Site icon Vistara News

Actor Lohithashwa no more | ಕನ್ನಡ ಚಿತ್ರಗಳ ಕಾಯಂ ಕಮಿಷನರ್‌, ರಂಗಭೂಮಿಯಲ್ಲಿ ಮಿಂಚಿದ ಕಂಚಿನ ಕಂಠ

lohithashwa
FacebookTwitterWhatsAppPinterestTelegramLinkedInKoo

ಬೆಂಗಳೂರು: ಇವರು ಮೂಲತಃ ಒಬ್ಬ ಇಂಗ್ಲಿಷ್‌ ಪ್ರೊಫೆಸರ್‌. ಪ್ರವೃತ್ತಿಯಲ್ಲಿ ಒಬ್ಬ ಪ್ರಬುದ್ಧ ಹವ್ಯಾಸಿ ರಂಗ ನಟ. ಆದರೆ, ಆಕಸ್ಮಿಕವಾಗಿ ಎಂಟ್ರಿ ಪಡೆದ ಸಿನಿಮಾ ರಂಗದಲ್ಲಿ ಅವರದ್ದು ನಿಜಕ್ಕೂ ಮಿಂಚಿನ ಓಟ. ಕೆಲವೇ ವರ್ಷಗಳಲ್ಲಿ ಅವರು ೫೦೦ಕ್ಕೂ ಸಿನಿಮಾ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಅಪಾರ ಜನಮನ್ನಣೆ ಕಳಿಸಿದರು. ಈ ಸಿನಿಮಾ, ರಂಗ ಸಾಧಕರೇ ಲೋಹಿತಾಶ್ವ ಟಿ.ಎಸ್‌.

ಕನ್ನಡ ಸಿನಿಮಾ ರಂಗದ ಕಾಯಂ ಪೊಲೀಸ್‌ ಕಮಿಷನರ್‌ ಎಂದೇ ಹೆಸರಾದ ಲೋಹಿತಾಶ್ವ ಟಿ.ಎಸ್‌. ಅವರು ಮಂಗಳವಾರ ನಿಧನರಾದರು. ಅವರಿಗೆ ೮೦ ವರ್ಷವಾಗಿತ್ತು. ಲೋಹಿತಾಶ್ವ ಅವರು ಬಹುತೇಕ ಸಿನಿಮಾಗಳಲ್ಲಿ ಪೊಲೀಸ್‌ ಕಮಿಷನರ್‌ ಆಗಿಯೇ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಹೆಚ್ಚಿನ ಸಿನಿಮಾಗಳಲ್ಲಿ ಖಳ ಪಾತ್ರಗಳು. ಉಳಿದ ಪೋಷಕ ಪಾತ್ರಗಳಲ್ಲೂ ಮಿಂಚಿದ್ದಾರೆ.

ಲೋಹಿತಾಶ್ವ ಅವರ ಹುಟ್ಟೂರು ತುಮಕೂರು ಬಳಿಯ ತೊಂಡಗೆರೆ ಗ್ರಾಮ. ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಬಳಿಕ ಉಪನ್ಯಾಸಕರಾಗಿದ್ದರು. ಅವರಿಗೆ ಮೂವರು ಮಕ್ಕಳು. ಖ್ಯಾತ ಚಿತ್ರ ನಟ ಶರತ್‌ ಲೋಹಿತಾಶ್ವ, ವಿನಯ್‌ ಸಾಹ ಮತ್ತು ರಾಹುಲ್‌ ಲೋಹಿತಾಶ್ವ. ನಾಲ್ಕು ದಶಕಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವರು ನಡುವೆ ಹವ್ಯಾಸಿ ರಂಗಭೂಮಿ ಕಲಾವಿದರಾಗಿ ಅಪಾರ ಜನಮನ್ನಣೆ ಗಳಿಸಿದ್ದರು.

