Site icon Vistara News

ಜಾಗೇಶ್‌ ಅಲ್ಲ ಜಗ್ಗೇಶ್‌ ಎಂದು ಸರಿಪಡಿಸಿದ ವೆಂಕಯ್ಯ ನಾಯ್ಡು: ರಾಜ್ಯಸಭೆಯಲ್ಲಿ ಸ್ವಾರಸ್ಯ

Rajya Sabha member Jaggesh speaks in Kannada and requested opposition to appreciate modi

ಬೆಂಗಳೂರು: ಇತ್ತೀಚೆಗೆ ರಾಜ್ಯಸಭೆಗೆ ಆಯ್ಕೆಯಾದ ಕಲಾವಿದ ಹಾಗೂ ಬಿಜೆಪಿ ನಾಯಕ ಜಗ್ಗೇಶ್‌ ಶುಕ್ರವಾರ ರಾಜ್ಯಸಭೆಯಲ್ಲಿ ಪ್ರತಿಜ್ಞೆ ಸ್ವೀಕರಿಸಿದ್ದಾರೆ. ಅಚ್ಚ ಕನ್ನಡದಲ್ಲಿ, ಗುರು ರಾಯರ ಹೆಸರಿನಲ್ಲಿ ಜಗ್ಗೇಶ್‌ ಪ್ರತಿಜ್ಞೆ ಸ್ವೀಕರಿಸಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ಎಲ್ಲರ ಗಮನ ಸೆಳೆದಿರುವುದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಸ್ಪಂದನೆ.

ರಾಜ್ಯಸಭೆಗೆ ಆಯ್ಕೆಯಾದ ಸದಸ್ಯರ ಪ್ರತಿಜ್ಞಾ ವಿಧಿ ಬೋಧನೆ ಕಾರ್ಯಕ್ರಮ ಶುಕ್ರವಾರ ನಡೆಯಿತು. ಈ ಸಮಯದಲ್ಲಿ ರಾಜ್ಯಸಭೆಯ ಸಭಾಪತಿ ಹಾಗೂ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಉಪಸ್ಥಿತರಿದ್ದರು. ರಾಜ್ಯಸಭೆ ಅಧಿಕಾರಿ, “ಕರ್ನಾಟಕ, ಶ್ರೀ ಜಾಗೇಶ್‌ʼ (ಕರ್ನಾಟಕದಿಂದ ಜಾಗೇಶ್‌) ಎಂದು ಹೆಸರು ಕೂಗಿದರು.

ಒಂದು ಸೆಕೆಂಡ್‌ ಕೂಡ ವಿಳಂಬ ಮಾಡದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, “ಜಗ್ಗೇಶ್‌ʼ ಎಂದು ಸರಿಪಡಿಸಿದರು. ಕನ್ನಡದ ಹೆಸರನ್ನು ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಬರೆದುಕೊಳ್ಳುವ ಕಾರಣ ಅಧಿಕಾರಿಗಳಿಗೆ ಕೆಲವು ವಿಶಿಷ್ಟ ಹೆಸರುಗಳ ಉಚ್ಚಾರಣೆ ತಪ್ಪಾಗುತ್ತದೆ. ದಕ್ಷಿಣ ಭಾರತದವರೇ ಆದ ಕಾರಣ ಹಾಗೂ ಕನ್ನಡವನ್ನೂ ಉತ್ತಮವಾಗಿ ಮಾತನಾಡಬಲ್ಲ ವೆಂಕಯ್ಯ ನಾಯ್ಡು ಅವರ ಸಕಾಲಿಕ ಸ್ಪಂದನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕನ್ನಡದಲ್ಲಿ, ಗುರು ರಾಯರ ಹೆಸರಿನಲ್ಲಿ ಪ್ರತಿಜ್ಞೆ

ʻಜಗ್ಗೇಶ್‌ ಎಂಬ ಹೆಸರಿನವನಾದ ನಾನು ರಾಜ್ಯಸಭೆ ಸದಸ್ಯನಾಗಿ ಚುನಾಯಿತನಾದವನಾಗಿ ಕಾನೂನು ಮೂಲಕ ಸ್ಥಾಪಿತವಾದ ಸಂವಿಧಾನಕ್ಕೆ ಶ್ರದ್ಧೆಯನ್ನು ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದು, ಭಾರತದ ಸಾರ್ವಭೌಮತೆಯನ್ನು ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುತ್ತೇನೆಂದು, ಮತ್ತು ನಾನು ಈಗ ಕೈಗೊಳ್ಳಲಿರುವ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುತ್ತೇನೆಂದು ರಾಘವೇಂದ್ರ ಸ್ವಾಮಿಗಳ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆʼ ಎಂದು ಜಗ್ಗೇಶ್‌ ಹೇಳಿದರು.

ನಂತರ ಈ ಕುರಿತು ಟ್ವೀಟ್‌ ಮಾಡಿರುವ ಜಗ್ಗೇಶ್‌ ʻರಾಜ್ಯಸಭೆಯಲ್ಲಿ ಶ್ರದ್ಧೆಯಿಂದ ಪ್ರಮಾಣವಚನ, ಸಿರಿಗನ್ನಡದಲ್ಲಿ ರಾಯರ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದ್ದು ನನ್ನ ಬದುಕಿನ ಶ್ರೇಷ್ಠಕ್ಷಣ… ಹೃದಯಪೂರ್ವಕ ಧನ್ಯವಾದ ಎಂದು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಕರ್ನಾಟಕ, ಸಿಎಂ ಬಸವರಾಜ ಬೊಮ್ಮಾಯಿ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‌ ಕುಮಾರ್‌ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಇದನ್ನೂ ಓದಿ |ಏಕವಚನದಲ್ಲಿ ಜಗ್ಗೇಶ್‌ ಅನ್ನುತ್ತಿದ್ದ ನಾನು ಇನ್ನು ಜಗ್ಗೇಶಣ್ಣ ಎನ್ನಬೇಕು: ಸಚಿವ ಅಶೋಕ್‌ ಹೀಗೆ ಹೇಳಿದ್ದೇಕೆ?

Exit mobile version