ದಾವಣಗೆರೆ: ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆಗೆ ಹುಬ್ಬಳ್ಳಿಯ ಸ್ಟಾರ್ ಹೋಟೆಲ್‌ನಲ್ಲಿ ಭದ್ರತಾ ವೈಫಲ್ಯವೇ ಕಾರಣವಾಗಿದೆ. ಇಂತಹ ದೊಡ್ಡ ಹೋಟೆಲ್‌ಗಲ್ಲಿ ಮೆಟಲ್ ಡಿಟೆಕ್ಟರ್ ಇಲ್ಲದೇ ಇರುವುದು ಗೊತ್ತಾಗಿದೆ. ಹೋಟೆಲ್‌ಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು, ಇಲ್ಲದಿದ್ದರೆ ಹೋಟೆಲ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ದೊಡ್ಡ ಹೋಟೆಲ್‌ಗಳಲ್ಲಿ ಭದ್ರತೆಗಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಂಡಿಲ್ಲ. ನಿಯಮಾವಳಿ ಪ್ರಕಾರ ದೊಡ್ಡ ಹೋಟೆಲ್‌ಗಳಲ್ಲಿ ಖಾಸಗಿ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ಅವರಿಗೆ ಸೂಕ್ತ ತರಬೇತಿ ನೀಡಬೇಕಾಗುತ್ತದೆ. ಒಂದು ವೇಳೆ ಈ ನಿಯಮಗಳನ್ನು ಅಳವಡಿಸಿಕೊಳ್ಳದೇ ಇದ್ದಾಗ ಅವಘಟಗಳು ಸಂಭವಿಸಿದರೆ ಭದ್ರತಾ ಸಂಸ್ಥೆಗಳು ಹಾಗೂ ಹೋಟೆಲ್‌ಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಅವರ ಪರವಾನಗಿಯನ್ನು ರದ್ದು ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಹೋಟೆಲ್ ಸಿಬ್ಬಂದಿಗೆ ತರಾಟೆ
ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣದ ತನಿಖೆ ಭಾಗವಾಗಿ ಹುಬ್ಬಳ್ಳಿಯ ಉಣಕಲ್ ಬಳಿಯ ಪ್ರೆಸಿಡೆಂಟ್ ಹೋಟೆಲ್ ಹಾಗೂ ವಿವಿಧ ಖಾಸಗಿ ಹೋಟೆಲ್‌ಗಳಿಗೆ ಎಡಿಜಿಪಿ ಅಲೋಕ್‌ಕುಮಾರ್ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರೆಸಿಡೆಂಟ್ ಹೋಟೆಲ್ ಸಿಬ್ಬಂದಿ ವಿರುದ್ಧ ಗರಂ ಆದ ಅಲೋಕ್‌ಕುಮಾರ್ ಅವರು, ಇಂತಹ ದೊಡ್ಡ ಹೊಟೆಲ್‌ನಲ್ಲಿ ಒಂದು ಮೆಟಲ್ ಡಿಟೆಕ್ಟರ್ ಇಟ್ಟುಕೊಳ್ಳಲು ಆಗುವುದಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿದ್ದರು.
ಇದನ್ನೂ ಓದಿ | ಚಂದ್ರಶೇಖರ ಗುರೂಜಿ ಕೊಲೆ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರಿಗೆ ಗೃಹ ಸಚಿವರಿಂದ ಪ್ರಶಂಸನಾ ಪತ್ರ