ಲೋಹಿತಾಶ್ವ

ಶಂಕರ್‌ ನಾಗ್‌ ಹುಡುಕಿದ ಪ್ರತಿಭೆ
ಪ್ರತಿಭೆಗಳು ಎಲ್ಲೇ ಇದ್ದರೂ ಹುಡುಕುವ ಉತ್ಸಾಹ ತೋರುತ್ತಿದ್ದ ದಿ. ಶಂಕರ್‌ ನಾಗ್‌ ಅವರು ಇವರ ನಾಟಕದ ಪಾತ್ರವೊಂದನ್ನು ನೋಡಿ ತಮ್ಮ ಚಿತ್ರದಲ್ಲೂ ನಟಿಸುವಂತೆ ಕೇಳಿಕೊಂಡಿದ್ದರು. ʻಗೀತಾʼ ಲೋಹಿತಾಶ್ವ ಅವರು ನಟಿಸಿದ ಮೊದಲ ಕಮರ್ಷಿಯಲ್‌ ಸಿನಿಮಾ. ಹೀಗೆ ೧೯೮೧ರಲ್ಲಿ ಆರಂಭವಾದ ಅವರ ಜೈತ್ರಯಾತ್ರೆ ೩೦ ವರ್ಷಗಳ ಕಾಲ ವೇಗವಾಗಿ ಸಾಗಿತ್ತು. ಅಲ್ಲಿಂದ ಅರಂಭವಾದ ಅವರ ಜೈತ್ರ ಯಾತ್ರೆ ನಿರಂತರವಾಗಿತ್ತು. ಆದರೆ ಅವರೇ ಸ್ವಲ್ಪ ಮಟ್ಟಗೆ ಆಸಕ್ತಿ ಕಳೆದುಕೊಂಡರು ೨೦೧೧ರಲ್ಲಿ ಸಾರಥಿ ಚಿತ್ರದಲ್ಲಿ ನಟಿಸಿದ ಬಳಿಕ ಅವರು ಚಿತ್ರರಂಗದಿಂದ ದೂರವಾಗಿ ಸ್ವಗ್ರಾಮದಲ್ಲಿ ಕೃಷಿ ಮಾಡಿಕೊಂಡಿದ್ದರು.

ಬಹುಮುಖ ಪ್ರತಿಭಾ ಸಂಪನ್ನ
ಲೋಹಿತಾಶ್ವ ಅವರು ಬಹುಮುಖ ಪ್ರತಿಭೆಯಿಂದ ಗಮನ ಸೆಳೆದವರು. ಅವರು ನಟನೆ ಮಾತ್ರವಲ್ಲದೆ, ಬರವಣಿಗೆ, ನಾಟಕ ರಚನೆಯಲ್ಲೂ ಎತ್ತಿದ ಕೈ. ಇಷ್ಟೇ ಅಲ್ಲ ಟೈಲರಿಂಗ್‌ನಲ್ಲೂ ಅವರು ಸಿದ್ಧ ಹಸ್ತರು, ಕೃಷಿ ಕ್ಷೇತ್ರದಲ್ಲೂ ಪಂಡಿತರಾಗಿದ್ದರು.

ದಿಗ್ಗಜರ ಜತೆ ನಟನೆ
ಲೋಹಿತಾಶ್ವ ಅವರು ಶಂಕರ್‌ ನಾಗ್‌ ಅವರ ಫೇವರಿಟ್‌ ನಟ. ಹಿರಿಯ ನಿರ್ದೇಶ ಬಿ. ಸೋಮಶೇಖರ್ ಅವರ ಬಹುತೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಸಿನಿಮಾಗಳಲ್ಲಿ ಪೊಲೀಸ್ ಕಮಿಷನರ್ ಪಾತ್ರ ಅಂದರೆ ಥಟ್ಟನೆ ನೆನಪಾಗವುದೇ ಲೋಹಿತಾಶ್ವ ಅವರು.

ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ಶಿವರಾಜ್ ಕುಮಾರ್ ಸೇರಿದಂತೆ ೧೯೮೧ರಿಂದ ೨೦೧೧ರವರೆಗೆ ಸುದ್ದಿಯಲ್ಲಿದ್ದ ಎಲ್ಲ ದಿಗ್ಗಜ ನಟರ ಜತೆಗೂ ನಟಿಸಿದ್ದಾರೆ. ಸಿನಿಮಾವನ್ನು ಹವ್ಯಾಸದಂತೆ ನೋಡುತ್ತಿದ್ದ ಅವರನ್ನು ೫೦೦ಕ್ಕೂ ಅಧಿಕ ಚಿತ್ರಗಳು ಕೈಬೀಸಿ ಕರೆದಿದ್ದು ನಿಜಕ್ಕೂ ಅವರ ಪ್ರತಿಭೆಗೆ ಸಂದ ಗೌರವ. ಆದರೆ, ಅಂಥ ಜನಪ್ರಿಯತೆಯ ಉತ್ತುಂಗದಲ್ಲೇ ಅವರು ಚಿತ್ರ ರಂಗದ ಆಕರ್ಷಣೆಯಿಂದ ದೂರ ಸರಿದಿದ್ದರು. ಅದು ಅವರ ಶಕ್ತಿ.

