಲು ಸೇರುತ್ತಿದ್ದಾರೆ.
ಇದನ್ನೂ ಓದಿ | Actor Darshan: ದರ್ಶನ್ ತುಂಬ ಮುಗ್ದ, ತಾಯಿ ಕಣ್ಣೀರು ಹಾಕೊಂಡು ಮಗನನ್ನು ಬೆಳೆಸಬೇಕು ಎಂದಿದ್ರು ಎಂದ ಲಹರಿ ವೇಲು!
ಕಸ್ಟಡಿಯಲ್ಲಿ ಎಲ್ಲ 17 ಆರೋಪಿಗಳ ವಿಚಾರಣೆ ಮಾಡಿದ್ದ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು, ಆರೋಪಿಗಳ ಹೇಳಿಕೆ ದಾಖಲಿಸಿಕೊಂಡಿದ್ದರು. ನಂತರ ಕೃತ್ಯಕ್ಕೆ ಸಂಬಂಧಿಸಿದ ಹಲವೆಡೆ ಮಹಜರು ಪ್ರಕ್ರಿಯೆ ನಡೆಸಿ, ಕೊಲೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ, ಸಾಕ್ಷ್ಯ ಸಂಗ್ರಹ ಮಾಡಿದ್ದಾರೆ.
ಆರ್. ಆರ್. ನಗರ ಶೆಡ್ ಬಳಿ ಸಿಸಿಟಿವಿ ದೃಶ್ಯಾವಳಿ, ಮೃತದೇಹ ಪತ್ತೆಯಾದ ಜಾಗ, ಆರೋಪಿಗಳು ಚಲನವಲನ ನಡೆಸಿದ್ದ ಜಾಗಗಳಲ್ಲಿನ ಸಿಸಿಟಿವಿ ಫುಟೇಜ್ ಸಂಗ್ರಹಿಸಿ, ಕೃತ್ಯಕ್ಕೆ ಬಳಸಿದ್ದ ವಸ್ತುಗಳು ಸೀಜ್ ಮಾಡಲಾಗಿದೆ. ಇನ್ನು ಈ ಕುರಿತು ಕೃತ್ಯ ನಡೆದ ದಿನ ಆರೋಪಿಗಳ ಸಂಪರ್ಕದಲ್ಲಿದ್ದ ನಟ ಚಿಕ್ಕಣ್ಣ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಇನ್ನಿತರರ ಹೇಳಿಕೆಯನ್ನೂ ದಾಖಲಿಸಲಾಗಿದೆ.
ಇದನ್ನೂ ಓದಿ | Actor Darshan: ರೇಣುಕಾಸ್ವಾಮಿ ಹತ್ಯೆ ಶ್ವಾನದ ಮೇಲೆ ʻಆನೆʼ ದಾಳಿ ಮಾಡಿದಂತೆ ಎಂದ ರಾಮ್ ಗೋಪಾಲ್ ವರ್ಮಾ!
ಡಿ ಗ್ಯಾಂಗ್ ಕೊಲೆಯ ಆರೋಪ ಸಾಬೀತು ಪಡಿಸಲು ಪ್ರತಿ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸಿದ್ದು, ಆರೋಪಿಗಳ ಬಟ್ಟೆಗಳು, ರಕ್ತ ಮತ್ತು ಕೂದಲಿನ ಮಾದರಿ ಪಡೆದು ಎಫ್ಎಸ್ಎಲ್‌ಗೆ ರವಾನೆ ಮಾಡಲಾಗಿದೆ. ಆರೋಪಿಗಳ ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲನೆ ಹಾಗೂ ಮೊಬೈಲ್ ಡೇಟಾ ರಿಟ್ರೀವ್ ಮಾಡಿ ತನಿಖೆ ನಡೆಸಲಾಗುತ್ತಿದೆ. ತನಿಖೆ ವಿಚಾರವಾಗಿ ಖುದ್ದು ಕಮಿಷನರ್ ದಯಾನಂದ್ ನಿಗಾ ವಹಿಸಿದ್ದು, ಪ್ರತಿದಿನ ತನಿಖೆ ವರದಿ ಪಡೆದು ಚಾರ್ಜ್ ಶೀಟ್ ತಯಾರಿಕೆಗೆ ಸಿದ್ಧತೆ ನಡೆಸಿದ್ದಾರೆ.