Site icon Vistara News

ಹೆರಿಗೆಗಾಗಿ ಹಳ್ಳಿಗೆ ಬಂದ ಪ್ಯಾಟೆ ಹುಡ್ಗಿ; ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಿಟ್ಟು ಸರ್ಕಾರಿ ಆಸ್ಪತ್ರೆಯಲ್ಲಿ ಡೆಲಿವರಿ

ಪೂರ್ಣಿಮಾ

ಮಂಡ್ಯ: ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಮೂಗು ಮುರಿಯುವ ಮಂದಿಯೇ ಹೆಚ್ಚು. ಎಷ್ಟೇ ಸೌಲಭ್ಯಗಳಿದ್ದರೂ ಜನರು ಅತ್ತ ಮುಖ ಮಾಡುವುದು ವಿರಳ. ದುಬಾರಿ ಎನಿಸಿದರೂ ಸರಿಯೇ ಖಾಸಗಿ ಆಸ್ಪತ್ರೆಗಳೇ ಬೇಕೆಂದು ಹೋಗುತ್ತಾರೆ. ಇದಕ್ಕೆ ಅಪವಾದ ಎನ್ನುವಂತೆ ಕಿರುತೆರೆ ನಟಿಯೊಬ್ಬರು ಬೆಂಗಳೂರಿನ ಖಾಸಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯವರೇ ಕೈಚೆಲ್ಲಿದ್ದ ಹೆರಿಗೆ ಶಸ್ತ್ರ ಚಿಕಿತ್ಸೆಗೆ ಮಂಡ್ಯದ ಹಳ್ಳಿಗಾಡಿನಲ್ಲಿರುವ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಳಗಾಗಿದ್ದಾರೆ. ಈಗ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

ಮದ್ದೂರು ಮೂಲದ ಕಿರುತೆರೆ ನಟಿ ಪೂರ್ಣಿಮಾ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆ ಬಿಟ್ಟು, ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಹೆರಿಗೆ ಶಸ್ತ್ರ ಚಿಕಿತ್ಸೆಗೆ ಒಳಗಾದವರು. ಮಂಡ್ಯ ತಾಲೂಕಿನ ಕೀಲಾರ ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಶಸ್ತ್ರ ಚಿಕಿತ್ಸೆಯನ್ನು ವೈದ್ಯ ಡಾ.ಎಚ್.ಅರ್ಜುನ್ ಕುಮಾರ್ ಯಶಸ್ವಿಯಾಗಿ ನೆರವೇರಿಸಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಿದ್ದ ಪೂರ್ಣಿಮಾ ಅವರು ಗರ್ಭಿಣಿಯಾದಾಗ ರಾಜಧಾನಿಯಲ್ಲೇ ಇರುವ ಖಾಸಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರಿಂದಲೇ ಸಲಹೆ ಮತ್ತು ಚಿಕಿತ್ಸೆ ಪಡೆದುಕೊಂಡಿದ್ದರು. ಹೆರಿಗೆ ದಿನ ಸಮೀಪಿಸಿದಾಗ ತಪಾಸಣೆ ನಡೆಸಿದ ವೈದ್ಯರು ಪೂರ್ಣಿಮಾ ಅವರಿಗೆ ಪ್ಲಸೆಂಟಾ ಡೌನ್ ಸಮಸ್ಯೆ ಇದೆ. ಶಸ್ತ್ರ ಚಿಕಿತ್ಸೆ ನಡೆಸಿಯೇ ಹೆರಿಗೆ ಮಾಡಿಸಬೇಕು, ಅದು ತುಂಬಾ ಕ್ಲಿಷ್ಟಕರ. ಕನಿಷ್ಠ ಒಂದು ತಿಂಗಳು ಮುಂಚೆಯೇ ಅಡ್ಮಿಟ್ ಮಾಡಬೇಕು ಎಂದು ಸೂಚಿಸಿದ್ದರಂತೆ. ಶಸ್ತ್ರ ಚಿಕಿತ್ಸೆಗೆ ಕನಿಷ್ಠ ಒಂದು ಲಕ್ಷ ರೂ. ವೆಚ್ಚ ತಗುಲುತ್ತದೆ ಎಂದೂ ಹೇಳಿ ಬಿಟ್ಟಿದ್ದರು.

