ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ನವ ದೆಹಲಿಯಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ) ಅಧಿಕಾರಿಗಳು ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಬೆಂಗಳೂರಿನಲ್ಲಿ ಕೆಪಿಸಿಸಿ ಆಯೋಜಿಸಿದ್ದ ಪ್ರತಿಭಟನೆ ವೇಳೆ ಚಿತ್ರ ನಟಿ ಭಾವನಾ ಸಹ ಭಾಗವಹಿಸಿದ್ದರು. ಆದರೆ ಅವರು ಕಾಂಗ್ರೆಸ್‌ಗೆ ಯಾವಾಗ, ಏಕೆ ವಾಪಸಾದರು ಎಂಬುದೇ ಅಲ್ಲಿ ಚರ್ಚೆ ನಡೆಯಿತು.
ಈ ಹಿಂದೆ ಭಾವನಾ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಬಾಲಭವನ ಅಧ್ಯಕ್ಷೆಯಾಗಿ ನೇಮಕ ಮಾಡಲಾಗಿತ್ತು. ಈ ಸ್ಥಾನದಲ್ಲಿ ಅನೇಕ ವರ್ಷ ಇದ್ದ ಭಾವನಾ, 2018ರ ವಿಧಾನಸಭೆ ಚುನಾವಣೆಗೂ ಮುನ್ನ ಪಕ್ಷ ಬದಲಾಯಿಸಿದ್ದರು.
ಅಂದು ರಾಜ್ಯ ಬಿಜೆಪಿ ಪ್ರಭಾರಿಯಾಗಿದ್ದ ಮುರಳೀಧರ ರಾವ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಆದರೆ ಎಲ್ಲಿಯೂ ಪಕ್ಷದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ನಂತರದ ದಿನಗಳಲ್ಲಿ ರಾಜಕೀಯವಾಗಿ ಭಾವನಾ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. 2021ರ ನವೆಂಬರ್ 16ರಂದು ಕಾಂಗ್ರೆಸ್ ಪಕ್ಷಕ್ಕೆ ವಾಪಸಾಗಿದ್ದರು. ರಾಜ್ಯದ ಯಾವ ನಾಯಕರೂ ಈ ಸಮಯದಲ್ಲಿ ಉಪಸ್ಥಿತರಿರಲಿಲ್ಲ. ನವದೆಹಲಿಯಲ್ಲಿ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ ಆಗಿದ್ದರು.
ಇದನ್ನೂ ಓದಿ | ದೆಹಲಿಯಲ್ಲಿ ಇ.ಡಿ. ವಿಚಾರಣೆ ವಿರೋಧಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ
ಇದನ್ನು ಖುದ್ದು ಸುರ್ಜೇವಾಲ ಟ್ವೀಟ್ ಮೂಲಕ ತಿಳಿಸಿದ್ದರು. ಕಾಂಗ್ರೆಸ್ ಮಾಜಿ ಕಾರ್ಯಕರ್ತೆ ಹಾಗೂ ಖ್ಯಾತ ನಟಿ ಭಾವನಾ ರಾಮಣ್ಣ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪ್ರತಿಯೊಬ್ಬರ ಸೇರ್ಪಡೆಯೂ ಪಕ್ಷವನ್ನು ಗಟ್ಟಿಗೊಳಿಸುತ್ತದೆ ಎಂದಿದ್ದರು.
ಮಂಗಳವಾರ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭಾವನಾ ಆಗಮಿಸಿದರು. ಈ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ತೆರಳಿದ್ದರು. ಶಿವಕುಮಾರ್ ಕುಳಿತಿದ್ದ ಕುರ್ಚಿಯ ಒಂದು ಕಡೆ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಇನ್ನೊಂದೆಡೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಕುಳಿತಿದ್ದರು. ಸಲೀಂ ಅಹ್ಮದ್ ಅವರನ್ನು ಮಾತನಾಡಿಸುತ್ತ ಭಾವನಾ ಖಾಲಿ ಕುರ್ಚಿಯಲ್ಲಿ ಕುಳಿತರು.
ಇದನ್ನು ಕಂಡು ಕೆರಳಿದ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ವೇದಿಕೆ ಮೇಲೆ ಆಗಮಿಸಿ, ಇದು ಶಿವಕುಮಾರ್ ಅವರ ಕುರ್ಚಿ ಎಂದರು. ಭಾವನಾ ತಕ್ಷಣ ಎದ್ದರಾದರೂ ಮಾತು ಮುಂದುವರಿಸಿದ ಕಾರ್ಯಕರ್ತೆ, ನೀವು ಬಿಜೆಪಿಯಲ್ಲಿದ್ದಿರಿ. ಈಗ ಇಲ್ಲಿಗೆ ಬಂದಿದ್ದೀರಿ ಎನ್ನುತ್ತ ದಬಾಯಿಸಿದರು. ಭಾವನಾ ಇದಕ್ಕೆ ಉತ್ತರ ನೀಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ವೇದಿಕೆಯ ಎರಡನೇ ಸಾಲಿಗೆ ತೆರಳಿ ಕೆಲಕಾಲ ಪ್ರತಿಭಟನೆಯಲ್ಲಿ ಭಾಗಿಯಾದರು.
ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಭಾವನಾ, ನಾನು ಸುರ್ಜೆವಾಲಾ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೆ. ಪತ್ರಿಕೆಗಳಲ್ಲೂ ಈ ಸುದ್ದಿ ಬಂದಿತ್ತು. ಆದರೆ ಅವರು ಸುದ್ದಿಯನ್ನು ಓದಿಲ್ಲ ಎನ್ನಿಸುತ್ತದೆ ಅದಕ್ಕಾಗಿ ಬಂದು ಪ್ರಶ್ನಿಸಿದರು. ಅವರು ಕೇಳಿದ್ದರಲ್ಲಿ ತಪ್ಪಿಲ್ಲ. ನಾನು ಒಂದು ಕಾರಣ ಇಟ್ಟುಕೊಂಡು ಬಿಜೆಪಿಗೆ ಹೋದೆ. ಆದರೆ ಅದು ತುಂಬ ಬಾಲಿಷ ಕಾರಣ ಎನ್ನಿಸಿತು. ಹಾಗಾಗಿ ಪಕ್ಷಕ್ಕೆ ವಾಪಸಾದೆ. ಮಹಾತ್ಮಾ ಗಾಂಧೀಜಿ, ನೆಹರೂ ಅವರ ಸಿದ್ಧಾಂತದಲ್ಲಿ ನಾನು ನಂಬಿಕೆ ಇಟ್ಟವಳು. ಕಾಂಗ್ರೆಸ್‌ನಲ್ಲೇ ಇರುತ್ತೇನೆ ಎಂದರು.