Site icon Vistara News

Actor Upendra : 2ನೇ FIRಗೂ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ; ಉಪೇಂದ್ರಗೆ ಬಿಗ್‌ ರಿಲೀಫ್‌

Upendra High court

ಬೆಂಗಳೂರು: ಜಾತಿನಿಂದನೆ ಮಾಡಿದ ಗಂಭೀರ ಆರೋಪ (Atrocity Case) ಎದುರಿಸುತ್ತಿರುವ ಚಿತ್ರ ನಟ ಉಪೇಂದ್ರ (Actor Upendra) ಅವರ ವಿರುದ್ಧ ದಾಖಲಾಗಿರುವ ಎರಡನೇ ಎಫ್‌ಐಆರ್‌ಗೂ (Second FIR) ರಾಜ್ಯ ಹೈಕೋರ್ಟ್‌ (Karnataka High court) ಮಧ್ಯಂತರ ತಡೆಯಾಜ್ಞೆ (Interim Stay) ನೀಡಿದೆ. ʻಊರಿದ್ದರೆ ಹೊಲೆಗೇರಿ ಇದ್ದೇ ಇರುತ್ತದೆʼ ಎಂಬ ವಿವಾದಾತ್ಮಕ ಮಾತು ಆಡಿದ್ದ ಉಪೇಂದ್ರ ವಿರುದ್ಧ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶ ಪೊಲೀಸ್‌ (Chennammana kere police station) ಠಾಣೆ ಮತ್ತು ಹಲಸೂರುಗೇಟ್‌ ಪೊಲೀಸ್‌ ಠಾಣೆಯಲ್ಲಿ (Halasuru Gate Police Station) ಪ್ರತ್ಯೇಕವಾಗಿ ಎಫ್‌ಐಆರ್‌ಗಳು ದಾಖಲಾಗಿದ್ದವು.

ಮೂರು ದಿನಗಳ ಹಿಂದೆ ಕೋರ್ಟ್‌ ಚೆನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿತ್ತು. ಆದರೆ ಹಲಸೂರು ಗೇಟ್‌ ಠಾಣೆ ಎಫ್‌ಐಆರ್‌ ಹಾಗೇ ಉಳಿದಿತ್ತು. ಈ ಮಧ್ಯೆ ಆಗಸ್ಟ್‌ 16ರಂದು ಉಪೇಂದ್ರ ಅವರು ಹೈಕೋರ್ಟ್‌ ಮೊರೆ ಹೋಗಿದ್ದರೂ ಅರ್ಜಿಯ ವಿಚಾರಣೆಯನ್ನು ಕೋರ್ಟ್‌ ಮುಂದೂಡಿತ್ತು. ಇದೀಗ ಆಗಸ್ಟ್‌ 17 (ಗುರುವಾರ) ಎರಡನೇ ಎಫ್‌ಐಆರ್‌ಗೂ ತಡೆಯಾಜ್ಞೆ ನೀಡಲಾಗಿದೆ. ಈ ಮೂಲಕ ಬಂಧನದ ಭೀತಿಯನ್ನು ಎದುರಿಸುತ್ತಿದ್ದ ಉಪೇಂದ್ರ ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ.

ಹೈಕೋರ್ಟ್‌ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ನೇತೃತ್ವದ ಏಕಸದಸ್ಯ ಪೀಠದಿಂದ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಎಫ್ಐಆರ್‌ ರದ್ದತಿ ಕುರಿತ ಅರ್ಜಿ ವಿಚಾರಣೆ ಮಾಡಲಾಯಿತು. ಈ ವೇಳೆ ನಟ ಉಪೇಂದ್ರ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡಿಸಿದ್ದಾರೆ. ಎರಡು ಎಫ್ಐಆರ್ ದಾಖಲಿಸಿದ್ದಾರೆ ಎಂಬುದನ್ನು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಘಟನೆಗೆ ಸಂಬಂಧ ಎಲ್ಲಾ ದೂರುಗಳಿಗೂ ತಡೆ ನೀಡುವಂತೆ ಮನವಿ ಮಾಡಿದರು. ಉಪೇಂದ್ರ ಪರ ವಕೀಲರ ಮನವಿ ಪುರಸ್ಕರಿಸಿ ಹೈಕೋರ್ಟ್ ನ್ಯಾಯಾಧೀಶರು ಮಧ್ಯಂತರ ತಡೆಯಾಜ್ಞೆ ಆದೇಶ ನೀಡಿದ್ದಾರೆ.