ನಟಿಸಿದ ಪ್ರಮುಖ ಸಿನಿಮಾಗಳು
ಅಭಿಮನ್ಯು, ಆಪತ್ಬಾಂಧವ, ಎ.ಕೆ. ೪೭, ಅತಿರಥ ಮಹಾರಥ, ಅವತಾರ ಪುರುಷ, ಬಂಧ ಮುಕ್ತ, ಬೇಟೆ, ಬೇಡಿ, ಸಿಬಿಐ ಶಿವ, ಚದುರಂಗ, ಚಂದು, ಚಕ್ರವರ್ತಿ, ಚಾಣಕ್ಯ, ಚಿನ್ನ, ದಾದಾ, ಡಿಸೆಂಬರ್‌ ೩೧, ದೇವಾ, ಡ್ರಾಮಾ, ಎಲ್ಲರಂಥಲ್ಲ ನನ್ನ ಗಂಡ, ಏಕಲವ್ಯ, ಎಮರ್ಜೆನ್ಸಿ, ಗಜೇಂದ್ರ, ಘಳಿಗೆ, ಗೀತಾ, ಹೆಲೋ ಡ್ಯಾಡಿ, ಹೊಸ ನೀರು, ಹುಲಿಯಾ, ಇಂದಿನ ರಾಮಾಯಣ, ಇಂದ್ರಜಿತ್‌, ಜಯಸಿಂಹ, ಕದನ, ಕಾಡಿನ ರಾಜ, ಕಾವೇರಿ ನಗರ, ಕಲಾವಿದ, ಕೋಣ ಈದೈತೆ, ಲಾಕಪ್‌ ಡೆತ್‌, ಮಾರ್ಜಾಲ, ಮಿಡಿದ ಹೃದಯಗಳು, ಮೂರು ಜನ್ಮ, ಮುನಿಯನ ಮಾದರಿ, ಮೈಸೂರು ಜಾಣ, ಮಿಸ್ಟರ್‌ ರಾಜಾ, ನವಭಾರತ, ನೀ ಬರೆದ ಕಾದಂಬರಿ, ನ್ಯೂಡೆಲ್ಲಿ, ಒಲವಿನ ಆಸರೆ, ಒಲವು ಮೂಡಿದಾಗ, ಒಂದು ಊರಿನ ಕಥೆ, ಒಂಥರಾ ಬಣ್ಣಗಳು, ಪೊಲೀಸ್‌ ಲಾಕಪ್‌, ಪ್ರತಾಪ್‌, ಪ್ರೀತಿ ವಾತ್ಸಲ್ಯ, ರೆಡಿಮೇಡ್‌ ಗಂಡ, ರಣಚಂಡಿ, ಸಾಂಗ್ಲಿಯಾನಾ, ಎಸ್‌ಪಿ ಸಾಂಗ್ಲಿಯಾನಾ-೨, ಸಾಹಸವೀರ, ಸಮಯದ ಗೊಂಬೆ, ಸಂಭವಾಮಿ ಯುಗೇ ಯುಗೇ, ಸಂಗ್ರಾಮ, ಸಾರಥಿ, ಸವ್ಯಸಾಚಿ, ಶಾಂತಿ ನಿವಾಸ, ಸಿಂಹದ ಗುರಿ, ಸಿಂಹಾಸನ, ಸ್ನೇಹಲೋಕ, ಸುಂದರಕಾಂಡ, ತುಂಬಿದ ಮನೆ, ಟೈಮ್‌ ಬಾಂಬ್‌, ವಿಶ್ವ

