ಬೆಂಗಳೂರು: ತಮ್ಮ ʼಉತ್ತಮ ಪ್ರಜಾಕೀಯ ಪಕ್ಷʼ ದ ಮೂಲಕ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿರುವ ಖ್ಯಾತ ನಟ, ʻರಿಯಲ್ ಸ್ಟಾರ್ʼ ಉಪೇಂದ್ರ (Actor Upendra) ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (karnataka election 2023) ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲವೇ?
ಈ ಪ್ರಶ್ನೆಗೆ ಅವರು ʼಬುದ್ಧಿವಂತʼ ಉತ್ತರ ನೀಡಿದ್ದು, ತಮ್ಮ ಅಭಿಮಾನಿಗಳ ತಲೆಹಲ್ಲಿ ʻಹುಳʼ ಬಿಟ್ಟಿದ್ದಾರೆ. ರಾಜ್ಯ ರಾಜಕೀಯದಲ್ಲಿ ಚುನಾವಣಾ ಕಾವು ಏರುತ್ತಿರುವ ಈ ಹೊತ್ತಿನಲ್ಲಿ ಟ್ವೀಟ್ ಮಾಡಿರುವ ಪ್ರಜಾಕೀಯ ಪಕ್ಷ ಸಂಸ್ಥಾಪಕ ಉಪೇಂದ್ರ, ʻಉತ್ತಮ ಪ್ರಜಾಕೀಯ ಪಕ್ಷದಿಂದ ಅಧಿಕೃತವಾಗಿ ಅಭ್ಯರ್ಥಿಗಳ ಘೋಷಣೆ ಯಾವಾಗ?ʼ ಎಂಬ ಪ್ರಶ್ನೆಯನ್ನು ತಾವೇ ಕೇಳಿಕೊಂಡು, ತಾವೇ ಉತ್ತರ ನೀಡಿದ್ದಾರೆ.
ಮೇಲ್ನೋಟಕ್ಕೆ ಈ ಉತ್ತರ ನೋಡಿದರೆ ಈ ಬಾರಿ ʻಉತ್ತಮ ಪ್ರಜಾಕೀಯ ಪಕ್ಷʼ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂಬ ಅಭಿಪ್ರಾಯ ಮೂಡುತ್ತಿದೆ. ಆದರೆ ಅವರ ಉತ್ತರ ಹಿಂದೆಯೂ ಮತ್ತೇನೋ ಸಂದೇಶವಿರಬಹುದು ಎಂದು ಅವರ ಅಭಿಮಾನಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ.
ಅವರು ಉತ್ತರದಲ್ಲಿ ʻʻನಾಮಪತ್ರವನ್ನು ಹಿಂಪಡೆಯಲು ಕೊನೆಯ ದಿನಾಂಕ 24 ಏಪ್ರಿಲ್ 2023 ರ ನಂತರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳ ಮತ್ತು ಅವರ ಕ್ಷೇತ್ರಗಳ ಪಟ್ಟಿಯನ್ನು ಅಧಿಕೃತವಾಗಿ ಘೋಷಿಸಲಾಗುವುದುʼʼ ಎಂದು ಹೇಳಿರುವುದು ಇಲ್ಲದ ಅನುಮಾನಗಳಿಗೆ ಕಾರಣವಾಗಿದೆ.
ನಾಮ ಪತ್ರ ಹಿಂದಕ್ಕೆ ಪಡೆಯುವ ದಿನಾಂಕ ಮುಗಿದ ಮೇಲೇ ಅಭ್ಯರ್ಥಿಗಳ ಪಟ್ಟಿಯನ್ನು ಏಕೆ ಪ್ರಕಟಿಸಬೇಕು ಎಂಬ ಪ್ರಶ್ನೆ ಉಳಿಯುತ್ತದೆ. ಆದರೆ ಅವರು ಕಣದಲ್ಲಿ ಉಳಿಯುವ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವುದಾಗಿ ಹೀಗೆ ಹೇಳುತ್ತಿದ್ದಾರೆಯೇ? ಎಂಬ ಅನುಮಾನವೂ ಮೂಡುತ್ತಿದೆ.
ಉಪೇಂದ್ರ ಟ್ವೀಟ್‌ನಲ್ಲಿ ಹೇಳಿರುವುದೇನು?
ಸೂಪರ್ ಸ್ಟಾರ್ ಉಪೇಂದ್ರರ ಈ ಟ್ವೀಟ್‌ಗೆ ; ʻʻಸಾರ್, ಒಂದೇ ಸಾರಿ election ಆದ್ಮೇಲೆ… ಅಲ್ಲಲ್ಲ, results announce ಆದ್ಮೇಲೆ ಘೋಷಣೆ ಮಾಡಿ, ಬೇಜಾನ್ different ಆಗಿರುತ್ತೆ, ಜನ full ತಲೆ ಕೆಡುಸ್ಕೋತಾರೆ….ನಿಮ್ಮ ಫಿಲಂ ನೋಡೋ ಥರಾನೇ!ʼʼ ಎಂದು ಒಬ್ಬರು, ʻʻಅಷ್ಟೆ ಬೇಗ ಯಾಕೆ ಎಲೆಕ್ಷನ್ ಫಲಿತಾಂಶ ಬಂದ ಮೇಲೆ ಘೋಷಣೆ ಮಾಡಿದ್ರೆ ಇನ್ನೂ ಚೆನ್ನಾಗಿತ್ತುʼʼ ಎಂದು ಇನ್ನೊಬ್ಬರು ಪ್ರತಿಕ್ರಿಯೆ ಕೂಡ ನೀಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗುತ್ತಿದ್ದಂತೆಯೇ ಉಪೇಂದ್ರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಯೊಂದನ್ನು ಎತ್ತಿ ಸಂಚಲನ ಮೂಡಿಸಿದ್ದರು. ಈ ಬಗ್ಗೆ ಭಾರಿ ಪರ ಮತ್ತು ವಿರೋಧ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ನಡೆದಿದ್ದವು. “ಕರ್ನಾಟಕದಲ್ಲಿ ಮೇ 10, ಬುಧವಾರದಂದು ಒಂದೇ ಹಂತದ ಮತದಾನ ಮತ್ತು ಮೇ 13, ಶನಿವಾರ ಫಲಿತಾಂಶ ಪ್ರಕಟ. ಮತ ಎಣಿಕೆಗೆ ಎರಡು ದಿನ ಬೇಕೆ ?! ಏಕೆಂದು ಬಲ್ಲವರು ತಿಳಿಸುತ್ತೀರಾ?ʼʼ ಎಂದು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ : Actor Upendra: ನನಗೆ ಗೊತ್ತಿಲ್ಲ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ, ಅತಿ ಬುದ್ವಂತ್ರು! ಹೀಗೆ ಅಂದಿದ್ಯಾಕೆ ಉಪ್ಪಿ?