ಇದನ್ನೂ ಓದಿ : Actor Upendra: ಹೆಡೆ ಬಿಚ್ಚಿ ಬುಸುಗುಟ್ಟಿದ ದ್ವೇಷದ ಆಟಕ್ಕೆ ತಡೆ ಎಂದ ಉಪೇಂದ್ರ!

ಉಪೇಂದ್ರ ವಿರುದ್ಧ ಆರೋಪವೇನು?

ಆಗಸ್ಟ್‌ 12ರಂದು ಪ್ರಜಾಕೀಯ ಪಕ್ಷಕ್ಕೆ 6 ವರ್ಷವಾದ ಪ್ರಯುಕ್ತ ಉಪೇಂದ್ರ ಅವರು ತಮ್ಮ ಅಭಿಮಾನಿಗಳ ಜತೆ ಫೇಸ್‌ ಬುಕ್‌ ಲೈವ್‌ನಲ್ಲಿ ಸಂವಾದ ನಡೆಸಿದ್ದರು. ಈ ವೇಳೆ ಮಾತಿನ ಭರದಲ್ಲಿ ʻಊರಿದ್ದರೆ ಹೊಲೆಗೇರಿ ಇದ್ದೇ ಇರುತ್ತದೆʼ ಎಂಬ ಗಾದೆಯನ್ನು ಬಳಸಿದ್ದರು. ಇದು ಸೋಷಿಯಲ್‌ ಮೀಡಿಯಾದಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಉಪೇಂದ್ರ ಈ ರೀತಿ ಹೇಳಿದ್ದು ಸರಿಯಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದರು. ಜತೆಗೆ ದಲಿತ ಸಂಘಟನೆಗಳು ಸಿಡಿದೆದ್ದವು. ಇದರಿಂದ ಎಚ್ಚೆತ್ತುಕೊಂಡ ಉಪೇಂದ್ರ ಅವರು ತಮ್ಮ ಲೈವ್‌ನ್ನು ಡಿಲೀಟ್‌ ಮಾಡಿದ್ದಲ್ಲದೆ, ಕ್ಷಮೆ ಯಾಚನೆ ಕೂಡಾ ಮಾಡಿದ್ದರು. ಆದರೆ ಸಾಮಾಜಿಕ ಆಕ್ರೋಶ ಕಡಿಮೆ ಆಗಿಲ್ಲ. ಅವರ ಭಾರತೀಯ ದಂಡ ಸಂಹಿತೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ 1985ರ (Atrocity act) ಅಡಿಯಲ್ಲಿ ಈಗಾಗಲೇ ಎರಡು ಎಫ್‌ಐಆರ್‌ಗಳನ್ನು ದಾಖಲಾಗಿದ್ದವು. ಉಪೇಂದ್ರ ಅವರು ತಾನು ಉದ್ದೇಶಪೂರ್ವಕವಾಗಿ ಈ ಪದ ಬಳಸಿಲ್ಲ ಎಂದು ಹೇಳಿದ್ದಲ್ಲದೆ ಎಫ್‌ಐಆರ್‌ ರದ್ದುಗೊಳಿಸುವಂತೆ ಮನವಿ ಮಾಡಿದ್ದರು. ಕೋರ್ಟ್‌ ಅಂದು ಮೊದಲ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿತ್ತು. ಇದೀಗ ಎರಡನೇ ಪ್ರಕರಣದಲ್ಲೂ ತಡೆಯಾಜ್ಞೆ ಸಿಕ್ಕಿದೆ.

ಈ ನಡುವೆ, ಉಪೇಂದ್ರ ಅವರ ಹೇಳಿಕೆಯ ವಿರುದ್ಧ ರಾಜ್ಯದ ಹಲವು ಕಡೆಗಳಲ್ಲಿ ಪ್ರತಿಭಟನೆ ಮುಂದುವರಿದಿದೆ. ಕೆಲವು ಕಡೆ ಪೊಲೀಸ್‌ ಠಾಣೆಗೆ ದೂರು ಕೂಡಾ ನೀಡಲಾಗುತ್ತಿದೆ.

Exit mobile version