ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧಿಸಿದಂತೆ ಜೈಲು ಸೇರಿರುವ ನಟ ದರ್ಶನ್‌ಗೆ (Actor Darshan) ಇಂದು (ಜುಲೈ 22) ಮತ್ತೊಂದು ಮಹತ್ವದ ದಿನ ಆಗಲಿದೆ. ಮನೆ ಊಟಕ್ಕೆ ಅವಕಾಶ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಹೀಗಾಗಿ ಇವತ್ತಾದರೂ ನಟನಿಗೆ ಮನೆ ಊಟಕ್ಕೆ ಅನುಮತಿ ಸಿಗುತ್ತಾ ಎನ್ನುವ ಪ್ರಶ್ನೆ ಮೂಡಿದೆ.
ದರ್ಶನ್‌ಗೆ ಮನೆ ಊಟದ ವಿಚಾರದ ಬಗ್ಗೆ ಇಂದು ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಜೈಲೂಟದಿಂದಾಗಿ ಫುಡ್ ಪಾಯಿಸನಿಂಗ್ ಹಾಗೂ ಅತಿಸಾರ ಆಗುತ್ತಿದೆ. ಹೀಗಾಗಿ ಮನೆಯೂಟ ತರಿಸಿಕೊಳ್ಳಲು ಅನುಮತಿ ನೀಡುವಂತೆ ದರ್ಶನ್ ಪರ ವಕೀಲರು ಮನವಿ ಮಾಡಿದ್ದರು. ಮನವಿ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು.
ಇತ್ತ ಈ ವಿಚಾರಕ್ಕೆ ಸಂಬಂಧಿಸಿ ಆಕ್ಷೇಪಣೆ ಸಲ್ಲಿಸಲು ಎಸ್‌ಪಿಪಿಗೂ ನ್ಯಾಯಾಧೀಶರು ಸೂಚಿಸಿದ್ದರು. ದರ್ಶನ್‌ಗೆ ಮನೆ ಊಟಕ್ಕೆ ಅವಕಾಶ ನೀಡಬೇಡಿ ಅಂತಲೂ ಇಂದು ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ ದರ್ಶನ್‌ಗೆ ಮನೆ ಊಟಕ್ಕೆ ಅನುಮತಿ ಸಿಗುತ್ತಾ ಎನ್ನುವ ಪ್ರಶ್ನೆಗೆ ಇನ್ನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.
ದರ್ಶನ್ ಮನವಿ ಏನು?
ಜೈಲಿನ ಆಹಾರ ದರ್ಶನ್‌ಗೆ ಒಗ್ಗದೇ ಫುಡ್ ಪಾಯಿಸನಿಂಗ್ ಆಗುತ್ತಿದೆ. ಹೀಗೆಂದು ಜೈಲಿನ ವೈದ್ಯರೇ ಹೇಳಿದ್ದರು. ಅತಿಸಾರದಿಂದಾಗಿ ದರ್ಶನ್ ತೂಕ ತುಂಬಾ ಕಡಿಮೆಯಾಗಿದೆ. ಹಲವು ಕೆಜಿಗಳಷ್ಟು ತೂಕವನ್ನು ದರ್ಶನ್ ಕಳೆದುಕೊಂಡಿದ್ದಾರೆ. ದರ್ಶನ್ ಜಾಮೀನಿಗಾಗಿ ವಕೀಲರು ಬೇಕಾದ ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದಾರೆ. ಹೀಗಾಗಿ ಇನ್ನು ಕೆಲವಷ್ಟು ದಿನ ದರ್ಶನ್ ಜೈಲಿನಲ್ಲೆ ಇರಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಮನೆ ಊಟಕ್ಕೆ ಅನುಮತಿ ನೀಡುವಂತೆ ಜೈಲು ಅಧಿಕಾರಿಗಳ ಬಳಿ ದರ್ಶನ್ ಮನವಿ ಮಾಡಿದ್ದಾರೆ.
ಆ. 1ರ ತನಕ ನ್ಯಾಯಾಂಗ ಬಂಧನದಲ್ಲಿ ದರ್ಶನ್ & ಗ್ಯಾಂಗ್
ಆಗಸ್ಟ್ 1 ರವರೆಗೆ ದರ್ಶನ್ ಅಂಡ್ ಗ್ಯಾಂಗ್ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದೆ. ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ನ್ಯಾಯಾಧೀಶ ವಿಶ್ವನಾಥ ಸಿ. ಗೌಡರ್ ಜುಲೈ 18 ಆದೇಶ ನೀಡಿದ್ದರು.
ಯೋಗದ ಮೊರೆ ಹೋದ ದರ್ಶನ್
ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಹರಸಾಹಸ ಪಡುತ್ತಿರುವ ದರ್ಶನ್ ಇದೀಗ ಮಾನಸಿಕ ಖಿನ್ನತೆಯಿಂದ ಹೊರಬರಲು ಯೋಗದ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಜೈಲೂಟ ರುಚಿಸುತ್ತಿಲ್ಲ, ಸಹಖೈದಿಗಳ ಸಹವಾಸ ಬೇಡವಾಗಿದೆ. ಇದರ ಜತೆಗೆ ಒಂಟಿತನ ಇನ್ನಿಲ್ಲದೆ ಕಾಡುತ್ತಿದೆ. ಒಂಟಿತನದಿಂದ ಪರಾಗಲು ದರ್ಶನ್ ಪುಸ್ತಕಗಳನ್ನು ಕೇಳಿ ಪಡೆದಿದ್ದರು. ಆದರೂ ಮನಸ್ಸಿನಿಂದ ಬೇಸರ ದೂರವಾಗುತ್ತಿಲ್ಲ. ಜತೆಗೆ ರೇಣುಕಾಸ್ವಾಮಿ ಕೊಲೆ ಕೇಸ್ ಭಯ ಕೂಡ ಕಾಡುತ್ತಿದೆ. ಪೊಲೀಸರ ತನಿಖೆ ಕೂಡ ಭರ್ಜರಿಯಾಗೇ ಸಾಗುತ್ತಿದೆ. ಇವೆಲ್ಲವೂ ನಟ ದರ್ಶನ್ ಅವರನ್ನು ನಿದ್ದೆಗೆಡಿಸಿವೆ. ಹಾಗಾಗಿ ಎಲ್ಲ ಆತಂಕಗಳಿಂದ ಹೊರ ಬರಲು ಯೋಗದ ಮೊರೆ ಹೋಗಿದ್ದಾರೆ. ಈ ಹಿಂದೆ ದರ್ಶನ್ ಭೇಟಿಯಾಗಿ ವಿಜಯಲಕ್ಷ್ಮೀ ಧೈರ್ಯ ತುಂಬಿ ಬಂದಿದ್ದರು. ಜೈಲಿನಲ್ಲಿ ಅಪ್ಪನ ಸ್ಥಿತಿ ಕಂಡು ಮಗ ವಿನೀಶ್ ಕಣ್ಣೀರು ಹಾಕಿದ್ದ.
ಇದನ್ನೂ ಓದಿ: Actor Darshan: ಅಪ್ಪನ ಸ್ಥಿತಿ ಕಂಡು ಮಗ ವಿನೀಶ್ ಕಣ್ಣೀರು; ಧೈರ್ಯ ತುಂಬಿದ ವಿಜಯಲಕ್ಷ್ಮಿ!