ಪ್ರಮುಖ ಧಾರಾವಾಹಿಗಳು
ಅಂತಿಮ ರಾಜ (ನಿರ್ದೇಶನ: ಎಂ.ಎಸ್‌. ಸತ್ಯು), ಗೃಹ ಭಂಗ (ಗಿರೀಶ್‌ ಕಾಸರವಳ್ಳಿ), ಮಾಲ್ಗುಡಿ ಡೇಸ್‌ (ಶಂಕರ್‌ ನಾಗ್‌), ನಾಟ್ಯರಾಣಿ ಶಾಂತಲಾ (ಜಿ.ವಿ. ಅಯ್ಯರ್‌), ಓಂ ನಮೋ (ಕೆ.ಎಂ. ಚೈತನ್ಯ), ಪ್ರತಿಧ್ವನಿ (ಎಂ.ಎಸ್‌. ಸತ್ಯು)

ಸಾಹಿತಿಯಾಗಿಯೂ ಸಾಧಕರು
ಅಕ್ಕಡಿ ಸಾಲು ಅವರ ಬರಹಗಳ ಸಂಕಲನ, ಹೊತ್ತು ಹೋಗುವ ಮುನ್ನ ಅವರ ಕವನ ಸಂಕಲನ, ಮಾಡು ಸಿಕ್ಕದಲ್ಲ, ಎ ಮಿಲಿಯನ್‌ ಮ್ಯಾನ್ಶನ್ಸ್‌, ಮುಖ್ಯಮಂತ್ರಿ, ಸಲ್ಲಾಪ, ಸಂತೆಯಲ್ಲಿ ನಿಂತ ಕಬೀರ ಮತ್ತು ಡಾ. ತಿಪ್ಪೇಶಿ ಮೊದಲಾದ ನಾಟಕಗಳನ್ನು ಬರೆದಿದ್ದಾರೆ. ಸಿದ್ದಗಂಗೆಯ ಸಿದ್ದಪುರುಷ ಎಂಬ ಹೊತ್ತಿಗೆಯನ್ನು ರಚಿಸಿದ್ದಾರೆ.

ಹುಲಿಯ ನೆರಳು ನಾಟಕದ ದೃಶ್ಯ

ಅವರು ಅಬ್ಬರಿಸಿದ ನಾಟಕಗಳು
೨೭ ಮಾವಳ್ಳಿ ಸರ್ಕಲ್‌ (ನಿರ್ದೇಶನ ಟಿ.ಎನ್‌. ನರಸಿಂಹನ್‌), ಬೆಳ್ಚಿ, ಭಾರತ ದರ್ಶನ, ಚಸ್ನಾಳಾ ಟ್ರಾಜಿಡಿ, ದಂಗೆಯ ಮುಂಚಿನ ದಿನಗಳು (ಪ್ರಸನ್ನ), ಹುಲಿಯ ನೆರಳು (ಪ್ರಸನ್ನ), ಹುತ್ತವ ಬಡಿದರೆ (ಪ್ರಸನ್ನ), ಕತ್ತಲೆಯ ದಾರಿ ದೂರ (ಟಿ.ಎನ್‌. ನರಸಿಂಹನ್‌), ಕುಬಿ ಮತ್ತು ಇಯಾಲ, ಮೆರವಣಿಗೆ (ಗಂಗಾಧರ ಸ್ವಾಮಿ), ಮೋಟೆ ರಾಮನ ಸತ್ಯಾಗ್ರಹ (ಎಂ.ಎಸ್‌. ಸತ್ಯು), ಪಂಚಮ (ಸಿ.ಜಿ. ಕೃಷ್ಣ ಸ್ವಾಮಿ)

ಅವರು ಪಡೆದ ಪ್ರಶಸ್ತಿಗಳು: ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ (೧೯೯೭), ಸುವರ್ಣ ರಾಜ್ಯೋತ್ಸವ ಪ್ರಶಸ್ತಿ (೨೦೦೬)

ಇದನ್ನೂ ಓದಿ | Actor Lohitashwa | ಹಿರಿಯ ನಟ ಲೋಹಿತಾಶ್ವ ಇನ್ನಿಲ್ಲ; ಅನಾರೋಗ್ಯದಿಂದ ನಿಧನ

Exit mobile version