ಇದನ್ನೂ ಓದಿ | ನಳನಳಿಸುವ ಆರೋಗ್ಯಕ್ಕಾಗಿ ಐದು ಸೂಪರ್‌ ಫುಡ್‌ಗಳು

ಅದಾದ ಮೇಲೆ ಪೂರ್ಣಿಮಾ ಇನ್ನೂ ಮೂರ್ನಾಲ್ಕು ವೈದ್ಯರ ಬಳಿ ತಪಾಸಣೆಗೆ ಹೋಗಿದ್ದರು. ಅಲ್ಲೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು ಹೇಳಿದ್ದನ್ನು ಕೇಳಿ ಬೇಸರಗೊಂಡಿದ್ದರು. ಕಡೆಗೆ, ಅವರು ಮಂಡ್ಯ ತಾಲೂಕಿನ ಈಚಗೆರೆ ಗ್ರಾಮದಲ್ಲಿರುವ ತನ್ನ ಸಂಬಂಧಿ ಸುಶೀಲಮ್ಮ ಎಂಬುವವರಿಗೆ ವಿಷಯ ಮುಟ್ಟಿಸಿದ್ದಾರೆ. ಕೀಲಾರದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ.ಅರ್ಜುನ್ ಕುಮಾರ್ ಅವರ ಕೈಗುಣ ಚೆನ್ನಾಗಿದೆ. ಅವರೊಬ್ಬ ಒಳ್ಳೆಯ ವೈದ್ಯರು, ಒಂದು ಬಾರಿ ಅವರಿಗೇ ತೋರಿಸೋಣ ಬಾ ಎಂದು ಪೂರ್ಣಿಮಾಗೆ ಸುಶೀಲಮ್ಮ ಸಲಹೆ ನೀಡಿದ್ದರು.

ಅದರಂತೆ ಪೂರ್ಣಿಮಾ ಕೀಲಾರಕ್ಕೆ ಬಂದು ಡಾ.ಅರ್ಜುನ್ ಕುಮಾರ್ ಅವರ ಬಳಿ ತಪಾಸಣೆ ಮಾಡಿಸಿಕೊಂಡು, ವೈದ್ಯಕೀಯ ಸಲಹೆ ಪಡೆದರು. ವೈದ್ಯರ ಸೂಚನೆಯಂತೆ ಹೆರಿಗೆ ದಿನ ಸಮೀಪಿಸಿದಾಗ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪೂರ್ಣಿಮಾ ದಾಖಲಾದರು. ಜೂ.13ರಂದು ಪೂರ್ಣಿಮಾ ಅವರಿಗೆ ವೈದ್ಯ ಡಾ.ಅರ್ಜುನ್ ಕುಮಾರ್ ಯಶಸ್ವಿ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ. ನಾಲ್ಕೇ ದಿನದಲ್ಲಿ ಗುಣಮುಖರಾದ ಪೂರ್ಣಿಮಾ ಮತ್ತು ಪುಟ್ಟ ಕಂದನನ್ನು ಡಿಸ್ಚಾರ್ಜ್ ಕೂಡ ಮಾಡಿದ್ದಾರೆ. ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯವರೇ ಇದೊಂದು ಸವಾಲಿನ ಶಸ್ತ್ರ ಚಿಕಿತ್ಸೆ. ತುಂಬಾ ಕ್ಲಿಷ್ಟಕರವೆಂದು ಕೈಚೆಲ್ಲುವ ಮಟ್ಟಕ್ಕೆ ಹೋಗಿದ್ದರು. ತಮಗೆ ಧೈರ್ಯ ತುಂಬಿ, ಅಂಥದ್ದೊಂದು ಶಸ್ತ್ರ ಚಿಕಿತ್ಸೆಯನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದ ವೈದ್ಯ ಡಾ.ಅರ್ಜುನ್ ಕುಮಾರ್ ಹಾಗೂ ಕೀಲಾರ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ಕಿರುತೆರೆ ನಟಿ ಪೂರ್ಣಿಮಾ ಮತ್ತವರ ಕುಟುಂಬದವರು ಕೃತಜ್ಞತೆ ಸಲ್ಲಿಸಿದ್ದಾರೆ.

ಯಾರು ಈ ಪೂರ್ಣಿಮಾ?
ಖಾಸಗಿ ವಾಹಿನಿಯಲ್ಲಿ 2011ರಲ್ಲಿ ಬಂದ ʻಪ್ಯಾಟೇ ಹುಡ್ಗೀರ್ ಹಳ್ಳಿ ಲೈಫು’ ರಿಯಾಲಿಟಿ ಶೋನಲ್ಲಿ ಪೂರ್ಣಿಮಾ ಭಾಗವಹಿಸಿದ್ದರು. ಅದಾದ ನಂತರ ತಂಗಾಳಿ, ಬದುಕು, ಅಕ್ಕ, ಮಗಳು ಜಾನಕಿ ಸೇರಿ ವಿವಿಧ ಧಾರಾವಾಹಿಗಳಲ್ಲೂ ನಟಿಸಿದ್ದಾರೆ.

ಇದನ್ನೂ ಓದಿ | video viral: ಆಸ್ಪತ್ರೆಯಿಂದ ಮಗನ ಶವ ಬಿಡುಗಡೆಗೆ ₹ 50,000 ಲಂಚ ಬೇಡಿಕೆ, ಭಿಕ್ಷೆ ಬೇಡುತ್ತಿರುವ ದಂಪತಿ

Exit mobile version